
ಬೆಂಗಳೂರು (ಏ.21): ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್ ಸೇರಿ ಸಹಶಿಕ್ಷಣ ಹೊಂದಿರುವ ರಾಜ್ಯದ ಎಲ್ಲಾ ಮಾದರಿ ಖಾಸಗಿ ಶಾಲೆಗಳಲ್ಲೂ ಶೇ.50ರಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
2025-26ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಲವು ಅಂಶಗಳ ಸುತ್ತೋಲೆ ಹೊರಡಿಸಿರುವ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ, ಸಹಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿಯನ್ವಯ ಒಟ್ಟು ಪ್ರವೇಶದಲ್ಲಿ ಶೇ.50ರಷ್ಟು ಸ್ಥಳಾವಕಾಶಗಳನ್ನು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು. ಶೇ.50ರಷ್ಟು ಸೀಟುಗಳ ಪ್ರವೇಶಕ್ಕೆ ಹೆಣ್ಣು ಮಕ್ಕಳು ದೊರೆಯದೆ ಹೋದಲ್ಲಿ ಉಳಿಯುವ ಸೀಟುಗಳನ್ನು ಮೀಸಲಾತಿ ನಿಯಮದಂತೆ ಗಂಡು ಮಕ್ಕಳಿಗೆ ನೀಡಬೇಕು ಎಂದು ಸೂಚಿಸಿದ್ದಾರೆ.
ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಯನ್ನಾಗಲಿ, ಅವರ ಪೋಷಕರನ್ನಾಗಲಿ ಪರೀಕ್ಷಿಸುವುದು ಅಥವಾ ಸಂದರ್ಶನ ನಡೆಸುವುದು ಕಾನೂನು ಬಾಹಿರ. ಪ್ರತಿ ಶಾಲೆಯೂ ನಿಗದಿತ ಶುಲ್ಕದ ಮೊತ್ತವನ್ನು ಸಾರ್ವಜನಿಕ ಮಾಹಿತಿಗೆ ಶಾಲೆಯ ನೋಟಿಸ್ ಬೋರ್ಡ್, ಜಾಲತಾಣ ಮತ್ತು ಎಸ್‌ಎಟಿಎಸ್ ತಂತ್ರಾಂಶದಲ್ಲಿ ಪ್ರಕಟಿಸಬೇಕು. ಶಾಲೆ ಮಾಹಿತಿ ಪುಸ್ತಕದಲ್ಲೂ ಮುದ್ರಿಸಬೇಕೆಂದು. ಈ ಶುಲ್ಕ ಹೊರತುಪಡಿಸಿ ಕ್ಯಾಪಿಟೇಷನ್ ಶುಲ್ಕವಸೂಲಿ ಮಾಡುವಂತಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸುವ ಹಾಗೂ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: BTech ಮಾಡೋರಿಗೆ ಟಾಪ್ 10 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿವು
ಶಾಲಾ ಪ್ರವೇಶ ಪ್ರಕ್ರಿಯೆ ಎಲ್ಲರಿಗೂ ಮುಕ್ತ ಹಾಗೂ ಪಾರದರ್ಶಕವಾಗಿರಬೇಕು. ಪ್ರತಿ ಶಾಲೆಯಲ್ಲೂ ತರಗತಿವಾರು ಪ್ರವೇಶಾತಿ ಕುರಿತು ವೇಳಾಪಟ್ಟಿ, ಪ್ರತಿ ಶಾಲೆ ತಮ್ಮ ಶಾಲೆಯಲ್ಲಿ ಲಭ್ಯವಿರುವ ಸೀಟುಗಳು ಮತ್ತು ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ತರಗತಿವಾರು ನಿಗದಿಪಡಿಸಿ ಶುಲ್ಕ ಮಾಹಿತಿ ಸಹಿತ, ಶಾಲಾ ಪ್ರಕಟಣಾ ಫಲಕದಲ್ಲಿ ಶಾಲಾ ಮುಖ್ಯಸ್ಥರು ಪ್ರಕಟಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿರುವ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಉಳಿದಂತೆ ವಿಶೇಷ ಚೇತನ ಮಕ್ಕಳಿಗೆ ನಿಯಮಾನುಸಾರ ದಾಖಲಾತಿಗೆ ಅವಕಾಶ ಕಲ್ಪಿಸಬೇಕು. ಎಸ್ಸಿ, ಎಸ್ಟಿ ಮಂಡಳಿಗಳಿಂದ ನಡೆಯುತ್ತಿರುವ ಅನುದಾನಿತ ಶಾಲೆಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಆ ಸಮುದಾಯದ ಮಕ್ಕಳಿಗೆ ನೀಡಬೇಕು. ಯಾವುದೇ ಶಾಲೆ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ರೀತ್ಯಾ ಕ್ರಮ ಜರುಗಿಸುವುದಾಗಿ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ