40% ಕಮಿಷನ್ ಆರೋಪ; ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ

Published : Aug 19, 2023, 05:35 AM IST
40% ಕಮಿಷನ್ ಆರೋಪ; ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ

ಸಾರಾಂಶ

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿದ್ದ ಶೇ.40 ಕಮಿಷನ್‌ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದ್ದು, 30 ದಿನದೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ.

ಬೆಂಗಳೂರು (ಆ.19): ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿದ್ದ ಶೇ.40 ಕಮಿಷನ್‌ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದ್ದು, 30 ದಿನದೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ.

ಬಿಜೆಪಿ ಆಡಳಿತಾವಧಿಯಲ್ಲಿನ ಹಲವು ಅಕ್ರಮಗಳ ಆರೋಪದ ಸಂಬಂಧ ಈಗಾಗಲೇ ಕಾಂಗ್ರೆಸ್‌ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ನಡುವೆ, ಶೇ.40 ಕಮಿಷನ್‌ ಆರೋಪದ ಸಂಬಂಧವೂ ಸಮಿತಿ ರಚಿಸಿ, ತನಿಖೆಗೆ ಸೂಚಿಸಿ ಆದೇಶ ಹೊರಡಿಸಿದೆ. 9 ಅಂಶಗಳ ಕುರಿತು ತನಿಖೆ ನಡೆಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಬಿಜೆಪಿ ವಿರುದ್ಧ ಮತ್ತೊಂದು ತನಿಖಾಸ್ತ್ರ : ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಸಾಧ್ಯತೆ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ಕೆಂಪಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ಸರ್ಕಾರ ತನಿಖೆಗೆ ಆದೇಶಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ಟೆಂಡರ್‌ ಪ್ರಕ್ರಿಯೆ, ಪ್ಯಾಕೇಜ್‌ ಪದ್ಧತಿ, ಪುನರ್‌ ಅಂದಾಜು, ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಸತ್ಯಾಸತ್ಯತೆ ಪರಾಮರ್ಶಿಸಬೇಕು. ವಿಸ್ತೃತವಾದ ತನಿಖೆ ನಡೆಸಿ ಲೋಪದೋಷಗಳ ಮಾಹಿತಿ, ಆರೋಪಿತರ ಸ್ಪಷ್ಟಗುರುತಿಸುವಿಕೆ ಸಹಿತ 30 ದಿನದಲ್ಲಿ ವರದಿ ನೀಡಬೇಕು ಎಂದು ಸೂಚಿಸಿದೆ.

ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನವೇ ಶೇ.25-30ರವರೆಗೆ ಸಾರ್ವಜನಿಕ ಪ್ರತಿನಿಧಿಗಳಿಗೆ ಮತ್ತು ಇತರರಿಗೆ ಲಂಚ ನೀಡಬೇಕಾದ ಪರಿಸ್ಥಿತಿಯ ಬಗ್ಗೆ ಮತ್ತು ಕಾಮಗಾರಿಗಳು ಪೂರ್ಣವಾದ ನಂತರ ಬಾಕಿ ಬಿಲ್‌ಗಳ ಪಾವತಿಗೆ ಶೇ.5-6ರವರೆಗೆ ಎಲ್‌ಒಸಿ ಬಿಡುಗಡೆಗೆ ನೀಡಬೇಕು ಎಂಬುದರ ಕುರಿತು ಕೆಂಪಣ್ಣ ದೂರಿನಲ್ಲಿ ಉಲ್ಲೇಖಿಸಿದ್ದರು. ಗಂಭೀರ ಆರೋಪಗಳ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೇ ತನಿಖೆ ನಡೆದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಡಳಿತದಲ್ಲಿ ಪಾರದರ್ಶಕತೆ ಜಾರಿಗೊಳಿಸಲು ತನಿಖೆಯ ಅವಶ್ಯಕತೆ ಇದೆ ಎಂದು ಆದೇಶದಲ್ಲಿ ತಿಳಿಸಿದೆ.

ತನಿಖಾ ಸಮಿತಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸಮಿತಿ ಕಾಲಾನುಕಾಲಕ್ಕೆ ತನಿಖೆಗಾಗಿ ಕೇಳುವ ಎಲ್ಲಾ ಕಡತಗಳು, ದಾಖಲೆ ಇತ್ಯಾದಿ ಒದಗಿಸಬೇಕು ಮತ್ತು ಖುದ್ದು ಹಾಜರಿದ್ದು ತನಿಖೆಗೆ ಸಹಕರಿಸಬೇಕು. ಸಮಿತಿ ಅಗತ್ಯವಿದ್ದರೆ ಅಧ್ಯಕ್ಷರ ಕೋರಿಕೆಯ ಮೇರೆಗೆ ಗುಣಮಟ್ಟಪರೀಕ್ಷೆಗೆ ನೋಂದಾಯಿತ 3ನೇ ಸ್ವತಂತ್ರ ಸಂಸ್ಥೆಯ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಸುಗ್ರೀವಾಜ್ಞೆ ಮೂಲಕ ಮೀಸಲು ಹೆಚ್ಚಿಸಿ: ಸಿದ್ದರಾಮಯ್ಯ

9 ಅಂಶಗಳ ಆಧರಿಸಿ ನಡೆಯುವ ತನಿಖೆ

ತನಿಖೆಯ 9 ಅಂಶಗಳು

1. ಕಾಮಗಾರಿಗಳಿಗೆ ನಿಯಮಾನುಸಾರ ಅನುಮೋದನೆ ನೀಡಲಾಗಿದೆಯೇ?

2. ಗುಣಮಟ್ಟ, ಅಂದಾಜುಗಳನ್ನು ಪ್ರಚಲಿತ ದರಗಳಂತೆ ತಯಾರಿಸಲಾಗಿದೆಯೇ?

3. ಕಾಮಗಾರಿಗಳ ಅಂದಾಜು ಪ್ರಮಾಣ ವಾಸ್ತವಿಕವಾಗಿದೆಯೇ? ಅಥವಾ ಕೃತಕವಾಗಿ ಹೆಚ್ಚಿಸಲಾಗಿದೆಯೇ? ಹೆಚ್ಚಿಸಿದ್ದರೆ ಪ್ರಮಾಣ ಮತ್ತು ಹಣಕಾಸಿನ ಬದ್ಧತೆ ಎಷ್ಟು? ಯಾವ ಹಂತದಲ್ಲಿ ಹೆಚ್ಚಿಸಲಾಗಿದೆ?

4. ಕಾಮಗಾರಿಗಳ ಅನುಷ್ಠಾನದ ವೇಳೆ ಆಗಿರುವ ಹೆಚ್ಚುವರಿ ವ್ಯತ್ಯಾಸದ ಅನಿವಾರ್ಯತೆ ಮತ್ತು ಅಗತ್ಯತೆ.

5. ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್‌ ಪಾವತಿ ಮಾಡಲಾಗಿದೆಯೇ? ಅಥವಾ ಹೆಚ್ಚುವರಿಯಾಗಿ ಬಿಲ್‌ ಪಾವತಿಸಲಾಗಿದೆಯೇ?

6. ಟೆಂಡರ್‌ ಕರೆಯುವಾಗ ಕೆಲವೇ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಮತ್ತು ಉಳಿದವರು ಟೆಂಡರ್‌ಗಳಲ್ಲಿ ಭಾಗವಹಿಸದಂತೆ ಷರತ್ತು ರೂಪಿಸಲಾಗಿತ್ತೆ?

7. ಕಾಮಗಾರಿಯನ್ನು ಪ್ರಾರಂಭ ಮೊದಲು ಸಾಮಗ್ರಿಗಳು, ಉಪಕರಣಗಳು ಇತ್ಯಾದಿಗಳ ಗುಣಮಟ್ಟಪರೀಕ್ಷೆಯನ್ನು ನಿರ್ದಿಷ್ಟಪಡಿಸಿ, ಅಧಿಕೃತ ಏಜೆನ್ಸಿಗಳಿಂದ ಮಾಡಿಸಲಾಗಿದೆಯೇ?

8. ಒಟ್ಟಾರೆ ಕಾಮಗಾರಿಗಳ ಕುರಿತಾದ ಟೆಂಡರ್‌ ಪ್ರಕ್ರಿಯೆ ಮತ್ತು ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರೆ ಯಾವುದಾದರೂ ಲೋಪದೋಷಗಳ ಬಗ್ಗೆ

9. ಪರಿಶೀಲನೆಯ ಸಂದರ್ಭದಲ್ಲಿ ಸಮಿತಿಯ ಗಮನಕ್ಕೆ ಬರುವ ಇನ್ನಾವುದೇ ಗಂಭೀರ ವಿಷಯಗಳನ್ನು ತನಿಖಾ ಸಮಿತಿಯ ಅಧ್ಯಕ್ಷರು ಪರಾಮರ್ಶಿಸಬೇಕು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್