6 ಲಕ್ಷ ಹೆಕ್ಟೇರ್ ಅರ​ಣ್ಯ ಕಂದಾಯ ಇಲಾಖೆಗೆ ವಾಪಸ್

By Kannadaprabha NewsFirst Published Sep 23, 2020, 8:21 AM IST
Highlights

ರಾಜ್ಯದಾದ್ಯಂತ ಇರುವ ಅರಣ್ಯ ಪ್ರದೇಶವನ್ನು ವಾಪಸ್ ಕಂದಾಯ ಇಲಾಖೆಗೆ ವಾಪಸ್ ನೀಡಲು ಅರಣ್ಯ ಇಲಾಖೆ ಒಪ್ಪಿದೆ.

ವಿಧಾನಸಭೆ (ಸೆ.23): ಕರಾವಳಿ ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಇರುವ 9.5 ಲಕ್ಷ ಹೆಕ್ಟೇರ್‌ ಡೀಮ್ಡ್ ಅರಣ್ಯ ಭೂಮಿಯಲ್ಲಿ 6 ಲಕ್ಷ ಹೆಕ್ಟೇರ್‌ ಭೂಮಿಯನ್ನು ಕಂದಾಯ ಇಲಾಖೆ ವಾಪಸ್‌ ನೀಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದ್ದು, ಈ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ, ಉಳುಮೆ ಮಾಡುತ್ತಿರುವ ಜಮೀನನ್ನು ಆಯಾ ರೈತರಿಗೇ ನೀಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ರೈತರ ಕುಮ್ಕಿ ವರ್ಗ ಭೂಮಿಯ ಹಕ್ಕು ಕುರಿತು ಪುತ್ತೂರು ಶಾಸಕ ಸಂಜೀವ್‌ ಮಠದೂರ್‌ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಂಬಂಧ ಕೆಲವು ಆಕ್ಷೇಪಣೆಗಳು ಬಂದಿವೆ. ಪರಿಶೀಲಿಸಿ ರೈತ ಪರವಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇಷ್ಟು ತರಾತುರಿ ಏಕೆ? ಭೂಸುಧಾರಣೆ ವಿಧೇಯಕಕ್ಕೆ ಬಿಜೆಪಿಯಲ್ಲೇ ವಿರೋಧ ...

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪುತ್ತೂರಿನ ಕುಮ್ಕಿ ವರ್ಗದ ಭೂಮಿಯ ಮಾದರಿಯಲ್ಲೇ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಕುಮ್ಕಿ, ಬಾಣೆ, ಬೆಟ್ಟ, ಹಾಡಿ, ಜುಮ್ಮಾ ಮುಂತಾದ ವರ್ಗದ ಭೂಮಿ ರೈತರ ಜಮೀನಿಗೆ ತಾಕಿಕೊಂಡಿದ್ದು, ಅವುಗಳನ್ನು ಉಳುಮೆ ಮಾಡುತ್ತಿರುವವರಿಗೆ ಬಿಟ್ಟುಕೊಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಹಾಗಾಗಿ ಸರ್ಕಾರ ಈ ಎಲ್ಲ ವರ್ಗದ ಜಮೀನನ್ನು ಉಳುಮೆ ಮಾಡುತ್ತಿರುವವರಿಗೆ ಬಿಟ್ಟು ಕೊಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಇದಕ್ಕೆ, ಕಾರ್ಮಿಕ ಸಚಿವ ಅರೆಬೈಲು ಶಿವರಾಮ್‌ ಹೆಬ್ಬಾರ್‌, ಶಾಸಕರಾದ ರಾಜೇಗೌಡ, ಅರಗ ಜ್ಞಾನೇಂದ್ರ ಮತ್ತಿತರ ಸದಸ್ಯ ಕೂಡ ಸಹಮತ ವ್ಯಕ್ತಪಡಿಸಿದರು.

ಈ ವೇಳೆ ಉತ್ತರ ನೀಡಿದ ಸಚಿವ ಆರ್‌.ಅಶೋಕ್‌, ಈ ಹಿಂದೆ ಕೆಲ ಜಿಲ್ಲಾಧಿಕಾರಿಗಳು ಸರ್ಕಾರದ ಸಾಕಷ್ಟುಭೂಮಿಯನ್ನು ಡೀಮ್‌್ರ್ಡ ಅರಣ್ಯ ಎಂದು ಪರಿವರ್ತಿಸಿ ಹೋಗಿದ್ದಾರೆ. ಇಂತಹ 9.5 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ 6 ಲಕ್ಷ ಹೆಕ್ಟೇರ್‌ ಭೂಮಿಯನ್ನು ಕಂದಾಯ ಇಲಾಖೆಗೆ ವಾಪಸ್‌ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ. ಖುದ್ದು ಅರಣ್ಯ ಸಚಿವರೇ ನನ್ನ ಕಚೇರಿಗೆ ಬಂದು ಈ ಮಾಹಿತಿ ನೀಡಿದ್ದಾರೆ. ಉಳಿದ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ಭೂಮಿಯನ್ನು ಸಂಬಂಧಿಸಿದ ರೈತರಿಗೆ ಬಿಟ್ಟುಕೊಡಲು ಮನವಿ ಮಾಡಿದ್ದೇನೆ. ಕಂದಾಯ ಇಲಾಖೆಗೆ ನೀಡುವ 6 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ಉಳುಮೆ ಮಾಡುತ್ತಿರುವ ರೈತರಿಗೇ ಸಂಬಂಧಿಸಿದ ಜಾಗವನ್ನು ಬಿಟ್ಟುಕೊಡಲಾಗುವುದು. ಕುಮ್ಕಿ, ಬಾಣೆ, ಬೆಟ್ಟ, ಹಾಡಿ, ಜುಮ್ಮಾ ಮತ್ತಿತರ ಬೇರೆ ಬೇರೆ ವರ್ಗದ ಭೂಮಿಯನ್ನೂ ಉಳುಮೆ ಮಾಡುತ್ತಿರುವ ಆಯಾ ರೈತರಿಗೆ ನೀಡುವ ಬಗ್ಗೆ ಸಂಬಂಧಿಸಿದ ಕ್ಷೇತ್ರಗಳ ಶಾಸಕರು, ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ರೈತರ ಪರವಾದ ನಿಲುವು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

click me!