Covid 19 in Karnataka: ರಾಜ್ಯದಲ್ಲೂ 3ನೇ ಅಲೆ ಆರಂಭ: ಸಚಿವ ಸುಧಾಕರ್‌

Published : Jan 05, 2022, 04:35 AM IST
Covid 19 in Karnataka: ರಾಜ್ಯದಲ್ಲೂ 3ನೇ ಅಲೆ ಆರಂಭ: ಸಚಿವ ಸುಧಾಕರ್‌

ಸಾರಾಂಶ

*ಪಾಸಿಟಿವಿಟಿ ದರ ಶೇ.1ರಿಂದ ಶೇ.1.60ಗೆ ಏರಿಕೆ ಇದಕ್ಕೆ ಸಾಕ್ಷಿ *ಸೋಂಕು ನಿಯಂತ್ರಣಕ್ಕಾಗಿ ಮೈಕ್ರೋ ಕಂಟೇನ್ಮೆಂಟ್‌ ವಲಯ *ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ನಿರ್ಬಂಧ ಜಾರಿ  

ಬೆಂಗಳೂರು (ಜ.5): ರಾಜ್ಯದ ಕೋವಿಡ್‌ ಪಾಸಿಟಿವಿಟಿ (Covid 19 Cases) ದರ ಕಳೆದ ಆರು ತಿಂಗಳಿನಿಂದ ಶೇ.1 ರೊಳಗೆ ಇದ್ದದ್ದು ಇದೀಗ ಶೇ.1.60ಗೆ ಏರಿಕೆಯಾಗಿದೆ. ಇದು ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ಬಂದಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್‌, ನಾವೀಗ ಮೂರನೇ ಅಲೆಯ ಆರಂಭದಲ್ಲಿದ್ದೇವೆ. ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೊದಲು ಜ.15ರ ನಂತರ ಮೂರನೇ ಅಲೆ ಬರಬಹುದು ಎಂದು ತಜ್ಞರು ಹೇಳಿದ್ದರು. ಆದರೆ ಈಗಾಗಲೇ ಮೂರನೇ ಅಲೆ ಆರಂಭವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮೆಟ್ರೋಪಾಲಿಟನ್‌ ಸಿಟಿಗಳಲ್ಲಿ ಹೆಚ್ಚು ಪ್ರಕರಣ

ಒಮಿಕ್ರೋನ್‌ ಸೋಂಕು ದಿನೇ ದಿನೆ ಹೆಚ್ಚಾಗ್ತಿದೆ. ಸೋಮವಾರ ಒಂದೇ ದಿನ 1290 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲೇ ಹೆಚ್ಚು ಸೋಂಕಿತರಿದ್ದಾರೆ. ಮೆಟ್ರೋಪಾಲಿಟನ್‌ ಸಿಟಿಗಳಲ್ಲಿ ಹೆಚ್ಚು ಪ್ರಕರಣ ವರದಿಯಾಗುತ್ತಿದೆ. ಹೀಗಾಗಿ, ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಜನಸಂದಣಿ ಪ್ರದೇಶದಲ್ಲಿ ಇನ್ನಷ್ಟುನಿಗಾ ವಹಿಸುವ ಅಗತ್ಯ ಇದೆ. ಇದಕ್ಕಾಗಿ ಮೈಕ್ರೋ ಕಂಟೈನ್ಮೆಂಟ್‌ ವಲಯಗಳನ್ನು ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಸೋಂಕು ಹೆಚ್ಚಳವಾಗಿದ್ದು ಜನ ಹೆಚ್ಚು ಜಾಗೃತಿ ವಹಿಸಬೇಕಿದೆ ಎಂದು ಆರೋಗ್ಯ ಸಚಿವರು ಹೇಳಿದರು.

ಇದನ್ನೂ ಓದಿWeekend Curfew ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗ್ಳೂರಲ್ಲಿ 2 ವಾರ ಶಾಲಾ-ಕಾಲೇಜು ಬಂದ್

ಬೆಂಗಳೂರು ಈಗಾಗಲೇ ಕೆಂಪು ವಲಯದಲ್ಲಿದ್ದು, ಪ್ರತ್ಯೇಕವಾದ ಕಠಿಣ ನಿಯಮ ಅನಿರ್ವಾಯ. ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು. ಕೊರೊನಾ ಬರುವುದನ್ನ ತಡೆಯಲು ಆಗುವುದಿಲ್ಲ, ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ವೇಗವನ್ನು ತಗ್ಗಿಸಲು ಸಾಧ್ಯವಿದೆ. ಈ ಬಗ್ಗೆ ತಜ್ಞರೊಂದಿಗೆ ಸಭೆ ನಡೆಸಿ ಮಾರ್ಗೋಪಾಯ ರೂಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಮಕ್ಕಳಿಗೆ ಲಸಿಕೆ

ಸೋಮವಾರ ಒಂದೇ ದಿನ 15 ರಿಂದ 18 ವರ್ಷದ 4.22 ಲಕ್ಷ ಮಕ್ಕಳಿಗೆ ಲಸಿಕೆ ನೀಡಿ ಗುರಿಯ ಶೇ.66 ತಲುಪಿದ್ದೇವೆ. 10-15 ದಿನಗಳಲ್ಲಿ ಎಲ್ಲಾ ಮಕ್ಕಳಿಗೆ ಮೊದಲ ಡೋಸ್‌ ಲಸಿಕೆ ನೀಡುತ್ತೇವೆ. ಎರಡನೇ ಡೋಸ್‌ ಲಸಿಕೆ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಪಾದಯಾತ್ರೆ ಕೈ ಬಿಡಲು ಕಾಂಗ್ರೆಸ್‌ಗೆ ಮನವಿ

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತಾನು ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಕೈಬಿಡಬೇಕು ಎಂದು ಸಚಿವ ಸುಧಾಕರ್‌ ಮನವಿ ಮಾಡಿದ್ದಾರೆ. ಸೋಂಕು ಇಷ್ಟುವೇಗವಾಗಿ ಹರಡಬಹುದು ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ಜ.15 ರ ನಂತರ ಮೂರನೇ ಅಲೆ ಬರುತ್ತದೆ ಎಂಬ ಭಾವನೆ ಇತ್ತು. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ವೇಗವಾಗಿ ಹರಡುತ್ತಿರುವುದನ್ನು ನೋಡಿಯಾದರೂ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಕೈ ಬಿಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Mekedatu Padayatre ಕಾಂಗ್ರೆಸ್ ಪಾದಯಾತ್ರೆಗೆ ಕೊರೋನಾ ಎಚ್ಚರಿಕೆ ಕೊಟ್ಟ ಸುಧಾಕರ್‌ಗೆ ಡಿಕೆಶಿ ಡಿಚ್ಚಿ

ಕಾಂಗ್ರೆಸ್‌ನವರು ಜನರಿಗಾಗಿ, ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರ ಏನು ಇಲ್ಲ. ಅಧಿಕಾರ ಇದ್ದಾಗ ಇದೆಲ್ಲ ಮಾಡಲು ಅವರಿಗೆ ನೆನಪು ಆಗಲಿಲ್ಲ, ಈಗ ಚುನಾವಣೆ ಇರುವುದರಿಂದ ಇದೆಲ್ಲವನ್ನು ಮಾಡುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆಸಿ ಇಲ್ಲಿ ಹೋರಾಟಕ್ಕೆ ಮುಂದಾಗುತ್ತಿದ್ದಾರೆ. ಆದರೆ ಇದರಿಂದ ಕೊರೊನಾ ಹೆಚ್ಚಳ ಆದರೆ, ಅವರೇ ಅದರ ಜವಾಬ್ದಾರಿ ಹೊರಬೇಕು. ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ಸೋಂಕು ಹೆಚ್ಚಾಗುತ್ತಿದೆ. ಇದಕ್ಕೆ ನಾವು ಕಾರಣನಾ? ಇದು ಸ್ವಾಭಾವಿಕವಾಗಿ ಆಗುತ್ತಿದೆ. ಸರ್ಕಾರದ ನಿಯಮ ಎಲ್ಲರೂ ಪಾಲನೆ ಮಾಡಬೇಕು. ಜನರ ಹಿತದೃಷ್ಟಿಯಿಂದ ಸರ್ಕಾರ ನಿಯಮ ಮಾಡುತ್ತದೆ ಎಂಬುದನ್ನು ಕಾಂಗ್ರೆಸ್‌ ಅರ್ಥಮಾಡಿಕೊಳ್ಳಬೇಕು ಎಂದು ಡಾ. ಸುಧಾಕರ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ