ಕಾಲಮಿತಿಯಲ್ಲಿ ‘ಜಲಜೀವನ ಮಿಷನ್’ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕೀತು
ಬೆಂಗಳೂರು(ಆ.06): ಕೊಳಾಯಿ ಮೂಲಕ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸುವ ‘ಜಲಜೀವನ್ ಮಿಷನ್’ ಯೋಜನೆ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಈ ಯೋಜನೆಯನ್ನು ನಿಗದಿತ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ವಿಶೇಷ ಆಸಕ್ತಿ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ‘ದಿಶಾ’ದಲ್ಲಿ ಮಾತನಾಡಿದ ಅವರು, ಯೋಜನೆಯಡಿ ಕಳೆದ ವರ್ಷ 19 ಲಕ್ಷ ಮನೆಗಳಿಗೆ ಕೊಳಾಯಿ ಸಂಪರ್ಕ ನೀಡಲಾಗಿದೆ. ಪ್ರಸ್ತುತ ಪ್ರತಿ ದಿನ ಸರಾಸರಿ 7 ಸಾವಿರ ಮನೆಗೆ ಸಂಪರ್ಕ ನೀಡಲಾಗುತ್ತಿದೆ. ಅನುಮೋದನೆಯಾದ ಕಾಮಗಾರಿಗಳಿಗೆ ತ್ವರಿತವಾಗಿ ಕಾರ್ಯಾದೇಶ ನೀಡಬೇಕು, ಕಾರ್ಯಾದೇಶ ನೀಡಿದ ಕಾಮಗಾರಿಗಳು ಪ್ರಾರಂಭಗೊಳಿಸುವುದನ್ನು ಖಾತರಿ ಪಡಿಸಬೇಕು ಎಂದು ತಿಳಿಸಿದರು.
ಕೆಲವು ಯೋಜನೆಗಳಲ್ಲಿ ನಿರೀಕ್ಷಿತ ಗುರಿ ತಲುಪಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಒಟ್ಟಾರೆ ಸಾಧನೆ ಉತ್ತಮವಾಗಿದ್ದರೂ, ಕೆಲವು ಜಿಲ್ಲೆಗಳ ಸಾಧನೆ ಕಡಿಮೆ ಇದೆ. ಇದನ್ನು ಸರಿ ಪಡಿಸಿ ಈ ವರ್ಷದ ಗುರಿಯನ್ನು ನಿಗದಿತ ಅವಧಿಯಲ್ಲಿ ಸಾಧಿಸಬೇಕು. ಸದಸ್ಯರು ಕ್ಷೇತ್ರ ಭೇಟಿ ನೀಡಲು ವ್ಯವಸ್ಥೆ ಮಾಡಿ ವರದಿ ಸಲ್ಲಿಸಬೇಕು. ಪ್ರತಿ ಜಿಲ್ಲೆಯಲ್ಲೂ ಮೂರು ತಿಂಗಳಿಗೊಮ್ಮೆ ದಿಶಾ ಸಮಿತಿ ಸಭೆ ಕಡ್ಡಾಯವಾಗಿ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಕುಡಿಯುವ ನೀರಿನ ಯೋಜನೆಗೆ 1810 ಕೋಟಿ: ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ
ವಿಮಾ ಕ್ಲೇಮು ಇತ್ಯರ್ಥಪಡಿಸಿ:
ಐಟಿಐ, ಜಿಟಿಟಿಸಿ, ಡಿಪ್ಲೊಮಾ ಕಾಲೇಜುಗಳು ವರ್ಷದಲ್ಲಿ ಎರಡು ಸಲ ಮೂರು ತಿಂಗಳ ಕೋರ್ಸ್ ಆಯೋಜಿಸಬೇಕು. ಇದಕ್ಕೆ ಗುರಿ ನಿಗದಿ ಪಡಿಸಬೇಕು. ಫಸಲ… ಬಿಮಾ ಯೋಜನೆಯಲ್ಲಿ ವಿಮಾ ಕಂಪನಿಗಳ ನ್ಯೂನತೆ ಸರಿಪಡಿಸಲು ಜಿಲ್ಲಾಧಿಕಾರಿಗಳು ಸಭೆ ನಡೆಸಿ ಕ್ಲೇಮುಗಳು ಬಾಕಿ ಇದ್ದರೆ ಕೂಡಲೇ ಇತ್ಯರ್ಥಪಡಿಸಬೇಕು. ಯಾದಗಿರಿ, ರಾಯಚೂರು, ಬೀದರ್‌ನಲ್ಲಿ ಅಪೌಷ್ಟಿಕತೆ ನಿವಾರಣೆಗೆ ಕೇಂದ್ರ ಸರ್ಕಾರದ ಯೋಜನೆಯೊಂದಿಗೆ, ರಾಜ್ಯ ಸರ್ಕಾರದಿಂದಲೂ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ. ಈ ಕುರಿತು ಎಲ್ಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿ ಎಂದು ಬಸವರಾಜ ಬೊಮ್ಮಾಯಿ ಸೂಚಿಸಿದರು.
ಸಂಸದೆ ಸುಮಲತಾ ಅಂಬರೀಷ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.