ಸೋಂಕಿತೆ ಸಾವು ಬಚ್ಚಿಟ್ಟಖಾಸಗಿ ಆಸ್ಪತ್ರೆ!| 7ನೇ ತಾರೀಕಿನಂದೇ ಮೃತಪಟ್ಟಿದ್ದ ಮಹಿಳೆ| ಕುಟುಂಬಕ್ಕೂ ವಿಷಯ ತಿಳಿಸದ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ| ಅಂತ್ಯ ಸಂಸ್ಕಾರವನ್ನೂ ಮಾಡದೇ ವಿಷಯ ಮುಚ್ಚಿಟ್ಟು ಶವ ಬೇರೆ ಆಸ್ಪತ್ರೆಗೆ ವರ್ಗ| ನಾರ್ಥ್ ಆಸ್ಪತ್ರೆ ಸೀಲ್‌ಡೌನ್
ಬೆಂಗಳೂರು(ಮೇ.10): ಮಹಾಮಾರಿ ಕೊರೋನಾ ಸೋಂಕಿಗೆ ಬೆಂಗಳೂರಿನಲ್ಲಿ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದು, ಇದರಿಂದ ರಾಜ್ಯದಲ್ಲಿ ಮೃತಪಟ್ಟಒಟ್ಟು ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ ಶನಿವಾರ ಬೆಂಗಳೂರು ನಗರದಲ್ಲಿ ಮತ್ತೆ 12 ಪ್ರಕರಣಗಳು ಪತ್ತೆಯಾಗಿದ್ದು, ನಗರದ ಒಟ್ಟು ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ ಆದಂತಾಗಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ನಾಥ್‌ರ್ ಆಸ್ಪತ್ರೆ ಹೆಸರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹೆಣ್ಣೂರು ಮೂಲದ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರು ಚಿಕಿತ್ಸೆ ಫಲಿಸದೆ ಮೇ 7ರಂದೇ ಮೃತಪಟ್ಟಿದ್ದಾರೆ. ಆದರೆ, ಶವವನ್ನು ಕುಟುಂಬಸ್ಥರಿಗೂ ನೀಡದೆ ಅಂತ್ಯ ಸಂಸ್ಕಾರವನ್ನೂ ಮಾಡದೆ ಸಿ.ವಿ.ರಾಮನ್ ನಗರದ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿ ಪ್ರಕರಣವನ್ನು ಮುಚ್ಚಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಲಾಕ್‌ಡೌನ್ ಸಡಿಲಿಕೆ ಬಳಿಕ ದೇಶದಲ್ಲಿ ಬರೋಬ್ಬರಿ 21000 ಕೇಸ್!
ಬೆಂಗಳೂರು ನಗರ ಜಿಲ್ಲಾ ವೈದ್ಯಾಧಿಕಾರಿ ಶ್ರೀನಿವಾಸ್ ಗೂಳೂರು ಅವರು ಮಹಿಳೆ ಸಾವಿನ ಬಗ್ಗೆ ಶನಿವಾರ ರಾತ್ರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಹಿಳೆ ಸಾವಿನ ವಿಷಯ ಹೊರ ಬಂದರೆ ಆಸ್ಪತ್ರೆ ಬಂದ್ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ನಾಥ್‌ರ್ ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿ ವಿಷಯ ಮುಚ್ಚಿಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಕೆಲ ವೈದ್ಯಾಧಿಕಾರಿಗಳೊಂದಿಗೆ ಶಾಮೀಲಾಗಿ ಮೃತ ಮಹಿಳೆ ಶವವನ್ನು ಸಿ.ವಿ.ರಾಮನ್ ನಗರದ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿಟ್ಟಿದ್ದಾರೆ. ಮೃತಪಟ್ಟು ಎರಡು ದಿನಗಳಾದರೂ ಕುಟುಂಬದವರಿಗೂ ಮಾಹಿತಿ ನೀಡದೆ ಮುಚ್ಚಿಟ್ಟಿದ್ದಾರೆ. ತಡವಾಗಿ ಈ ವಿಷಯ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದು ಬಹಿರಂಗವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಮೇ 6ರಂದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ 57 ವರ್ಷದ ಹೆಣ್ಣೂರಿನ ಮಹಿಳೆಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಬಂದಿದೆ. ನಂತರ ಈ ಮಹಿಳೆ ಮೇ 7ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆದರೆ, ಆಸ್ಪತ್ರೆಯವರು ಮತ್ತು ಕೆಲ ವೈದ್ಯಾಧಿಕಾರಿಗಳು ವಿಷಯ ಮುಚ್ಚಿಟ್ಟಿದೆ ಎಂದು ಆರೋಪಿಸಲಾಗಿದೆ.
ಸೋಂಕು ತೀವ್ರ ಹೆಚ್ಚಳ: ಮಾರ್ಗಸೂಚಿಯಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!
15 ದಿನ ಖಾಸಗಿ ಆಸ್ಪತ್ರೆ ಬಂದ್:
ಕೋವಿಡ್ ಪಾಸಿಟಿವ್ ಮಹಿಳೆ ಸಾವಿನ ವಿಚಾರ ಬಹಿರಂಗವಾಗುತ್ತಿದ್ದಂತೆ ನಾಥ್‌ರ್ ಆಸ್ಪತ್ರೆಗೆ ತೆರಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆ ಬಂದ್ ಮಾಡಿ 15 ದಿನಗಳ ಕಾಲ ತೆರೆಯದಂತೆ ಸೂಚಿಸಿದ್ದಾರೆ.
12 ಹೊಸ ಪ್ರಕರಣ
ಬೆಂಗಳೂರಿನ ಶನಿವಾರ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಐವರು ಹೊಂಗಸಂದ್ರದ ಬಿಹಾರಿ ಕಾರ್ಮಿಕರಾಗಿದ್ದು, ಇವರಿಗೆ ಪಿ419 ಸಂಖ್ಯೆಯ ರೋಗಿಯಿಂದ ಸೋಂಕು ಹರಡಿದೆ. ಉಳಿದ ಏಳು ಪ್ರಕರಣಗಳು ಪಾದರಾಯನಪುರದಲ್ಲಿ ಪತ್ತೆಯಾಗಿದ್ದು, ಇಲ್ಲಿನ ಗಲಭೆಯಲ್ಲಿ ಭಾಗಿಯಾಗಿದ್ದ ಪಿ449 ಮತ್ತು ಪಿ454 ಸಂಖ್ಯೆಯ ಸೋಂಕಿತರ ಕುಟುಂಬ ಸದಸ್ಯರಾಗಿದ್ದಾರೆ.