
ಬೆಂಗಳೂರು(ಜೂ.07): ರಾಜ್ಯದ ನಾಲ್ಕು ಜಿಲ್ಲೆಯಲ್ಲಿ ‘ಗಾಲಿಯ ಮೇಲೆ’ ಆಸ್ಪತ್ರೆ ಎಂಬ ಪರಿಕಲ್ಪನೆಯಡಿ ಸಂಚಾರಿ ಆಸ್ಪತ್ರೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡುತ್ತಿದ್ದು, ಯಶಸ್ವಿಯಾದರೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ವಿಧಾನಸೌಧ ಮುಂಭಾಗದಲ್ಲಿ ರೋಟರಿ ಬೆಂಗಳೂರು ಹೈಗ್ರೌಂಡ್‌್ಸ, ಇಸ್ಫೋಸಿಸ್ ¶ೌಂಡೇಶನ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಲ್ಯಾಬ್ ಬಿಲ್ಟ್ ಆನ್ ವೀಲ್ಸ್- ಮೊಬೈಲ್ ಕ್ಲಿನಿಕ್’ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸ್ಥಳದಲ್ಲಿಯೇ ತಪಾಸಣೆ ಮತ್ತು ಪರಿಹಾರ ನೀಡುವ ವ್ಯವಸ್ಥೆ ಅಗತ್ಯ ಇದೆ. ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ನಾಲ್ಕು ಜಿಲ್ಲೆಯಲ್ಲಿ ಮೊಬೈಲ್ ಆಸ್ಪತ್ರೆಯನ್ನು ಆರಂಭಿಸಲಾಗುವುದು. ಪ್ರಯೋಗ ಯಶಸ್ವಿಯಾದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ ಮಾಡಬೇಕು ಎಂಬ ಚಿಂತನೆ ಇದೆ ಎಂದು ತಿಳಿಸಿದರು.
ಸುಸಜ್ಜಿತ ಪ್ರಯೋಗಾಲಯ:
ಗ್ರಾಮೀಣ ಪ್ರದೇಶದಲ್ಲಿ ಸಂಚಾರಿ ಕ್ಲಿನಿಕ್ ಉಪಯೋಗವನ್ನು ಮನಗಂಡು ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ಮಂಗಳೂರು ಮಹಾನಗರ ಪಾಲಿಕೆಗಳಿಗೆ ಇವುಗಳನ್ನು ಆರೋಗ್ಯ ಇಲಾಖೆಯಿಂದ ಹಸ್ತಾಂತರ ಮಾಡಲಾಗುತ್ತಿದೆ. ಜನರ ಆರೋಗ್ಯಕ್ಕಾಗಿ ಬಹಳಷ್ಟುಸಂಘ-ಸಂಸ್ಥೆಗಳು ಮುಂದಾಗಿವೆ. ಅವರೆಲ್ಲರನ್ನೂ ಸರ್ಕಾರ ಸ್ವಾಗತಿಸುತ್ತದೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಪ್ರಯೋಗಾಲಯದ ಸೇವೆ ಒದಗಿಸುವ ಉದ್ದೇಶದಿಂದ ಸಂಚಾರಿ ಆಸ್ಪತ್ರೆಯನ್ನು ಇಸ್ಫೋಸಿಸ್ ಮತ್ತು ರೋಟರಿ ಸಂಸ್ಥೆಗಳು ದೇಣಿಗೆಯಾಗಿ ನೀಡಿವೆ. ಸುಸಜ್ಜಿತವಾದ ಆಸ್ಪತ್ರೆ ಮಾದರಿಯ ಪ್ರಯೋಗಾಲಯ ಇದಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆಯ ಕೊರತೆ ಇರುವ ಕಡೆಗಳಲ್ಲಿ ಇಂತಹ ಸಂಚಾರಿ ಕ್ಲಿನಿಕ್‌ಗಳನ್ನು ಒದಗಿಸುತ್ತಿರುವುದು ಒಳ್ಳೆಯ ನಡೆ. ಆರೋಗ್ಯ ಸೇವೆಗಳು ತಲುಪದೆ ಇರುವವರಿಗೆ ಈ ಸೇವೆಯನ್ನು ತಲುಪಿಸುವ ಉದ್ದೇಶವನ್ನು ರೋಟರಿ ಮತ್ತು ಇಸ್ಫೋಸಿಸ್ ¶ೌಂಡೇಷನ್ ಸಂಸ್ಥೆಯದ್ದಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸಂಚಾರಿ ಕ್ಲಿನಿಕ್ ಇದಾಗಿದ್ದು, ಗ್ರಾಮೀಣ ಭಾಗದಲ್ಲಿ ಇದು ಉಪಯೋಗಕ್ಕೆ ಬರಲಿದೆ. ಇಂತಹ ಪ್ರಯೋಗಾಲಯಗಳ ಅವಶ್ಯಕತೆ ಇದೆ. ಇಸ್ಫೋಸಿಸ್ ಪ್ರತಿಷ್ಠಾನ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ರಾಜ್ಯದಲ್ಲಿ ವಹಿಸಿದೆ. ಜಯದೇವ ಸಂಸ್ಥೆಯಲ್ಲಿ 500 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಒದಗಿಸಿದೆ. ಕಿದ್ವಾಯಿ, ನಿಮ್ಹಾನ್ಸ್ ಸಂಸ್ಥೆಗಳಿಗೆ ಧರ್ಮಛತ್ರ ನಿರ್ಮಿಸಿ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಅನುಕೂಲ ಕಲ್ಪಿಸಿದೆ ಎಂದು ಬಣ್ಣಿಸಿದರು.
ಸಂಚಾರಿ ಕ್ಲಿನಿಕ್ ವಿಶೇಷತೆ
ಐಸಿಎಂಆರ್ (ಭಾರತೀಯ ವೈದ್ಯ ಸಂಶೋಧನಾ ಮಂಡಳಿ) ನಿಗದಿಪಡಿಸಿರುವ ಮಾನದಂಡಕ್ಕನುಗುಣವಾಗಿ ಬಿಎಸ್‌ಎಲ್-2 ಸುರಕ್ಷಾ ಮಟ್ಟದಲ್ಲಿ ಕ್ಲಿನಿಕ್ ನಿರ್ಮಾಣ ಮಾಡಲಾಗಿದೆ. ಒಂದೇ ಸೂರಿನಡಿ ಕ್ಲಿನಿಕ್, ಟೆಲಿಮೆಡಿಸಿನ್, ಫಾರ್ಮಸಿ, ವ್ಯಾಕ್ಸಿನ್, ಇತರೆ ಔಷಧ ಕೊಂಡೊಯ್ಯಲು 2 ಡಿಗ್ರಿಯಿಂದ 18 ಡಿಗ್ರಿ ಸೆಲ್ಸಿಯಸ್‌ನ ರೆಫ್ರಿಜರೇಟರ್, ತುರ್ತು ಚಿಕಿತ್ಸೆಗಾಗಿ ಆಮ್ಲಜನಕ, ಕನಿಷ್ಠ ಶಸ್ತ್ರಚಿಕಿತ್ಸೆ ಮಾಡುವ ಪ್ರತ್ಯೇಕ ಹಾಸಿಗೆಯುಳ್ಳ ಕೋಣೆ ಇದೆ. ವಿದ್ಯುತ್ ಸಂಪರ್ಕ ಇಲ್ಲದಿರುವ ಕಡೆ ಉಪಯೋಗಿಸಲು ಜನರೇಟರ್ ಮತ್ತು ಯುಪಿಎಸ್ ವ್ಯವಸ್ಥೆ ಇದೆ.
ಸಂಚಾರಿ ಕ್ಲಿನಿಕ್ ಲಾಭ ಏನು?
ಮೊಬೈಲ್ ಕ್ಲಿನಿಕ್ ಸಾಂಕ್ರಾಮಿಕ ರೋಗಗಳಾದ ಕೋವಿಡ್-19, ಟಿಬಿ, ಮಲೇರಿಯಾ, ಡೆಂಘೀ ಮತ್ತು ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಸಹಕಾರಿ. ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ನಿರಂತರವಾಗಿ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಸಮಯದಲ್ಲಿ ನೀಡಿ, ಆಸ್ಪತ್ರೆಗಳ ಒತ್ತಡ ಕಡಿಮೆ ಮಾಡಲಿದೆ.
ಏನೇನಿದೆ?
ಕ್ಲಿನಿಕ್, ಔಷಧ ಲಭ್ಯ. ಔಷಧ ಸಾಗಿಸಲು ರೆಫ್ರಿಜರೇಟರ್. ತುರ್ತು ಚಿಕಿತ್ಸೆಗೆ ಆಮ್ಲಜನಕ. ಸಾಂಕ್ರಾಮಿಕ ರೋಗ ಪತ್ತೆ ಸೌಲಭ್ಯ. ಕನಿಷ್ಠ ಸರ್ಜರಿಗೆ ಪ್ರತ್ಯೇಕ ಹಾಸಿಗೆ. ಯುಪಿಎಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ