ರಾಜ್ಯದಲ್ಲಿ ಡೆಂಘೀ ತಾಂಡವ: ಒಂದೇ ತಿಂಗಳಲ್ಲಿ 2489 ಕೇಸ್‌

By Kannadaprabha News  |  First Published Jul 31, 2023, 2:40 AM IST

ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಡೆಂಘೀ ಜ್ವರದ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಜುಲೈ ತಿಂಗಳಿನಲ್ಲಿಯೇ ಬರೋಬ್ಬರಿ 2,489 ಪ್ರಕರಣಗಳು ದೃಢಪಟ್ಟಿವೆ. 


ಬೆಂಗಳೂರು (ಜು.31): ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಡೆಂಘೀ ಜ್ವರದ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಜುಲೈ ತಿಂಗಳಿನಲ್ಲಿಯೇ ಬರೋಬ್ಬರಿ 2,489 ಪ್ರಕರಣಗಳು ದೃಢಪಟ್ಟಿವೆ. ಜುಲೈನಲ್ಲಿ ರಾಜ್ಯದ ಹಲವು ಕಡೆ ಭಾರೀ ಮಳೆ ಸುರಿದ ಪರಿಣಾಮ ಜನರಲ್ಲಿ ಡೆಂಘೀ ಜ್ವರದ ಬಾಧೆ ಹೆಚ್ಚಾಗಿದೆ. ಈ ವರ್ಷದ ಜನವರಿಯಿಂದ ಜೂನ್‌ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 2250 ಡೆಂಘೀ ಜ್ವರ ಪ್ರಕರಣ ಕಾಣಿಸಿಕೊಂಡಿದ್ದವು. ಆದರೆ, ಕಳೆದ 30 ದಿನದಲ್ಲಿ 2,489 ಪ್ರಕರಣಗಳು ದೃಢಪಡುವ ಮೂಲಕ ಸಂಖ್ಯೆ ದ್ವಿಗುಣಗೊಂಡಿದೆ. ಈವರೆಗೆ ಒಟ್ಟು 4,739 ಪ್ರಕರಣ ಕಾಣಿಸಿಕೊಂಡಿವೆ.

ಈವರೆಗೆ 58,871 ಮಂದಿಯಲ್ಲಿ ಡೆಂಘೀ ಜ್ವರದ ರೋಗ ಲಕ್ಷಣಗಳು ಕಂಡುಬಂದಿದ್ದು, ಈ ಪೈಕಿ 37,957 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕೃತವಾಗಿ ತಿಳಿಸಿದೆ. ಕಳೆದ ಜುಲೈ 1ರಿಂದ ಈವರೆಗೆ ಒಟ್ಟು 17,987 ಮಂದಿಯಲ್ಲಿ ಡೆಂಘೀ ಜ್ವರದ ರೋಗ ಲಕ್ಷಣ ಕಾಣಿಸಿಕೊಂಡಿದೆ. ಈ ಪೈಕಿ 11,685 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಒಟ್ಟು 9,620 ಮಂದಿಯಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿತ್ತು. ಈ ಪೈಕಿ ಒಂಬತ್ತು ಮಂದಿ ಜ್ವರದ ತೀವ್ರತೆಗೆ ಮೃತಪಟ್ಟಿದ್ದರು. ಈ ಬಾರಿ ಮರಣ ಹೊಂದಿದ ಬಗ್ಗೆ ಯಾವುದೇ ವರದಿಯಾಗಿಲ್ಲ.

Tap to resize

Latest Videos

ಹಣ ಹಾಗೂ ಹೆಣದ ಮೇಲೆ ಕಾಂಗ್ರೆಸ್‌ ರಾಜಕಾರಣ: ಎನ್‌.ರವಿಕುಮಾರ್‌

ರಾಜಧಾನಿಯಲ್ಲಿ ಡೆಂಘೀ ತಾಂಡವ: ರಾಜ್ಯದ ಇತರೆ ಜಿಲ್ಲೆಗೆ ಹೋಲಿಕೆ ಮಾಡಿದರೆ, ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಜ್ವರದ ಪ್ರಕರಣಗಳ ಸಂಖ್ಯೆ ಅತ್ಯಧಿಕವಾಗಿದೆ. ಈವರೆಗೆ ಒಟ್ಟು 2519 ಪ್ರಕರಣಗಳು ನಗರದಲ್ಲಿ ಕಾಣಿಸಿಕೊಂಡಿದೆ. ಈವರೆಗೆ ಬೆಂಗಳೂರಿನಲ್ಲಿ 6,610 ಮಂದಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದೆ. ಈ ಪೈಕಿ 4,291 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಜುಲೈ ತಿಂಗಳಿನಲ್ಲಿಯೇ ಬೆಂಗಳೂರಿನಲ್ಲಿ ಒಟ್ಟು 1,774 ಪ್ರಕರಣ ದೃಢಪಟ್ಟಿವೆ. ಕಳೆದ 15 ದಿನದಲ್ಲಿ 1599 ಪ್ರಕರಣ ಕಾಣಿಸಿಕೊಂಡಿರುವುದು ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದೆ.

ಉಳಿದಂತೆ ಮೈಸೂರಿನಲ್ಲಿ 314, ವಿಜಯಪುರದಲ್ಲಿ 137, ಶಿವಮೊಗ್ಗದಲ್ಲಿ 131, ಬೆಳಗಾವಿಯಲ್ಲಿ 135, ತುಮಕೂರು, 75, ದಾವಣಗೆರೆ 71, ಬಾಗಲಕೋಟೆಯಲ್ಲಿ 68, ಧಾರವಾಡ 99, ಗದಗ 63, ಕಲಬುರಗಿ 85,ಬಳ್ಳಾರಿ 74, ಚಾಮರಾಜನಗರ, 57, ಮಂಡ್ಯ 54, ಹಾಸನ 78, ದಕ್ಷಿಣ ಕನ್ನಡ 86, ಉಡುಪಿ 78, ಚಿಕ್ಕಮಗಳೂರು 81, ಕೊಡಗು 88, ಚಿತ್ರದುರ್ಗದಲ್ಲಿ 107 ಉಳಿದ ಜಿಲ್ಲೆಗಳಲ್ಲಿ 50ಕ್ಕಿಂತ ಕಡಿಮೆ ಪ್ರಕರಣ ಕಾಣಿಸಿಕೊಂಡಿವೆ.

ರಾಜ್ಯದ ಹಲವೆಡೆ ಮದ್ರಾಸ್‌ ಐ: ಡೆಂಘೀ ಪ್ರಕರಣಗಳ ಜತೆಗೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಣ್ಣಿನ ಉರಿ, ಊತದ ಸಮಸ್ಯೆ ಜನರನ್ನು ಬಾಧಿಸುತ್ತಿದೆ. ಶಿವಮೊಗ್ಗ, ದಾವಣಗೆರೆ, ಹಾವೇರಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಸಂಖ್ಯೆಯ ಪ್ರಕರಣ ದೃಢಪಟ್ಟಿವೆ. ಮದ್ರಾಸ್‌ ಐ ಕಾಣಿಸಿಕೊಂಡ ರೋಗಿಯ ಕಣ್ಣಿನ ಬಿಳಿಯ ಭಾಗ ಕೆಂಪಾಗಲಿದೆ. ಕಣ್ಣಿನ ಉರಿ ಮತ್ತು ನೋವಿನೊಂದಿಗೆ ನೀರು ಸುರಿಯಲಿದೆ. ಕಣ್ಣುಗಳು ಊದಿಕೊಳ್ಳುತ್ತವೆ. ಈ ಲಕ್ಷಣ ಕಾಣಿಸಿಕೊಂಡವರು, ಜನದಟ್ಟಣೆ ಇರುವ ಸ್ಥಳದಿಂದ ದೂರ ಇರಬೇಕು. ಪದೇ ಪದೆ ಕಣ್ಣು ಮುಟ್ಟಿಕೊಳ್ಳಬಾರದು, ಕೈಗಳನ್ನು ಸೋಪಿನಿಂದ ಆಗಾಗ ತೊಳೆಯಬೇಕು, ಇತರೆ ವ್ಯಕ್ತಿಗಳ ಸಂಪರ್ಕದಿಂದ ದೂರ ಇರಬೇಕು, ರೋಗಿ ಬಳಕೆ ಮಾಡಿದ ಟವಲ್‌, ತಲೆ ದಿಂಬುಗಳನ್ನು ಬಳಕೆ ಮಾಡಬಾರದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಡೆಂಘೀ ಜ್ವರದ ಲಕ್ಷಣಗಳೇನು?: ಜ್ವರ, ತಲೆನೋವು, ಸುಸ್ತು, ವಾಂತಿ, ಗಂಟಲು ನೋವು, ಹೊಟ್ಟೆನೋವು, ಮೈಕೈ ನೋವು, ಮೈ ಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ತಡೆಗೆ ಏನು ಮಾಡಬೇಕು?
- ಮನೆಯ ಅಕ್ಕ-ಪಕ್ಕದ ಸ್ಥಳಗಳಲ್ಲಿ ಮಳೆ ನೀರು ನಿಲುಗಡೆ ಆಗದಂತೆ ಎಚ್ಚರ ವಹಿಸಿ
- ತೆಂಗಿನ ಚಿಪ್ಪು, ಟೈಯರ್‌, ಹೂವಿನ ಕುಂಡ, ಇತರೆಡೆ ನೀರಿರದಂತೆ ನೋಡಿಕೊಳ್ಳಿ
- ಮನೆಯಲ್ಲಿ ಸೊಳ್ಳೆ ಪರದೆ ಬಳಕೆ ಮಾಡುವ ಮೂಲಕ ಸೊಳ್ಳೆ ಕಡಿತದಿಂದ ಪಾರಾಗಿ
- ನೀರು ಶೇಖರಣೆ ಮಾಡುವ ತೊಟ್ಟಿ, ಟ್ಯಾಂಕ್‌ಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ
- ಬೆಚ್ಚನೆಯ ಮತ್ತು ಕೈ-ಕಾಲು ಮೈ ಮುಚ್ಚುವಂತಹ ಉಡುಪುಗಳನ್ನು ಧರಿಸಿ

ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್‌ ಆದ್ಯತೆ: ಸಚಿವ ಶಿವಾನಂದ ಪಾಟೀಲ

ಡೆಂಘೀ ಪ್ರಕರಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
- ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

click me!