
ಬೆಂಗಳೂರು(ಏ.20): ಲೋಕೋಪಯೋಗಿ ಇಲಾಖೆಯ(Department of Public Works) ಹಿಂದಿನ ಸಚಿವರು ಹಾಸಿಗೆ ಮೀರಿ ಕಾಲು ಚಾಚಿದ ಪರಿಣಾಮ ಇಲಾಖೆಯಲ್ಲಿ ಬಾಕಿ ಬಿಲ್‌ಗಳ ಮೊತ್ತ ಭಾರಿ ಪ್ರಮಾಣದಲ್ಲಿತ್ತು. ನಾವು ಜವಾಬ್ದಾರಿ ವಹಿಸಿಕೊಂಡ ಬಳಿಕ 5,200 ಕೋಟಿ ರು. ಬಾಕಿ ಬಿಲ್ ಪಾವತಿಸಿದ್ದರೂ 4 ಸಾವಿರ ಕೋಟಿ ರು. ಇನ್ನೂ ಬಾಕಿ ಇದೆ. ಇದರ ನಡುವೆಯೂ ರಾಜ್ಯದಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಉತ್ತಮ ರಸ್ತೆ ಜಾಲದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್(CC Patil) ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆದ್ದಾರಿ(Highway), ಜಿಲ್ಲಾ ಮುಖ್ಯರಸ್ತೆ, ಸೇತುವೆ, ಶಾಲಾ ಕಟ್ಟಡಗಳ ನಿರ್ಮಾಣ ಸೇರಿದಂತೆ 13 ಸಾವಿರ ಕೋಟಿ ರು.ಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಆದಷ್ಟು ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಿ ಜನರ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.
ಕರ್ನಾಟಕದಲ್ಲೂ 60 ಕಿಮೀಗೆ ಒಂದೇ ಟೋಲ್: ಸಚಿವ ಪಾಟೀಲ್
ಹಿಂದಿನ ಸಚಿವರ ಕಾರ್ಯವೈಖರಿ ಬಗ್ಗೆ ಟೀಕಿಸಿದ ಅವರು, ‘ಅಗತ್ಯವಿತ್ತೋ, ಇಲ್ಲವೋ ಶಾಸಕರ ಒತ್ತಡ ಮತ್ತಿತರ ಕಾರಣಕ್ಕೆ ಹಿಂದಿನ ಸಚಿವರು ಹಾಸಿಗೆ ಮೀರಿ ಕಾಲು ಚಾಚಿದ್ದಾರೆ. ಪರಿಣಾಮ ಇಲಾಖೆಯಲ್ಲಿ ಬಿಲ್ ಬಾಕಿ(Pending Bill) ಹೆಚ್ಚಿದೆ. ಎಚ್.ಸಿ. ಮಹದೇವಪ್ಪ ಅವರ ಕಾಲದಿಂದಲೂ ಬಿಲ್‌ಗಳು ಬಾಕಿ ಉಳಿದಿದ್ದವು. ಈ ಬಾಕಿ ತೀರಿಸುವುದೇ ಈಗ ಆದ್ಯತೆಯಾಗಿದೆ ಎಂದರು.
13 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿ:
ಪ್ರಸ್ತುತ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (SHDP) 4ನೇ ಹಂತದ ಯೋಜನೆಯನ್ನು 10 ಸಾವಿರ ಕೋಟಿ ರು. ಮೊತ್ತದಲ್ಲಿ ಮಾಡಲಾಗುತ್ತಿದ್ದು, ಈ ಪೈಕಿ ಮೊದಲ ಹಂತದಲ್ಲಿ 4,500 ಕೋಟಿ ರು. ವೆಚ್ಚದಲ್ಲಿ 3,461 ಕಿ.ಮೀ. ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. 2ನೇ ಹಂತದಲ್ಲಿ 3,500 ಕೋಟಿ ರು. ವೆಚ್ಚದಲ್ಲಿ 2,275 ಕಿ.ಮೀ. ಹೆದ್ದಾರಿ ಅಭಿವೃದ್ಧಿಗೆ ಜ.3ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಗ್ರಾಮಬಂಧು ಸೇತು ಕಾರ್ಯಕ್ರಮದಡಿ ಕಾಲು ಸೇತುವೆ, ನಬಾರ್ಡ್ ಸಹಯೋಗದಲ್ಲಿ 123 ಬೃಹತ್, ಮಧ್ಯಮ ಸೇತುವೆ ನಿರ್ಮಾಣ ಸೇರಿದಂತೆ ಹಲವು ಯೋಜನೆ ಹಮ್ಮಿಕೊಳ್ಳಲಾಗಿದೆ. ಪರಿಶಿಷ್ಟರ ಉಪ ಯೋಜನೆಯಡಿ 985 ಕೋಟಿ ರು. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ ಮತ್ತು ಸೇತುವೆಗಳ ಪುನರ್ ನಿರ್ಮಾಣ ಮಾಡುವ ಸಂಬಂಧ 610 ಕೋಟಿ ರು. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ನಬಾರ್ಡ್ ಸಹಯೋಗದಲ್ಲಿ 3,370 ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಟ್ಟಡಗಳ ನಿರ್ಮಾಣ ಕೈಗೊಂಡಿದ್ದು, 2,845 ಕಟ್ಟಡಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು.
ಪೀಣ್ಯ ಮೇಲುರಸ್ತೆ ದುರಸ್ತಿಗೆ ಶೀಘ್ರ ಕ್ರಮ:
ಪೀಣ್ಯ ಬಳಿಯ ಮೇಲುರಸ್ತೆಯ ಕಂಬಗಳ ಸಮಸ್ಯೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಅವರ ಗಮನಕ್ಕೂ ತಂದಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(National Highway Authority) ಆರಂಭದಲ್ಲಿ ಒಂದು ಕಂಬದಲ್ಲಿ ಕೇಬಲ್ ಸಮಸ್ಯೆ ಇದೆ ಎಂದು ಹೇಳಿತ್ತು. ಈ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ್ದು, ದುರಸ್ತಿ ಕಾರ್ಯದ ಬಗ್ಗೆ ಆದಷ್ಟುಬೇಗ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ