ನಿನ್ನೆ 40 ಜನ ಐಸಿಯುಗೆ!| ತೀವ್ರ ಅಸ್ವಸ್ಥರ ಸಂಖ್ಯೆ ದಿಢೀರ್ ಹೆಚ್ಚಳ| ರಾಜ್ಯದಲ್ಲಿ ಮೊನ್ನೆ 16, ಈಗ 56ಕ್ಕೇರಿಕೆ| 4 ವರ್ಷದ 3 ಮಕ್ಕಳೂ ತೀವ್ರ ನಿಗಾದಲ್ಲಿ
ಶ್ರೀಕಾಂತ್ ಎನ್.ಗೌಡಸಂದ್ರ
ಬೆಂಗಳೂರು(ಜೂ.16): ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಶೀಘ್ರವೇ ಮತ್ತಷ್ಟುಹೆಚ್ಚಾಗುವ ಆತಂಕ ಎದುರಾಗಿದೆ. ಏಕೆಂದರೆ, ತೀವ್ರ ಆರೋಗ್ಯ ಸಮಸ್ಯೆಯಿಂದಾಗಿ ಸೋಮವಾರ 40 ಮಂದಿ ಸೋಂಕಿತರನ್ನು ತೀವ್ರ ನಿಗಾ ಘಟಕ (ಐಸಿಯು)ಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೊರೋನಾ ಆತಂಕ ಸೃಷ್ಟಿಯಾದ ನಂತರ ಈ ಪ್ರಮಾಣದಲ್ಲಿ ಒಂದೇ ದಿನ ಸೋಂಕಿತರು ಐಸಿಯುಗೆ ದಾಖಲಾಗಿರುವುದು ಇದೇ ಮೊದಲು.
ಸೋಮವಾರ ದಾಖಲಾದ 40 ಮಂದಿಯೂ ಸೇರಿ ರಾಜ್ಯದಲ್ಲಿ ಪ್ರಸ್ತುತ 56 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತಂಕಕಾರಿ ಸಂಗತಿಯೆಂದರೆ, ಈ ಸೋಂಕಿತರ ಪೈಕಿ 4 ವರ್ಷದ ಮೂರು ಪುಟ್ಟಕಂದಮ್ಮಗಳು ಐಸಿಯುನಲ್ಲಿವೆ. ಬೀದರ್‌ನಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ 4 ವರ್ಷದ ಹೆಣ್ಣು ಮಗುವನ್ನು ಐಸಿಯು ಜತೆ ವೆಂಟಿಲೇಟರ್ ವ್ಯವಸ್ಥೆಯಲ್ಲಿಡಲಾಗಿದೆ. ಇನ್ನು ಮೇ 27ರಂದು ಆಸ್ಪತ್ರೆಗೆ ದಾಖಲಾದ 4 ವರ್ಷದ ಗಂಡು ಮಗು 18 ದಿನಗಳ ಬಳಿಕವೂ ತೀವ್ರ ನಿಗಾ ಘಟಕದಲ್ಲೇ ಇದೆ. ಹೀಗಾಗಿ ಪುಟ್ಟಮಕ್ಕಳನ್ನೂ ಬಿಡದೆ ಸೋಂಕು ಕಾಡತೊಡಗಿದೆ.
ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ?
ಏತನ್ಮಧ್ಯೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿಗೆ ಬೆಂಗಳೂರು ಮತ್ತು ಧಾರವಾಡದಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ. ಜತೆಗೆ ಸೋಮವಾರ 213 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕು 7,213ಕ್ಕೆ ಮತ್ತು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ.
ಮೊನ್ನೆವರೆಗೆ ಕೇವಲ 16 ಜನ:
ಭಾನುವಾರದ ವೇಳೆಗೆ ಕೇವಲ 16 ಮಂದಿ ಮಾತ್ರ ಐಸಿಯು ಘಟಕದಲ್ಲಿದ್ದರು. ಕಲಬುರಗಿ 8, ಬೆಂಗಳೂರು 6, ವಿಜಯಪುರ, ಧಾರವಾಡದಲ್ಲಿ ತಲಾ ಒಬ್ಬರು ಮಾತ್ರ ಐಸಿಯುನಲ್ಲಿದ್ದರು. ಯಾರೂ ಸಹ ವೆಂಟಿಲೇಟರ್‌ನಲ್ಲಿ ಇರಲಿಲ್ಲ. 19 ಮಂದಿ ಐಸಿಯುನಲ್ಲಿದ್ದದ್ದು ಈವರೆಗಿನ ದಾಖಲೆ. ಸೋಮವಾರ ಏಕಾಏಕಿ 40 ಮಂದಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಐಸಿಯು ಘಟಕಕ್ಕೆ ಸ್ಥಳಾಂತರಗೊಳಿಸಲಾಗಿದೆ. ಇದರಲ್ಲಿ ಯಾರೂ ಸಹ ಭಾನುವಾರ ಅಥವಾ ಸೋಮವಾರ ಸೋಂಕಿಗೆ ಒಳಗಾದವರು ಅಲ್ಲ. ಈ ಮೊದಲೇ ಸಾಮಾನ್ಯ ವಾರ್ಡ್‌ನಲ್ಲಿದ್ದವರನ್ನು ಏಕಾಏಕಿ ಐಸಿಯುಗೆ ಸ್ಥಳಾಂತರಿಸಲಾಗಿದೆ.
ಕಲಬುರಗಿಯಲ್ಲಿ 18, ಬೆಂಗಳೂರು 17, ಬೀದರ್, ಬಳ್ಳಾರಿ ತಲಾ 5, ಧಾರವಾಡ 3, ದಕ್ಷಿಣ ಕನ್ನಡ, ವಿಜಯಪುರ ತಲಾ 2, ದಾವಣಗೆರೆ, ಮಂಡ್ಯ, ಶಿವಮೊಗ್ಗ, ಉಡುಪಿಯಲ್ಲಿ ತಲಾ ಒಬ್ಬರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಈ ಪೈಕಿ ಬೀದರ್ 4 (4 ವರ್ಷದ ಹೆಣ್ಣು ಮಗು ಸೇರಿ), ಬೆಂಗಳೂರು ನಗರ 2, ದಕ್ಷಿಣ ಕನ್ನಡದ ಒಬ್ಬರು ತೀವ್ರ ಅನಾರೋಗ್ಯದಿಂದ ಐಸಿಯುನಲ್ಲಿ ವೆಂಟಿಲೇಟರ್ ವ್ಯವಸ್ಥೆಯಲ್ಲಿದ್ದಾರೆ.
ಚಿಕ್ಕ ವಯಸ್ಸಿನವರೂ ಐಸಿಯುಗೆ:
ಆಘಾತಕಾರಿ ವಿಚಾರವೆಂದರೆ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಐಸಿಯುಗೆ ಸ್ಥಳಾಂತರಗೊಂಡಿದ್ದಾರೆ. 4 ವರ್ಷದ ಮೂವರು ಪುಟ್ಟಕಂದಮ್ಮಗಳ ಜತೆ ಕಲಬುರಗಿಯಲ್ಲಿ 9 ವರ್ಷದ ಬಾಲಕ ಐಸಿಯುನಲ್ಲಿದ್ದಾನೆ. ಒಟ್ಟಾರೆ 14 ಮಂದಿ 30 ವರ್ಷದೊಳಗಿನವರೇ ಐಸಿಯು ಘಟಕದಲ್ಲಿದ್ದಾರೆ. ಉಳಿದಂತೆ 19 ಮಂದಿ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್‌ನಲ್ಲಿರುವವರ ಪೈಕಿ 4 ವರ್ಷದ ಮಗು ಹೊರತುಪಡಿಸಿ ಉಳಿದೆಲ್ಲರೂ 50 ವರ್ಷ ಮೇಲ್ಪಟ್ಟವರು ಎಂದು ಆರೋಗ್ಯ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ನಿನ್ನೆ ಮತ್ತೆರಡು ಸಾವು, 213 ಜನರಿಗೆ ಸೋಂಕು
ಸೋಮವಾರ ದೃಢಪಟ್ಟ213 ಮಂದಿ ಸೋಂಕಿತರದಲ್ಲಿ 103 ಮಂದಿ ಹೊರರಾಜ್ಯ ಪ್ರಯಾಣ ಹಿನ್ನೆಲೆ, 23 ಮಂದಿ ಹೊರದೇಶ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಕಲಬುರಗಿಯಲ್ಲಿ ಅತಿ ಹೆಚ್ಚು (48), ಬೆಂಗಳೂರಿನಲ್ಲಿ 35, ಧಾರವಾಡ 34, ದಕ್ಷಿಣ ಕನ್ನಡ 23, ರಾಯಚೂರು 18, ಯಾದಗಿರಿ 13, ಬೀದರ್ 11, ಬಳ್ಳಾರಿ 10, ಕೊಪ್ಪಳ 4, ವಿಜಯಪುರ, ಬಾಗಲಕೋಟೆ ಹಾಗೂ ಶಿವಮೊಗ್ಗದಲ್ಲಿ ತಲಾ ಮೂರು, ಉಡುಪಿ, ಹಾವೇರಿ ಹಾಗೂ ರಾಮನಗರದಲ್ಲಿ ತಲಾ ಇಬ್ಬರು, ಹಾಸನ ಮತ್ತು ದಾವಣಗೆರೆಯಲ್ಲಿ ತಲಾ ಒಬ್ಬರು ಸೋಂಕಿತರಾಗಿದ್ದಾರೆ. ಧಾರವಾಡದಲ್ಲಿ ಭಾನುವಾರ 65 ವರ್ಷದ ವೃದ್ಧ ಸೋಂಕಿನಿಂದ ಮೃತಪಟ್ಟಿದ್ದು, ಬೆಂಗಳೂರಿನಲ್ಲಿ ಸೋಮವಾರ 75 ವರ್ಷದ ವೃದ್ಧೆ ಸಾವಿಗೀಡಾಗಿದ್ದಾರೆ.