Corona, Omicron: ಡಬಲ್ ಶಾಕ್, ಕರ್ನಾಟಕದಲ್ಲಿ ಕೊರೋನಾ ಮಧ್ಯೆ ಒಮಿಕ್ರಾನ್ ಸ್ಫೋಟ

By Suvarna NewsFirst Published Dec 31, 2021, 6:10 PM IST
Highlights

* ಹೊಸ ವರ್ಷದ ಆರಂಭದಲ್ಲೇ ರಾಜ್ಯದಲ್ಲಿ ಒಮಿಕ್ರಾನ್​ ಸ್ಫೋಟ 
* ಖಚಿತಪಡಿಸಿದ ಆರೋಗ್ಯ ಇಲಾಖೆ ಸಚಿವ ಡಾ ಸುಧಾಕರ್
* ಈಗ ಕರ್ನಾಟಕದಲ್ಲಿ ಈಗ ಕೊರೋನಾ ಆತಂಕದ ಮಧ್ಯೆ ಒಮಿಕ್ರಾನ್ ಭೀತಿ

ಬೆಂಗಳೂರು, (ಡಿ.31): ಕೊರೋನಾ ವೈರಸ್(Coronavirus)  ಪಾಸಿಟಿವ್ ಕೇಸ್ ಸಂಖ್ಯೆ ಹೆಚ್ಚಳವಾಗಿದೆ. ಇದರ ಮಧ್ಯೆ ಕೊರೋನಾ ರೂಪಾಂತರಿ ವೈರಸ್ ಒಮಿಕ್ರಾನ್(Omicron) ಸಹ ಕರ್ನಾಟಕದಲ್ಲಿ ಸ್ಫೋಟವಾಗಿದೆ.

ಹೌದು..ರಾಜ್ಯದಲ್ಲಿ ಇಂದು(ಶುಕ್ರವಾರ) ಒಂದೇ ದಿನ 23 ಮಂದಿಗೆ ಮಾರಕ ಒಮಿಕ್ರಾನ್​ ಸೋಂಕು ದೃಢಪಟ್ಟಿವೆ. ಈ  ಬಗ್ಗೆ ಸ್ವತಃ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಖಚಿತಪಡಿಸಿದ್ದಾರೆ. 

Section 144: ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ, ಉಲ್ಲಂಘನೆ ಮಾಡಿದ್ರೆ ಕ್ರಮ ಕಟ್ಟಿಟ್ಟ ಬುತ್ತಿ

ಅಮೆರಿಕ, ಯುರೋಪ್​​ನಿಂದ ಬಂದಿದ್ದ ಪ್ರಯಾಣಿಕರಿಗೆ ಒಮಿಕ್ರಾನ್​ ಸೋಂಕು ತಗುಲಿದೆ. ವಿದೇಶಗಳಿಂದ ಬಂದ 19 ಮಂದಿ ಪ್ರಯಾಣಿಕರಿಗೆ ಸೋಂಕು ತಗುಲಿದೆ ಎಂದು  ಟ್ವಿಟರ್​ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಮಾಹಿತಿ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 50 ರ ಗಡಿ ದಾಟಿದೆ.

ಇನ್ನು ರಾಜ್ಯದಲ್ಲಿ ಕೊರೋನಾ ಅಬ್ಬರ ಕೂಡ ಮುಂದುವರೆದಿದೆ.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್​ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಕೊಡಗು ಜಿಲ್ಲೆಯ ಮಡಿಕೇರಿಯ ಸಂತ ಜೋಸೆಫ್ ಶಾಲೆಯಲ್ಲಿ ಕೊರೊನಾ ಸ್ಪೋಟಗೊಂಡಿದ್ದು, ಶಾಲೆಯ 10 ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿದೆ. 9ನೇ ತರಗತಿಯ 58 ವಿದ್ಯಾರ್ಥಿಗಳಲ್ಲಿ ಹತ್ತು ಮಕ್ಕಳಿಗೆ ಪಾಸಿಟಿವ್ ಬಂದಿದ್ದು, ಉಳಿದ 600 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಕೈಗೊಳ್ಳಲಾಗಿದೆ. ಜತೆಗೆ ಶಾಲೆಯ 20 ಸಿಬ್ಬಂದಿಗಳಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ. ಶಾಲೆಗೆ ಕೊಡಗು ಡಿಎಚ್ ಓ ಡಾ. ವೆಂಕಟೇಶ್ ಭೇಟಿ, ಮತ್ತಷ್ಟು ಪಾಸಿಟಿವ್ ಬಂದರೆ ಶಾಲೆ ಬಂದ್ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದಿದ್ದಾರೆ. ಈ ಕುರಿತು  ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಹೊಸ ವರ್ಷದ ತಯಾರಿ ಆರಂಭವಾಗಿದೆ. ಸೋಂಕು ಹರಡದಂತೆ ತಡೆಯಲು ನಿಯಮಗಳನ್ನೂ ಮಾಡಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.

ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕಫ್ರ್ಯೂವನ್ನು ಜಾರಿಗೆ ತಂದಿದೆ. ಹೊಸ ವರ್ಷಾಚರಣೆ ವೇಳೆ ಯುವ ಸಮುದಾಯವೂ ಸೇರಿದಂತೆ ಬಹಳಷ್ಟು ಮಂದಿ ಹದ್ದುಮೀರಿದ ವರ್ತನೆ ಪ್ರದರ್ಶಿಸುವುದು ಸಾಮಾನ್ಯ. ಇದರಿಂದ ಜನ ಸಂದಣಿಯ ನಡುವೆ ಸೋಂಕು ವ್ಯಾಪಿಸಿ ಮತ್ತಷ್ಟು ಅಪಾಯಕಾರಿ ಸನ್ನಿವೇಶಗಳನ್ನು ಸೃಷ್ಟಿಸುವ ಆತಂಕವಿದೆ.

ಈ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮವನ್ನು ಮರೆತು ಪೊಲೀಸರು ಇಂದು(ಶುಕ್ರವಾರ) ಸಂಜೆಯಿಂದಲೇ ರಸ್ತೆಗಿಳಿದಿದ್ದಾರೆ. ನಗರಾದ್ಯಂತ 500 ಕಡೆ ಬ್ಯಾರಿಕೇಡ್‍ಗಳನ್ನು ಹಾಕಿ ನಾಕಾಬಂಧಿ ನಡೆಸಲಿದ್ದಾರೆ.

ಕೋವಿಡ್​ ಚಿಕಿತ್ಸೆಗೆ ಸರ್ ​ಸಿ.ವಿ.ರಾಮನ್​ ಆಸ್ಪತ್ರೆ ಮೀಸಲು
ಕೋವಿಡ್​ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಇಂದಿರಾನಗರದ ಸರ್​ ಸಿ.ವಿ. ರಾಮನ್​ ಸಾರ್ವಜನಿಕ ಆಸ್ಪತ್ರೆಯನ್ನು ಮೀಸಲು ಕೋವಿಡ್​ ಆಸ್ಪತ್ರೆಯನ್ನಾಗಿ ಗುರುತಿಸಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್​ ಸುತ್ತೋಲೆ ಹೊರಡಿಸಿದ್ದಾರೆ.

2020ರಲ್ಲಿ ಕೋವಿಡ್​ ಪ್ರಕರಣಗಳ ಏರಿಕೆ ಬಳಿಕ ಈ ಆಸ್ಪತ್ರೆಯನ್ನು ಮೀಸಲು ಕೋವಿಡ್​ ಆಸ್ಪತ್ರೆ ಎಂದು ಗುರುತಿಸಿ, ಎಲ್ಲ ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿತ್ತು. 2021ರಲ್ಲಿ ಕೋವಿಡ್​ ನಿಯಂತ್ರಣಕ್ಕೆ ಬಂದ ಬಳಿಕ ಅಲ್ಲಿ ಕೋವಿಡೇತರ ರೋಗಿಗಳಿಗೂ ಚಿಕಿತ್ಸೆ ಪುನರಾರಂಭಿಸಲಾಗಿತ್ತು. ಈಗ ಮತ್ತೆ ಹೊಸ ಪ್ರಕರಣಗಳು ಹೆಚ್ಚಳ ಆಗುತ್ತಿರುವುದರಿಂದ ಆಸ್ಪತ್ರೆಯಲ್ಲಿ ಕೋವಿಡೇತರ ಚಿಕಿತ್ಸೆಗಳನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಕೇವಲ ಕೋವಿಡ್​ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್​ ತಿಳಿಸಿದ್ದಾರೆ.

ಗೃಹ ಸಚಿವರ ಮನವಿ
ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆ 6 ಗಂಟೆಯಿಂದ ನಿರ್ಬಂಧವಿದೆ. ಹೊಸ ವರ್ಷಾಚರಣೆ ಹೆಸರಿನಲ್ಲಿ ಹೆಚ್ಚು ಜನರ ಸೇರಬಾರದು. ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

 ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಕೊರೋನಾ ಸ್ಫೋಟವಾಗಿದೆ.  ಸೋಂಕು ಹರಡದಂತೆ ತಡೆಯಲು ನಿರ್ಬಂಧ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ನಿರ್ಬಂಧ ಹಾಕಲಾಗಿದೆ. ಜನರು ತಮ್ಮ ಮನೆಗಳಲ್ಲೇ ಹೊಸವರ್ಷಾಚರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

click me!