ಮಲೆನಾಡಿನಲ್ಲಿ 52 ವರ್ಷ ದಾಖಲೆಯ ಕಡಿಮೆ ಮಳೆ..!

Published : Jul 05, 2023, 04:27 AM IST
ಮಲೆನಾಡಿನಲ್ಲಿ 52 ವರ್ಷ ದಾಖಲೆಯ ಕಡಿಮೆ ಮಳೆ..!

ಸಾರಾಂಶ

ಮುಂಗಾರು ದುರ್ಬಲ: ಶೇ.73ರಷ್ಟು ಮಳೆ ಕೊರತೆ, ವಾಡಿಕೆಯ 38 ಸೆಂಮೀ ಬದಲು 10 ಸೆಂಮೀ ಮಳೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಮಳೆ, 1974ರಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಶೇ.65ರಷ್ಟು ಮಳೆ ಕೊರತೆ ಕಂಡುಬಂದಿತ್ತು, ಅದಾದ ಬಳಿಕ ಈಗ ಅದಕ್ಕಿಂತ ಹೆಚ್ಚು ಮಳೆ ಕೊರತೆ ಅನುಭವಿಸುತ್ತಿರುವೆ ಜಿಲ್ಲೆಗಳು, ಮಲೆನಾಡಿನಲ್ಲಿ ಮಳೆಯಾಗದಿದ್ದರೆ ರಾಜ್ಯದ ಜಲಾಶಯಗಳಿಗೆ ನೀರು ಬರೋದಿಲ್ಲ. 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜು.05):  ಮುಂಗಾರು ಮಾರುತಗಳು ದುರ್ಬಲವಾಗಿರುವುದರಿಂದ ಹಾಗೂ ಈ ಬಾರಿ ವಿಳಂಬವಾಗಿ ರಾಜ್ಯಕ್ಕೆ ಪ್ರವೇಶಿಸಿದ ಕಾರಣ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಜೂನ್‌1ರಿಂದ ಜುಲೈ 4ರವರೆಗೆ ಸುರಿದ ಮಳೆಯ ಒಟ್ಟಾರೆ ಪ್ರಮಾಣ ಗಮನಿಸಿದರೆ ಶೇ.73ರಷ್ಟು ಕೊರತೆಯಾಗಿದ್ದು, 52 ವರ್ಷಗಳ ನಂತರ ಈ ಪ್ರಮಾಣದ ಕೊರತೆ ಕಾಣಿಸಿಕೊಂಡಿದೆ.

ಪಶ್ಚಿಮಘಟ್ಟದ ಮಡಿಲಿನಲ್ಲಿರುವ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ವಾಡಿಕೆಯಂತೆ ಜೂನ್‌ ಆರಂಭದಿಂದ ಜು.4ರವರೆಗೆ ಈ ಜಿಲ್ಲೆಗಳಲ್ಲಿ 38.3 ಸೆಂ.ಮೀ ಮಳೆಯಾಗುವ ಬದಲು ಕೇವಲ 10.2 ಸೆಂ.ಮೀ ಮಳೆಯಾಗಿದೆ. ಇದರಿಂದ ಬರೋಬ್ಬರಿ ಶೇ.73ರಷ್ಟು ಮಳೆ ಕೊರತೆಯಾಗಿದೆ.

ಮುಂಗಾರು ವಿಳಂಬ: ಜಲಾಶಯ, ನದಿಗಳು ಭಣ ಭಣ, ಭೀಕರ ಬರಗಾಲದ ಛಾಯೆ?

1971ರಿಂದ ಮಳೆ ಪ್ರಮಾಣವನ್ನು ಮಾಪನ ಮಾಡಲಾಗುತ್ತಿದ್ದು, 1974ರಲ್ಲಿ ಶೇ.65ರಷ್ಟುಮಳೆ ಕೊರತೆ ಉಂಟಾಗಿತ್ತು. ಆ ಬಳಿಕ ಈ ವರ್ಷ ಅತಿ ಹೆಚ್ಚು ಮಳೆ ಕೊರತೆಯನ್ನು ಮಲೆನಾಡು ಜಿಲ್ಲೆಗಳು ಎದುರಿಸುತ್ತಿವೆ ಎಂದು ಕರ್ನಾಟಕ ರಾಜ್ಯ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢೀಕರಿಸಿದೆ.

ಈವರೆಗೆ ಕರಾವಳಿಯ ನಾಲ್ಕು ಜಿಲ್ಲೆಯ 26 ತಾಲೂಕುಗಳ ಪೈಕಿ 15 ತಾಲೂಕುಗಳಲ್ಲಿ ಭಾರೀ ಪ್ರಮಾಣದ ಮಳೆ ಕೊರತೆ ಉಂಟಾಗಿದೆ. 8 ತಾಲೂಕುಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಸ್ವಲ್ಪ ಪ್ರಮಾಣ ಮಳೆ ಕೊರತೆ ಇದೆ. ಎರಡು ತಾಲೂಕಿನಲ್ಲಿ ವಾಡಿಕೆ ಮತ್ತು ಒಂದು ತಾಲೂಕಿನಲ್ಲಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿರುವ ವರದಿಯಾಗಿದೆ.

ಮುಂಗಾರು ಆರಂಭಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಕೊರತೆ ಪ್ರಮಾಣ ವಾರದಿಂದ ವಾರಕ್ಕೆ ಸುಧಾರಿಸುತ್ತಿದೆ. ಆದರೆ, ಘಟ್ಟದ ತಪ್ಪಲಿನಲ್ಲಿರುವ ಜಿಲ್ಲೆಗಳಲ್ಲಿ ಮಾತ್ರ ಮಳೆ ಕೊರತೆ ನಿರೀಕ್ಷೆಯಂತೆ ಸುಧಾರಿಸುತ್ತಿಲ್ಲ. ಮುಂಗಾರು ಮಾರುತಗಳು ದುರ್ಬಲವಾಗಿರುವುದರಿಂದ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಜಲಾಶಯಗಳು ಖಾಲಿ-ಖಾಲಿ:

ರಾಜ್ಯದ ಬಹುತೇಕ ಜಲಾಶಯಗಳು ಮಲೆನಾಡು ಜಿಲ್ಲೆಗಳ ಮಳೆಯನ್ನು ಆಶ್ರಯಿಸಿವೆ. ಮಲೆನಾಡು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ಜಲಾಶಯಗಳಿಗೆ ನೀರು ಬರುತ್ತಿಲ್ಲ. ಪೂರ್ವ ಮುಂಗಾರು ಅವಧಿಯಲ್ಲಿಯೂ ಮಳೆ ಕೊರತೆ ಆಗಿದೆ. ಇದರಿಂದ ರಾಜ್ಯದ ಸುಮಾರು 10 ರಿಂದ 15 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ತೊಂದರೆ ಆಗಲಿದೆ. ಇದಲ್ಲದೇ, ವಿದ್ಯುತ್‌ ಉತ್ಪಾದನೆ, ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಭೀತಿ ಉಂಟಾಗಿದೆ.

ಚಿಕ್ಕಮಗಳೂರಲ್ಲಿ ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು: ಮುಂದಿನ 3 ದಿನ ಭಾರೀ ಮಳೆ..!

ಮುಂಗಾರು ದುರ್ಬಲ ಇರುವುದರಿಂದ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ಕೊರತೆ ಉಂಟಾಗಿದೆ. ಇದೀಗ ಸ್ವಲ್ಪ ಮಟ್ಟಿನ ಮಳೆಯಾಗುವ ಲಕ್ಷಣ ಕಾಣುತ್ತಿದ್ದು, ಮುಂದಿನ ಐದು ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳಿಗೆ ನೀರಿನ ಹರಿವು ಬರುವ ನಿರೀಕ್ಷೆ ಇದೆ ಅಂತ ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ. 

ಪ್ರಸಕ್ತ ವರ್ಷದಲ್ಲಿ ಮಲೆನಾಡು ಜಿಲ್ಲೆಗಳ ಮಳೆ ಕೊರತೆ ವಿವರ (ಸೆಂ.ಮೀ)
ಜಿಲ್ಲೆ ವಾಡಿಕೆ ಸುರಿದ ಮಳೆ ಕೊರತೆ ಪ್ರಮಾಣ(ಶೇ)

ಚಿಕ್ಕಮಗಳೂರು 34.6 9.3 -73
ಹಾಸನ 17.2 6.8 -61
ಶಿವಮೊಗ್ಗ 50.0 12.9 -74
ಕೊಡಗು 56.6 11.7 -79
ಒಟ್ಟು 38.3 10.2 -73

50 ವರ್ಷದಲ್ಲಿ ಮಲೆನಾಡು ಜಿಲ್ಲೆಯಲ್ಲಿ ಹೆಚ್ಚು ಮಳೆ ಕೊರತೆಯಾದ ವರ್ಷಗಳು
ವರ್ಷ ಮಳೆ ಕೊರತೆ (ಶೇ)

1974 -65
1976 -62
1988 -60
1995 -53
2009 -51
2023 -73

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!