ಟನ್‌ಗೆ 50 ಹೆಚ್ಚಳ ಆದೇಶ ಸುಟ್ಟು ಕಬ್ಬು ರೈತರ ಭಾರೀ ಪ್ರತಿಭಟನೆ

By Govindaraj SFirst Published Dec 9, 2022, 10:19 AM IST
Highlights

ಸರ್ಕಾರ ಪ್ರತಿ ಟನ್‌ ಕಬ್ಬಿಗೆ ಎಫ್‌ಆರ್‌ಪಿ ದರವನ್ನು ಕೇವಲ 50 ರು. ದರ ಹೆಚ್ಚಿಸಿರುವುದಕ್ಕೆ ಅಸಮಾಧಾನಗೊಂಡ ಕಬ್ಬು ಬೆಳೆಗಾರರು ದರ ಹೆಚ್ಚಳ ಆದೇಶವನ್ನು ಸುಟ್ಟು ಹಾಕಿ ಕಳೆದ 17 ದಿನಗಳಿಂದ ನಗರದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟವನ್ನು ಮುಂದುವರೆಸಿದ್ದಾರೆ.

ಬೆಂಗಳೂರು (ಡಿ.09): ಸರ್ಕಾರ ಪ್ರತಿ ಟನ್‌ ಕಬ್ಬಿಗೆ ಎಫ್‌ಆರ್‌ಪಿ ದರವನ್ನು ಕೇವಲ 50 ರು. ದರ ಹೆಚ್ಚಿಸಿರುವುದಕ್ಕೆ ಅಸಮಾಧಾನಗೊಂಡ ಕಬ್ಬು ಬೆಳೆಗಾರರು ದರ ಹೆಚ್ಚಳ ಆದೇಶವನ್ನು ಸುಟ್ಟು ಹಾಕಿ ಕಳೆದ 17 ದಿನಗಳಿಂದ ನಗರದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟವನ್ನು ಮುಂದುವರೆಸಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಗುರುವಾರವೂ ಪ್ರತಿಭಟನೆ ಮುಂದುವರೆಸಿದ ರೈತರು ಆದೇಶ ಸುಟ್ಟು, ಕಬ್ಬಿನ ಪಿಂಡಿಯನ್ನು ಹೊತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನ್ಯಾಯಯುತವಾಗಿ ಹೆಚ್ಚುವರಿ ದರ ನಿಗದಿಪಡಿಸುವ ಜತೆಗೆ ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ 150 ರು. ಎಫ್‌ಆರ್‌ಪಿ ದರವನ್ನು ಕಾರ್ಖಾನೆಗಳಿಂದ ರೈತರಿಗೆ ಕೊಡಿಸಲು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವ ವಹಿಸಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ಸಕ್ಕರೆ ಕಾರ್ಖಾನೆಗಳಿಂದ ಹೆಚ್ಚುವರಿ ಹಣ ಕೊಡಿಸಲು ಸರ್ಕಾರಕ್ಕೆ ಧೈರ್ಯವಿಲ್ಲದಿದ್ದರೆ ಕಬ್ಬು ವಹಿವಾಟಿನಿಂದ ಸರ್ಕಾರಕ್ಕೆ ಬರುವ 5,000 ಕೋಟಿ ರು. ತೆರಿಗೆ ಹಣದಿಂದಲೇ ಹೆಚ್ಚುವರಿ ಹಣ ನೀಡಲಿ. ಈ ಹಿಂದೆ ಬೆಳಗಾವಿ ಅಧಿವೇಶನದ ವೇಳೆ ರೈತನೊಬ್ಬ ಪ್ರಾಣ ಕಳೆದುಕೊಂಡಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟನ್‌ಗೆ 160 ಹೆಚ್ಚುವರಿ ಹಣ ಘೋಷಿಸಿ 1,600 ಕೋಟಿ ರು. ರೈತರಿಗೆ ನೀಡಿದ್ದರು. ಅದರಂತೆ ಹಾಲಿ ಬಿಜೆಪಿ ಸರ್ಕಾರವು ನೀಡಲಿ ಎಂದು ಆಗ್ರಹಿಸಿದರು.

ಟನ್‌ ಕಬ್ಬಿಗೆ ₹50 ಹೆಚ್ಚುವರಿ ದರ ಪಾವತಿಗೆ ಆದೇಶ

ರಾಜ್ಯಾದ್ಯಂತ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ಕಳೆದ ಬಾರಿಗಿಂತ ಈ ಬಾರಿ ಪ್ರತಿ ಟನ್‌ಗೆ 200ರಿಂದ 300 ರು. ಹೆಚ್ಚುವರಿಯಾಗಿ ರೈತರರಿಂದ ಮುರಿದುಕೊಳ್ಳುತ್ತಿವೆ. ಇದಕ್ಕೆ ಸರ್ಕಾರ ಕಡಿವಣಾ ಹಾಕಬೇಕು. ಕಬ್ಬಿನಿಂದ ಬರುವ ಎಥೆನಾಲ್‌ ಉತ್ಪನ್ನದ ಲಾಭಾಂಶ ಮಾತ್ರ ಏಕೆ, ಮೊಲಾಸಿಸ್‌, ಬಗ್ಯಾಸ್‌, ಮಡ್ಡಿ, ಸಕ್ಕರೆ ಉತ್ಪನ್ನಗಳ ಲಾಭವನ್ನು ಪರಿಗಣಿಸಿ ಉತ್ಪಾದನೆಗೆ ತಗಲುವ ಖರ್ಚನ್ನು ಕಳೆದು ರೈತರಿಗೆ ಹೆಚ್ಚುವರಿ ಹಣ ನಿಗದಿ ಮಾಡಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಒಪ್ಪದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಉಳುವಪ್ಪ ಬಳಗೇರ, ರಮೇಶ್‌ ಹೂಗಾರ್‌, ಜಗದೀಶ್‌ ಪಾಟೀಲ್‌, ಸುರೇಶ್‌ ಮಾ ಪಾಟೀಲ್, ಹತ್ತಳ್ಳಿ ದೇವರಾಜ್‌, ನಾಗರಾಜ್‌, ಶರಣು ಬಿಲ್ಲದ್‌ ಮುಂತಾದವರಿದ್ದರು.

ಸರ್ಕಾರದ ಕಬ್ಬಿನ ಬೆಲೆ ನಿಗದಿ ಕ್ರಮಕ್ಕೆ ಮುಧೋಳ ರೈತರ ಅಸಮಾಧಾನ

ಡಿ.11ರಂದು ತಮಿಳುನಾಡು, ಕೇರಳ, ಆಂಧ್ರ, ರಾಜ್ಯಗಳ ರೈತ ಮುಖಂಡರು ಬೆಂಗಳೂರಿನ ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಲಿದ್ದಾರೆ. ಅನಿವಾರ್ಯವಾದರೆ ಸಾವಿರಾರು ಸಂಖ್ಯೆ ರೈತರು ಬೆಂಗಳೂರಿಗೆ ಬರಲು ತೀರ್ಮಾನಿಸಿದ್ದಾರೆ. ಸರ್ಕಾರ ಕಬ್ಬು ಬೆಳೆಗಾರರ ರೈತರ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಿ.
-ಕುರುಬೂರು ಶಾಂತಕುಮಾರ್‌, ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

click me!