IT Raid| ಐಟಿ ದಾಳಿಯಲ್ಲಿ ಗುತ್ತಿಗೆದಾರರ 750 ಕೋಟಿ ಅಕ್ರಮ ಆಸ್ತಿ ಪತ್ತೆ!

By Kannadaprabha NewsFirst Published Oct 13, 2021, 7:24 AM IST
Highlights

* ತೆರಿಗೆ ವಂಚನೆ, 487 ಕೋಟಿ ರು. ಆಸ್ತಿ ಬಚ್ಚಿಟ್ಟಿದ್ದನ್ನು ಒಪ್ಪಿಕೊಂಡ ಕಂಟ್ರಾಕ್ಟರ್‌ಗಳು

* ಐಟಿ ದಾಳಿಯಲ್ಲಿ ಗುತ್ತಿಗೆದಾರರ 750 ಕೋಟಿ ಅಕ್ರಮ ಆಸ್ತಿ ಪತ್ತೆ

* ಅ.7ರಂದು ರಾಜ್ಯದ 47 ಕಡೆ ನಡೆದಿದ್ದ ಬೃಹತ್‌ ಐಟಿ ದಾಳಿಯ ವಿವರ ಬಹಿರಂಗ

ಬೆಂಗಳೂರು(ಅ.13): ತೆರಿಗೆ ವಂಚನೆ ಆರೋಪದ ಮೇಲೆ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಆಪ್ತ ಸಹಾಯಕ ಎಂ.ಆರ್‌.ಉಮೇಶ್‌(MR Umesh) ಸೇರಿದಂತೆ ಪ್ರಮುಖ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ(Income tax Department) ನಡೆಸಿದ ದಾಳಿ ವೇಳೆ ಒಟ್ಟು 750 ಕೋಟಿ ರು.ಗಳಷ್ಟು ಬೃಹತ್‌ ಅಕ್ರಮ ಆಸ್ತಿ ಪತ್ತೆಹಚ್ಚಲಾಗಿದೆ.

ಈ ಪೈಕಿ 487 ಕೋಟಿ ರು. ಅಘೋಷಿತ ಆಸ್ತಿಯಾಗಿದೆ. ವಂಚನೆ ಮಾಡಿರುವುದನ್ನು ಗುತ್ತಿಗೆದಾರರು(Contractors) ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ನೀರಾವರಿ ಮತ್ತು ಹೆದ್ದಾರಿ ಯೋಜನೆಗಳಲ್ಲಿ ಅವ್ಯವಹಾರ ನಡೆದಿದ್ದ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಮೂವರು ಪ್ರಮುಖ ಗುತ್ತಿಗೆದಾರರು ಮತ್ತು ಅವರಿಗೆ ಸೇರಿದ ಕಂಪನಿಗಳ ಮೇಲೆ ದಾಳಿ(IT Raid) ನಡೆಸಿ ಹಲವು ದಾಖಲೆಗಳನ್ನು ತೆರಿಗೆ ಇಲಾಖೆ ಪರಿಶೀಲನೆ ನಡೆಸಿತ್ತು. ಕರ್ನಾಟಕ(Karnataka) ಸೇರಿದಂತೆ ನಾಲ್ಕು ರಾಜ್ಯಗಳ 47 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಕೈಗೊಂಡಿದ್ದರು. ಕಾರ್ಯಾಚರಣೆ ವೇಳೆ ದಾಖಲೆ ಇಲ್ಲದ 4.69 ಕೋಟಿ ರು. ನಗದು, 8.67 ಕೋಟಿ ರು. ಮೌಲ್ಯದ ಚಿನ್ನಾಭರಣ, 29.83 ಲಕ್ಷ ರು. ಮೌಲ್ಯದ ಬೆಳ್ಳಿ, ದಾಖಲೆಗಳು, ಡಿಜಿಟಲ್‌ ಸಾಕ್ಷ್ಯಗಳು ಸೇರಿದಂತೆ ವಿವಿಧ ರೂಪದಲ್ಲಿರುವ ಸಾಕ್ಷಿಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆಯು ಮಾಹಿತಿ ನೀಡಿದೆ.

ನಕಲಿ ಕಾರ್ಮಿಕ ವೆಚ್ಚ, ನಕಲಿ ಉಪ-ಗುತ್ತಿಗೆ ಮಾಡಿರುವುದಕ್ಕೆ ಸಾಕ್ಷಿಗಳು ಲಭ್ಯವಾಗಿವೆ. ಉಪ ಗುತ್ತಿಗೆದಾರರು ನಕಲು ದಾಖಲೆ ಸೃಷ್ಟಿಮಾಡಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಸುಳ್ಳು ದಾಖಲೆಗಳ ಮೂಲಕ ಹಣದ ಮೂಲಗಳನ್ನು ಮರೆಮಾಚುವ ಕೆಲಸ ಮಾಡಿದ್ದಾರೆ. ಮೂವರು ಗುತ್ತಿಗೆದಾರರ ಪೈಕಿ ಒಬ್ಬ ಗುತ್ತಿಗೆದಾರ 40 ಮಂದಿಯ ಹೆಸರಲ್ಲಿ ಉಪಗುತ್ತಿಗೆ ವೆಚ್ಚ ಮಾಡಿದ್ದಾನೆ. ಇದಕ್ಕಾಗಿ ಸುಳ್ಳು ಲೆಕ್ಕಗಳನ್ನು ಸೃಷ್ಟಿಸಿದ್ದಾನೆ. ಕೆಲಸ ಮಾಡದೆಯೇ ಅಕ್ರಮವಾಗಿ(Illegal) ಹಣ ಸಂಪಾದನೆ ಮಾಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ವಂಚನೆಗಾಗಿ ಮಾಡಿರುವ ಅಕ್ರಮಗಳ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಗುತ್ತಿಗೆ ನಿರ್ಮಾಣ ವ್ಯವಹಾರಕ್ಕೆ ಸಂಬಂಧವಿಲ್ಲದ ನಕಲು ಉಪಗುತ್ತಿಗೆ ವೆಚ್ಚಗಳನ್ನು ದಾಖಲೆಯಲ್ಲಿ ನಮೂದಿಸಿ ತೆರಿಗೆಯನ್ನು(Tax) ವಂಚಿಸಲಾಗಿದೆ ಎಂದು ತಿಳಿಸಿದೆ.

ಮತ್ತೊಂದು ಗುತ್ತಿಗೆ ಕಂಪನಿಯು ಕಾರ್ಮಿಕರ ನಿರ್ವಹಣೆಗಾಗಿ 382 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿದೆ. ಅಸ್ತಿತ್ವದಲ್ಲಿಯೇ ಇಲ್ಲದ ಬೋಗಸ್‌ ಕಂಪನಿಯಿಂದ 105 ಕೋಟಿ ರು. ತೆಗೆದುಕೊಂಡು ಕಾರ್ಮಿಕ ನಿರ್ವಹಣೆಯ ವೆಚ್ಚದ ಬಗ್ಗೆ ದಾಖಲೆ ಸೃಷ್ಟಿಸಲಾಗಿದೆ. ಗುತ್ತಿಗೆದಾರರ ಮತ್ತು ಅವರ ಕಂಪನಿಯಿಂದ ಮಾಡಿರುವ ಅಕ್ರಮಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಐಟಿ ಇಲಾಖೆ ಹೇಳಿದೆ.

ಏನೇನು ಅಕ್ರಮ ಪತ್ತೆ?

- ನೀರಾವರಿ, ಹೆದ್ದಾರಿ ಯೋಜನೆಗಳ ಗುತ್ತಿಗೆಯಲ್ಲಿ ವ್ಯಾಪಕ ಅವ್ಯವಹಾರ ಬೆಳಕಿಗೆ

- ದಾಳಿಯ ವೇಳೆ 4.7 ಕೋಟಿ ರು. ನಗದು, 8.7 ಕೋಟಿ ರು. ಚಿನ್ನಾಭರಣ ಜಪ್ತಿ

- ಅವ್ಯವಹಾರದ ದಾಖಲೆಗಳು, ಡಿಜಿಟಲ್‌ ಸಾಕ್ಷ್ಯಗಳು ಕೂಡ ಅಧಿಕಾರಿಗಳ ವಶಕ್ಕೆ

- ಕಾರ್ಮಿಕರ ಹೆಸರಿನಲ್ಲಿ ನಕಲಿ ವೆಚ್ಚ, ಉಪ ಗುತ್ತಿಗೆಯಲ್ಲೂ ಅವ್ಯವಹಾರ ಬೆಳಕಿಗೆ

- ಒಬ್ಬ ಗುತ್ತಿಗೆದಾರನಿಂದ 40 ಉಪ ಗುತ್ತಿಗೆ; ಸುಳ್ಳು ಲೆಕ್ಕ ಸೃಷ್ಟಿಸಿ ಸರ್ಕಾರಕ್ಕೆ ಬಿಲ್‌

- ಕೆಲಸ ಮಾಡದೆ ಯೋಜನೆ ಹೆಸರಲ್ಲಿ ಅಕ್ರಮವಾಗಿ ಹಣ ಸಂಪಾದಿಸಿದ ಗುತ್ತಿಗೆದಾರರು

- ಅಸ್ತಿತ್ವದಲ್ಲಿಲ್ಲದ ಬೋಗಸ್‌ ಕಂಪನಿಯಿಂದ 105 ಕೋಟಿ ಪಡೆದು ಕಾರ್ಮಿಕರಿಗೆ ವೆಚ್ಚ

click me!