ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದಲ್ಲಿರುವುದು ಕೇವಲ 3 ಟಿಎಂಸಿ ನೀರು ಮಾತ್ರ. ಅದೂ ಖಾಲಿಯಾದರೆ ಕುಡಿಯುವುದಕ್ಕೂ ನೀರು ಸಿಗದಂತಹ ಗಂಭೀರ ಪರಿಸ್ಥಿತಿ ಎದುರಾಗಲಿದೆ. ಜಲಕ್ಷಾಮದ ಕರಾಳ ಛಾಯೆ ಎಲ್ಲೆಡೆ ಆವರಿಸಲಾರಂಭಿಸಿದೆ.
ಮಂಡ್ಯ (ಜು.04): ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆ ಕೈಕೊಟ್ಟಿದೆ. ಮುಂಗಾರು ಮಳೆಯೂ ನಿರೀಕ್ಷಿತ ರೀತಿಯಲ್ಲಿ ಬೀಳುತ್ತಿಲ್ಲ. ಮಳೆಯಿಲ್ಲದೆ ಅನ್ನದಾತನ ಬದುಕು ದುಸ್ತರವಾಗಿದೆ. ಜೂನ್-ಜುಲೈ ತಿಂಗಳಲ್ಲಿ ಗರಿಗೆದರುತ್ತಿದ್ದ ಕೃಷಿ ಚಟುವಟಿಕೆ ನೀರಸವಾಗಿದೆ. ಬಿತ್ತನೆ ಚಟುವಟಿಕೆ ಕುಂಠಿತಗೊಂಡಿದೆ. ರೈತರ ಮೊಗದಲ್ಲಿ ಮಂದಹಾಸವಿಲ್ಲ. ನೀರಿಲ್ಲದಿರುವ ಸಂಕಷ್ಟ ಪರಿಸ್ಥಿತಿಯಲ್ಲಿ ಮುಂಗಾರು ಬೆಳೆ ಬೆಳೆಯಲಾಗುವುದೇ ಎಂಬ ಆತಂಕದಲ್ಲಿ ರೈತರಿದ್ದಾರೆ.
ಬರಿದಾಗುತ್ತಿರುವ ಕೆಆರ್‌ಎಸ್: ಕೇರಳದ ವಯನಾಡು ಹಾಗೂ ಕೊಡಗಿನಲ್ಲಿ ಮುಂಗಾರು ದುರ್ಬಲವಾಗಿರುವುದರಿಂದ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದೆ. ಕೆಆರ್‌ಎಸ್‌ನ ಗರಿಷ್ಠ ಮಟ್ಟ124.80 ಅಡಿ ಇದ್ದು, ಹಾಲಿ ಜಲಾಶಯದ ನೀರಿನ ಮಟ್ಟ78.22 ಅಡಿಗೆ ಕುಸಿದಿದೆ. 859 ಕ್ಯುಸೆಕ್ ಪ್ರಮಾಣದಷ್ಟು ಒಳಹರಿವಿದ್ದು, ಅಣೆಕಟ್ಟೆಯಿಂದ 309 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 10.023 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 108.82 ಅಡಿ ನೀರು ದಾಖಲಾಗಿತ್ತು. ಅಂದು ಅಣೆಕಟ್ಟೆಗೆ 1168 ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, 1218ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಅಂದು ಜಲಾಶಯದಲ್ಲಿ 30.551 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
undefined
ರಾಜಕಾರಣದಲ್ಲಿ ಸೇವಾ ಮನೋಭಾವನೆ ಕಣ್ಮರೆ: ಸಂತೋಷ್ ಹೆಗ್ಡೆ ಆತಂಕ
ಬಳಕೆಗೆ ಸಿಗೋದು 3 ಟಿಎಂಸಿ ಮಾತ್ರ: 49 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಕೆಆರ್‌ಎಸ್ ಜಲಾಶಯದಲ್ಲಿ ಕೇವಲ 10ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಈ 10 ಟಿಎಂಸಿ ನೀರಿನಲ್ಲಿ ಬಳಕೆಗೆ ಸಿಗುವುದು ಕೇವಲ 3 ಟಿಎಂಸಿ ನೀರು ಮಾತ್ರ. ಅಣೆಕಟ್ಟೆಯ ಸುರಕ್ಷತೆ ಹಾಗೂ ಜಲಚರಗಳ ರಕ್ಷಣೆಗಾಗಿ 7 ಟಿಎಂಸಿ ನೀರನ್ನು ಡೆಡ್ ಸ್ಟೋರೇಜ್ ಎಂದು ಪರಿಗಣಿಸಲಾಗಿದೆ. ಹಾಲಿ ಕೆಆರ್‌ಸ್ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ನೀರಿಗೆ ಬಳಸುವುದಕ್ಕೆ ಮೀಸಲಿಡಲಾಗಿದೆ. ಜಲಾಶಯದಲ್ಲಿ 60 ಅಡಿಯವರೆಗೆ ಕುಡಿಯುವ ನೀರನ್ನು ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ. ಅಲ್ಲಿಂದ ಮುಂದಕ್ಕೆ ನೀರನ್ನು ತರುವುದು ದುಸ್ಸಾಧ್ಯವಾಗಲಿದೆ. 2013ರಲ್ಲಿ ಭೀಕರ ಜಲಕ್ಷಾಮ ಎದುರಾಗಿ ಜಲಾಶಯದ ನೀರಿನ ಮಟ್ಟ62.92 ಅಡಿಗೆ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಿತ್ತನೆಗೆ ಸಿದ್ಧತೆ: ಮುಂಗಾರು ಮಳೆಯಾಗುವ ಆಶಾಭಾವನೆಯಲ್ಲಿರುವ ರೈತರು ಬಿತ್ತನೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿಟ್ಟುಕೊಂಡು ಮಳೆಯನ್ನೇ ಎದುರು ನೋಡುತ್ತಿದ್ದಾರೆ. ಮೋಡಗಳು ಆಗಸದಲ್ಲಿ ಮೂಡಿ ರೈತರಲ್ಲಿ ನಿತ್ಯ ಮಳೆಯಾಗುವ ನಿರೀಕ್ಷೆಯನ್ನು ಹುಟ್ಟಿಹಾಕುತ್ತಿವೆಯಾದರೂ ಸ್ವಲ್ಪ ಸಮಯದಲ್ಲೇ ಚದುರಿಹೋಗಿ ನಿರಾಸೆ ಮೂಡಿಸುತ್ತಿವೆ. ಜಿಲ್ಲೆಯಷ್ಟೇ ಅಲ್ಲದೆ ಕಾವೇರಿ ಉಗಮ ಸ್ಥಾನದಲ್ಲೂ ಮಳೆಯಾಗದಿರುವುದು ರೈತರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.
ನೆಕ್ಕುಂದಿ ಕೆರೆ ಅವ್ಯವಸ್ಥೆ: ಮೀನುಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವ ಸುಧಾಕರ್ ಗರಂ
ಸದ್ಯದ ಪರಿಸ್ಥಿತಿಯಲ್ಲಿ ಮಳೆಯನ್ನು ನೋಡಿಕೊಂಡು ರೈತರು ಬಿತ್ತನೆಯಲ್ಲಿ ತೊಡಗುವುದು ಉತ್ತಮ. ಈ ಬಾರಿ ಕೃಷಿ ಚಟುವಟಿಕೆಗಿರಲಿ ಕುಡಿಯುವ ನೀರು ಕೊಡುವುದಕ್ಕೂ ಸಾಧ್ಯವಾಗದ ಸಂಕಷ್ಟಪರಿಸ್ಥಿತಿ ಎದುರಿಸುತ್ತಿದ್ದೇವೆ. ಡ್ಯಾಂನಲ್ಲಿ 10 ಟಿಎಂಸಿ ನೀರಿದ್ದರೂ ಬಳಕೆಗೆ ಸಿಗೋದು 3 ಟಿಎಂಸಿ ಮಾತ್ರ. ಸದ್ಯದಲ್ಲಂತೂ ಕೃಷಿ ಚಟುವಟಿಕೆಗೆ ನೀರು ಹರಿಸಲು ಸಾಧ್ಯವೇ ಇಲ್ಲ.
-ಆನಂದ್, ಕೆಆರ್‌ಎಸ್ ಅಧೀಕ್ಷಕ ಇಂಜಿನಿಯರ್