ರಾಜ್ಯದಲ್ಲಿ ನಿನ್ನೆ ದಾಖಲೆಯ 63 ಕೇಸು| ಮತ್ತೆ ಕೊರೋನಾ ಮಹಾಸ್ಫೋಟ, 1ಸಾವಿರದತ್ತ ಸೋಂಕಿತರ ಸಂಖ್ಯೆ| - ಮೊದಲ ಬಾರಿಗೆ ಯಾದಗಿರಿ, ಕೋಲಾರ, ಹಾಸನಕ್ಕೂ ಕೊರೋನಾ ವೈರಸ್| ಕೋಲಾರ, ಹಾಸನದಲ್ಲಿ ತಲಾ 5, ಯಾದಗಿರಿಯಲ್ಲಿ ಇಬ್ಬರಿಗೆ ಸೋಂಕು| ಬಾಗಲಕೋಟೆ, ದಾವಣಗೆರೆ, ಧಾರವಾಡದಲ್ಲಿ ತೀವ್ರ ಹೆಚ್ಚಳ| ಎಲ್ಲರೂ ಗುಣಮುಖರಾಗಿದ್ದ ಗದಗಕ್ಕೂ ಮತ್ತೆ ವೈರಸ್| 1 ಸಾವಿರದತ್ತ ಸೋಂಕಿತರ ಸಂಖ್ಯೆ| ಒಟ್ಟು ಸೋಂಕಿತರ ಸಂಖ್ಯೆ 925| ಗುಣಮುಖ ಆದವರು 433
ಬೆಂಗಳೂರು(ಮೇ.13): ರಾಜ್ಯದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿರುವ ಕೊರೋನಾ ಸೋಂಕು ಸಾವಿರ ಸಂಖ್ಯೆ ಮುಟ್ಟುವತ್ತ ಸಾಗಿದ್ದು, ಆತಂಕ ಹೆಚ್ಚಿಸಿದೆ. ಮಂಗಳವಾರ ಒಂದೇ ದಿನ 63 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ.
ಒಂದೇ ದಿನದಲ್ಲಿ ಈ ಪ್ರಮಾಣದಲ್ಲಿ ಸೋಂಕು ತಗಲಿರುವುದು ಕೂಡ ಹೊಸ ದಾಖಲೆ. ಒಂದೇ ದಿನ ಗರಿಷ್ಠ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿದ್ದು ಮೇ 10ರಂದು. ಅಂದು 57 ಪ್ರಕರಣಗಳು ಪತ್ತೆಯಾಗಿದ್ದವು. ಇನ್ನು ಕಳೆದ ಐದು ದಿನಗಳಿಂದ (ಸೋಮವಾರ ಹೊರತುಪಡಿಸಿ) ಸತತವಾಗಿ ಅರ್ಧದಶಕಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಇದೇ ಟ್ರೆಂಡ್ ಮುಂದುವರೆಯುವ ಭೀತಿ ಹುಟ್ಟಿಸಿದೆ.
undefined
‘ಹಸಿರಾ’ಗಿದ್ದ 3 ಜಿಲ್ಲೆಗಳಿಗೀಗ ಕೊರೋನಾ ಕೆಸರು!
ಕೆಲ ದಿನಗಳಿಂದ ನಿತ್ಯ ಒಂದೊಂದು ಹಸಿರು ವಲಯದ ಜಿಲ್ಲೆಗಳಿಗೆ ಕೋವಿಡ್ 19 ತನ್ನ ಕಬಂಧ ಬಾಹು ಚಾಚುತ್ತಿದೆ. ಚಿತ್ರದುರ್ಗ, ಶಿವಮೊಗ್ಗದ ಬಳಿಕ ಮಂಗಳವಾರ ಹಸಿರು ವಲಯಗಳಾಗಿದ್ದ ಯಾದಗಿರಿ, ಕೋಲಾರ, ಹಾಸನಕ್ಕೂ ಹಬ್ಬಿದೆ. ಚೆನ್ನೈ ಮತ್ತು ಒಡಿಶಾ ಪ್ರವಾಸದ ಹಿನ್ನೆಲೆಯ ಮೂವರು ಸೇರಿ ಜಿಲ್ಲೆಯಲ್ಲಿ ಒಟ್ಟು ಐದು ಜನರಿಗೆ ಸೋಂಕು ದೃಢಪಟ್ಟಿದೆ. ಇಬ್ಬರಿಗೆ ಸೋಂಕು ತಗುಲಿದ ಮೂಲ ಪತ್ತೆ ಹಚ್ಚಲಾಗುತ್ತಿದೆ.
32 ತಬ್ಲಿಘಿ ಸೋಂಕು:
ಹೊಸ ಸೋಂಕಿತರ ಪೈಕಿ ಬಾಲಗಕೋಟೆಯ 15 ಪ್ರಕರಣಗಳಲ್ಲಿ 14 ಮಂದಿ, ದಾವಣಗೆರೆಯ 12 ಪ್ರಕರಣಗಳಲ್ಲಿ 6 ಜನ, ಧಾರವಾಡದ 9, ಯಾದಗಿರಿಯ ಇಬ್ಬರು ಮತ್ತು ಗದಗದ ಒಬ್ಬ ವ್ಯಕ್ತಿ ಸೇರಿ ಒಟ್ಟು 32 ಸೋಂಕಿತರು ಇತ್ತೀಚೆಗೆ ಗುಜರಾತ್‌ನಿಂದ ಬಂದಿದ್ದ ತಬ್ಲೀಘಿಗಳಾಗಿದ್ದಾರೆ. ಬಾಗಲಕೋಟೆಯ ಉಳಿದ ಒಂದು ಪ್ರಕರಣ ಇನ್‌ಫ್ಲುಯೆಂಜಾ ಜ್ವರದಿಂದ, ದಾವಣಗೆರೆಯ ಇತರೆ ಆರು ಜನರಿಗೆ ಪಿ.695 ಸಂಖ್ಯೆಯ ರೋಗಿಯಿಂದ, ಗದಗದ ಇನ್ನಿಬ್ಬರಿಗೆ ಪಿ.514 ಸಂಖ್ಯೆಯ ರೋಗಿಯಿಂದ ಸೋಂಕು ದೃಢಪಟ್ಟಿದೆ.
ಮುಂಬೈ ಪ್ರವಾಸದ ಹಿನ್ನೆಲೆಯಲ್ಲಿ ಹಾಸನದ ಐವರಿಗೆ, ಮಂಡ್ಯದ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಪಿ.454 ಸೋಂಕಿತನ ಸಂಪರ್ಕದ ಮೂವರು ಸೇರಿ ಒಟ್ಟು ನಾಲ್ವರಿಗೆ (ಒಂದು ಪ್ರಕರಣದಲ್ಲಿ ಸಂಪರ್ಕ ಪತ್ತೆಯಾಗಿಲ್ಲ), ದಕ್ಷಿಣ ಕನ್ನಡದಲ್ಲಿ ಪಿ.507 ಸೋಂಕಿತನ ಸಂಪರ್ಕದ ಇಬ್ಬರಿಗೆ, ಬೀದರ್‌ನಲ್ಲಿ ಕ್ವಾರಂಟೈನ್ ಪ್ರದೇಶದ ಸಂಪರ್ಕದಿಂದ ಇಬ್ಬರಿಗೆ ಸೋಂಕು ಹರಡಿದೆ. ಉಳಿದಂತೆ ಚಿಕ್ಕಬಳ್ಳಾಪುರ, ಕಲಬುರಗಿಯಲ್ಲಿ ತಲಾ ಒಬ್ಬರಿಗೆ ಸೋಂಕಿತರ ಸಂಪರ್ಕದಿಂದ ಕೋವಿಡ್ ತಗುಲಿದೆ. ಬಳ್ಳಾರಿಯಲ್ಲೂ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ಮೂಲ ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೊರೋನಾ ನಿವಾರಣೆಗೆ, 4 ಆಯುರ್ವೇದ ಔಷಧಗಳ ಕ್ಲಿನಿಕಲ್ ಪ್ರಯೋಗ!
433 ಜನ ಗುಣಮುಖ:
ರಾಜ್ಯದಲ್ಲಿ ಇದುವರೆಗೂ 1,16,533 ಜನರನ್ನು ಕೋವಿಡ್ 19 ಪರೀಕ್ಷೆಗೊಳಪಡಿಸಿದ್ದು 925 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಮಂಗಳವಾರ ಬಿಡುಗಡೆಯಾದ ಏಳು ಜನರು ಸೇರಿ ಒಟ್ಟು 433 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದವರಲ್ಲಿ 449 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಆತ್ಮಹತ್ಯೆ ಮಾಡಿಕೊಂಡ ಸೋಂಕಿತ ಸೇರಿ 31 ಜನ ಸೋಂಕಿತರು ಮೃತಪಟ್ಟಿದ್ದಾರೆ.
ಹಾಸನಕ್ಕೆ ಮುಂಬೈ ಕಂಟಕ, ಕೋಲಾರಕ್ಕೆ ಒಡಿಶಾ, ಚೆನ್ನೈ ಪೆಟ್ಟು!
ಬೆಂಗಳೂರು: ಹಸಿರುವಲಯದಲ್ಲಿದ್ದ ಹಾಸನದಲ್ಲಿ ಐವರಿಗೆ ಕೊರೋನಾ ದೃಢಪಟ್ಟಿದೆ. ಇವರಿಗೆಲ್ಲಾ ಮುಂಬೈ ಪ್ರಯಾಣದ ನಂಟಿದೆ. ಹಾಗೆಯೇ ಕೋಲಾರದಲ್ಲಿ ಐವರಿಗೆ ಸೋಂಕು ತಗುಲಿದೆ. ಇವರಲ್ಲಿ ಮೂವರು ಒಡಿಶಾ ಮತ್ತು ಚೆನ್ನೈಗೆ ಹೋಗಿ ಬಂದಿದ್ದರಿಂದ ಸೋಂಕು ತಗುಲಿದೆ.
ಕೊರೋನಾ ನಿವಾರಣೆಗೆ, 4 ಆಯುರ್ವೇದ ಔಷಧಗಳ ಕ್ಲಿನಿಕಲ್ ಪ್ರಯೋಗ!
ಈಗ ರಾಜ್ಯದಲ್ಲಿ ಕೊರೋನಾ ಮುಕ್ತ ಜಿಲ್ಲೆ 5 ಮಾತ್ರ!
ಬೆಂಗಳೂರು: ಮಹಾಮಾರಿ ಕೊರೋನಾ ಮೇ 4ರ ಲಾಕ್‌ಡೌನ್ ಸಡಿಲಿಕೆ ಬಳಿಕ ಕೊರೋನಾ ಮುಕ್ತ ಜಿಲ್ಲೆಗಳ ಸಂಖ್ಯೆ ಐದಕ್ಕೆ ಇಳಿದೆ.
ಇತ್ತೀಚೆಗೆ ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಗೆ ವ್ಯಾಪಿಸಿದ್ದ ಸೋಂಕು ಮಂಗಳವಾರ ಯಾದಗಿರಿ, ಕೋಲಾರ, ಹಾಸನ ಜಿಲ್ಲೆಗೂ ವ್ಯಾಪಿಸಿದೆ. ಸದ್ಯ ಚಾಮರಾಮನಗರ, ಕೊಪ್ಪಳ, ಚಿಕ್ಕಮಗಳೂರು, ರಾಯಚೂರು ಮತ್ತು ರಾಮನಗರ ಜಿಲ್ಲೆಗಳು ಮಾತ್ರವೇ ಇದುವರೆಗೂ ಒಂದೂ ಕೊರೋನ ಸೋಂಕು ಪತ್ತೆಯಾಗದ ಜಿಲ್ಲೆಗಳಾಗಿ ಉಳಿದಿವೆ.