ಮಹಿಳೆಯರ ಉಚಿತ ಪ್ರಯಾಣ: ಶಕ್ತಿ ಯೋಜನೆ ಅನುದಾನ ಶೇ.71 ರಷ್ಟು ಖಾಲಿ

Published : Oct 28, 2023, 10:25 AM IST
ಮಹಿಳೆಯರ ಉಚಿತ ಪ್ರಯಾಣ: ಶಕ್ತಿ ಯೋಜನೆ ಅನುದಾನ ಶೇ.71 ರಷ್ಟು ಖಾಲಿ

ಸಾರಾಂಶ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ಸಾರಿಗೆ ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿ 5 ತಿಂಗಳಾಗುತ್ತಿದೆ. ಜೂನ್‌ 11ರಂದು ಆರಂಭವಾದ ಯೋಜನೆಯ ಲಾಭವನ್ನು 84.31 ಕೋಟಿ ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಅಲ್ಲದೆ, ಶಕ್ತಿ ಯೋಜನೆಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಅನುದಾನದ ಪೈಕಿ ಶೇ. 71.42ರಷ್ಟು ಹಣ ಈಗಾಗಲೆ ಖರ್ಚಾಗಿದೆ. 

ಬೆಂಗಳೂರು(ಅ.28):  ಶಕ್ತಿ ಯೋಜನೆಗೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದರ ಜತೆಗೆ ಯೋಜನೆಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್‌ ಮೌಲ್ಯವೂ ಏರಿಕೆಯಾಗುತ್ತಿದ್ದು, ಅದು ಸರ್ಕಾರಕ್ಕೆ ಆರ್ಥಿಕ ಹೊರೆ ತಂದೊಡ್ಡುತ್ತಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ಸಾರಿಗೆ ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿ 5 ತಿಂಗಳಾಗುತ್ತಿದೆ. ಜೂನ್‌ 11ರಂದು ಆರಂಭವಾದ ಯೋಜನೆಯ ಲಾಭವನ್ನು 84.31 ಕೋಟಿ ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಅಲ್ಲದೆ, ಶಕ್ತಿ ಯೋಜನೆಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಅನುದಾನದ ಪೈಕಿ ಶೇ. 71.42ರಷ್ಟು ಹಣ ಈಗಾಗಲೆ ಖರ್ಚಾಗಿದೆ. ಹೀಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ಉಳಿದಿರುವ 5 ತಿಂಗಳಲ್ಲಿ ಹೆಚ್ಚುವರಿ ಅನುದಾನದ ಅವಶ್ಯಕತೆಯಿದ್ದು, ಅದಕ್ಕಾಗಿ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಬೇಕಾದ ಅನಿರ್ವಾಯತೆ ಸಾರಿಗೆ ಇಲಾಖೆಗೆ ಎದುರಾಗಲಿದೆ.

ಶಕ್ತಿ ಯೋಜನೆಯ ಎಫೆಕ್ಟ್: ಬಸ್ ನಿಲ್ದಾಣ ಬಟ್ಟೆ ಒಣಗಿಸುವ ತಾಣವನ್ನಾಗಿ ಪರಿವರ್ತನೆ

2 ಸಾವಿರ ಕೋಟಿ ರು. ಖರ್ಚು:

ಶಕ್ತಿ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ 2,800 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಅದರಲ್ಲಿ ಅಕ್ಟೋಬರ್‌ ತಿಂಗಳ ಅಂತ್ಯದ ವೇಳೆಗೆ 2 ಸಾವಿರ ಕೋಟಿ ರು. ಮೊತ್ತದ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಅಷ್ಟು ಮೊತ್ತವನ್ನು ಆರ್ಥಿಕ ಇಲಾಖೆ ನಾಲ್ಕೂ ಸಾರಿಗೆ ನಿಗಮಗಳಿಗೆ ನೀಡಬೇಕಿದೆ. ಜೂನ್‌ ತಿಂಗಳು ಹೊರತುಪಡಿಸಿ ಉಳಿದ ನಾಲ್ಕು ತಿಂಗಳಲ್ಲಿ ಸರಾಸರಿ 440 ಕೋಟಿ ರು. ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗಿದೆ.
ಹೀಗಾಗಿ ಸದ್ಯ ಸರ್ಕಾರ ನಿಗದಿ ಮಾಡಿರುವ ಅನುದಾನದ ಪೈಕಿ 800 ಕೋಟಿ ರು. ಮಾತ್ರ ಉಳಿದಿದ್ದು, ಮುಂದಿನ 5 ತಿಂಗಳ ಅವಧಿಗಾಗಿ ಕನಿಷ್ಠ 1 ಸಾವಿರ ಕೋಟಿ ರು. ಅವಶ್ಯಕತೆ ಬೀಳಲಿದೆ. ಹೀಗಾಗಿ ಡಿಸೆಂಬರ್‌ನಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಸಾರಿಗೆ ಇಲಾಖೆಯಿಂದ ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.

ಮಹಿಳೆಯರ ಫ್ರೀ ಬಸ್‌ ಪ್ರಯಾಣಕ್ಕೆ 100 ದಿನ: 62 ಕೋಟಿ ಪ್ರಯಾಣಿಕರು, ಟಿಕೆಟ್‌ ಮಾರಾಟವೆಷ್ಟು?

ಶೇ.68 ಹಣ ಬಿಡುಗಡೆ

ಜೂನ್‌ನಿಂದ ಸೆಪ್ಟೆಂಬರ್‌ ತಿಂಗಳವರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಂದ 1,603.30 ಕೋಟಿ ರು. ಮೌಲ್ಯದ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಆಮೊತ್ತದಲ್ಲಿ ಈವರೆಗೆ ಆರ್ಥಿಕ ಇಲಾಖೆ ಶೇ. 68ರಷ್ಟು ಹಣವನ್ನು ಮಾತ್ರ ನಿಗಮಗಳಿಗೆ ನೀಡಿದೆ. ಉಳಿದ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ಅಧಿಕಾರಿಗಳು ಸಾರಿಗೆ ನಿಗಮಗಳು ಸಲ್ಲಿಸಿದ ದಾಖಲೆಗಳ ಪರಿಶೀಲಿಸುತ್ತಿದ್ದಾರೆ. ಅದು ಪೂರ್ಣಗೊಂಡ ನಂತರ ಬಾಕಿ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಶಕ್ತಿ ಯೋಜನೆ ಅಡಿಯಲ್ಲಿ ಈವರೆಗೆ 2 ಸಾವಿರ ಕೋಟಿ ರು. ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಹೀಗಾಗಿ ಬಜೆಟ್‌ನಲ್ಲ ಮೀಸಲಿಟ್ಟ 2,800 ಕೋಟಿ ರು. ಹಣ ಸಾಕಾಗುವುದಿಲ್ಲ. ಆದ್ದರಿಂದ, ಹೆಚ್ಚುವರಿಯಾಗಿ 1 ಸಾವಿರ ಕೋಟಿ ರು. ಅನುದಾನ ನೀಡುವಂತೆ ಡಿಸೆಂಬರ್‌ನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ