ಬೀದರಲ್ಲಿ ಮೈಕೊರೆಯುವ ಚಳಿ: ಕನಿಷ್ಠ ತಾಪಮಾನ ದಾಖಲು

By Kannadaprabha News  |  First Published Dec 23, 2020, 9:26 AM IST

ಮಂಗಳವಾರ 5.6 ಡಿಗ್ರಿ ದಾಖಲು| ರಾಜ್ಯದಲ್ಲಿ ದಿನದ, ಜಿಲ್ಲೆಯಲ್ಲಿ ಸಾರ್ವಕಾಲಿಕ ಕನಿಷ್ಠ| ಈವರೆಗೆ ಬೀದರ್‌ ಜಿಲ್ಲೆಯಲ್ಲಿ ಇಷ್ಟು ಕಡಿಮೆ ಪ್ರಮಾಣದ ಉಷ್ಣಾಂಶ ದಾಖಲಾಗಿರಲಿಲ್ಲ| ರಾಜ್ಯದ ಮಟ್ಟಿಗೆ ಪ್ರಸಕ್ತ ಸಾಲಿನಲ್ಲಿ ಯಾವುದೇ ಜಿಲ್ಲೆಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ಉಷ್ಣಾಂಶ| 


ಬೆಂಗಳೂರು(ಡಿ.23): ಉತ್ತರ ಒಳನಾಡಿನ ಬೀದರ್‌ನಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಕಡಿಮೆಯಾಗುತ್ತಿದ್ದು, ಚಳಿ ಹೆಚ್ಚಾಗುತ್ತಿದೆ. ಮಂಗಳವಾರ ಅತ್ಯಂತ ಕನಿಷ್ಠ ತಾಪಮಾನ 5.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದು ಈ ವರ್ಷ ರಾಜ್ಯದ ಅತ್ಯಂತ ಕನಿಷ್ಠ ತಾಪಮಾನ ಹಾಗೂ ಜಿಲ್ಲೆಯ ಮಟ್ಟಿಗೆ ಸಾರ್ವಕಾಲಿಕ ಕನಿಷ್ಠ ತಾಪಮಾನವಾಗಿದೆ.

ಮಹಾರಾಷ್ಟ್ರ ಮಾರ್ಗವಾಗಿ ತೇವಾಂಶಭರಿತ ಗಾಳಿ ರಾಜ್ಯ ಪ್ರವೇಶಿಸುತ್ತಿರುವುದು ಕೂಡ ರಾಜ್ಯದಲ್ಲಿ ಚಳಿ ಹೆಚ್ಚಾಗಲು ಮುಖ್ಯ ಕಾರಣ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

Latest Videos

undefined

ಬೀದರ್‌ನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 26.2 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 5.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಈ ಕನಿಷ್ಠ ದಾಖಲಾತಿ ವಾಡಿಕೆ ತಾಪಮಾನಕ್ಕಿಂತ (16.7 ಡಿ.ಸೆ.) 10.1ನಷ್ಟು ಕಡಿಮೆ ದಾಖಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಇಷ್ಟು ಕಡಿಮೆ ಪ್ರಮಾಣದ ಉಷ್ಣಾಂಶ ದಾಖಲಾಗಿರಲಿಲ್ಲ. ಆದ್ದರಿಂದ ಇದು ಜಿಲ್ಲೆಯ ಮಟ್ಟಿಗೆ ಸಾರ್ವಕಾಲಿಕ ಕನಿಷ್ಠ ತಾಪಮಾನದ ದಾಖಲೆಯಾಗಿದೆ. ರಾಜ್ಯದ ಮಟ್ಟಿಗೆ ಪ್ರಸಕ್ತ ಸಾಲಿನಲ್ಲಿ ಯಾವುದೇ ಜಿಲ್ಲೆಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ಉಷ್ಣಾಂಶ ಇದಾಗಿದೆ.

ಕನಿಷ್ಠ ತಾಪಮಾನ ದಾಖಲು: ಇನ್ನೂ ಹೆಚ್ಚಾಗಲಿದೆ ಮೈಕೊರೆಯುವ ಚಳಿ

2020ರ ಸೋಮವಾರ (ಡಿ.21) ಬೀದರ್‌ನಲ್ಲಿ 6 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಇಳಿಕೆಯಾಗಿತ್ತು. 2020ರ ನವೆಂಬರ್‌ 10ರಂದು ಜಿಲ್ಲೆಯಲ್ಲಿ 7.6 ಡಿ.ಸೆ. ತಾಪಮಾನ ದಾಖಲಾಗಿತ್ತು. ಕಳೆದ ಮೂರು ವರ್ಷದ ಹಿಂದೆ ಇದೇ ಜಿಲ್ಲೆಯಲ್ಲಿ 6 ಡಿ.ಸೆ. ತಾಪಮಾನ ದಾಖಲಾಗಿತ್ತು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಳಿದಂತೆ ಉತ್ತರ ಒಳನಾಡಿನ ವಿಜಯಪುರದಲ್ಲಿ 9.5 ಡಿಗ್ರಿ ಸೆಲ್ಸಿಯಸ್‌, ಧಾರವಾಡ 10.2, ಗದಗ 11.4, ಹಾವೇರಿ 11.6, ಶಿವಮೊಗ್ಗದಲ್ಲಿ 11.8, ರಾಯಚೂರು 12 ಹಾಗೂ ಕೊಪ್ಪಳದಲ್ಲಿ 12.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ. ಎಲ್ಲೆಡೆ ಬೆಳಿಗ್ಗೆ ಅಧಿಕ ಚಳಿ, ಮಧ್ಯಾಹ್ನ ಒಣ ಹವೆ ಕಂಡು ಬರುತ್ತಿದೆ. ರಾಜ್ಯದ ಗರಿಷ್ಠ ತಾಪಮಾನ ಉತ್ತರ ಕನ್ನಡದ ಶಿರಾಲಿಯಲ್ಲಿ 35.1 ಡಿ.ಸೆ. ದಾಖಲಾಗಿದೆ.
 

click me!