ಕೇಂದ್ರದ ನೀತಿಯಿಂದ ರಾಜ್ಯದ 22.38 ಲಕ್ಷ ವಾಹನ ಗುಜರಿಗೆ

By Kannadaprabha NewsFirst Published Feb 12, 2021, 9:41 AM IST
Highlights

ರಾಜ್ಯದಲ್ಲಿವೆ 15 ವರ್ಷ ಮೇಲ್ಪಟ್ಟ 62 ಲಕ್ಷ ವಾಹನ| ಆ ಪೈಕಿ 22.38 ಲಕ್ಷ ವಾಣಿಜ್ಯ ವಾಹನ ಗುಜರಿಗೆ| ಬೆಂಗಳೂರಿನಲ್ಲೇ 21.96 ಲಕ್ಷ ವಾಹನ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿ 42 ಸಾವಿರ ವಾಹನ| 

ಬೆಂಗಳೂರು(ಫೆ.12): ಪರಿಸರ ಸಂರಕ್ಷಣೆ ಮತ್ತು ಆಟೋಮೊಬೈಲ್‌ ಉದ್ಯಮಕ್ಕೆ ಚೇತರಿಕೆ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಸ್ಕ್ರಾಪಿಂಗ್‌ ಪಾಲಿಸಿ (ಗುಜರಿ ನೀತಿ)ಯಿಂದ ರಾಜ್ಯದ 22.38 ಲಕ್ಷಕ್ಕೂ ಹೆಚ್ಚಿನ ವಾಹನಗಳು ಗುಜರಿಗೆ ಸೇರಲಿವೆ. ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳನ್ನು ಗುಜರಿಗೆ(ಸ್ಕ್ರಾಪ್‌) ಹಾಕುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿದ ಆದೇಶದ ಮೇರೆಗೆ ಕೇಂದ್ರ ಸರ್ಕಾರ ನೀತಿ ರೂಪಿಸಿದೆ.

ರಾಜ್ಯದಲ್ಲಿ ಸಾರಿಗೆ ಇಲಾಖೆ ಗುರುತಿಸಿರುವಂತೆ 2020ರ ಮಾರ್ಚ್‌ವರೆಗೆ ಸುಮಾರು 2.26 ಕೋಟಿ ವಾಹನಗಳಿದ್ದು, ಈ ಪೈಕಿ 62.66 ಲಕ್ಷ ವಾಹನಗಳು 15 ವರ್ಷ ಮೀರಿವೆ. ಫೆ.1ರಂದು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಹಾಗೂ 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳನ್ನು ಗುಜರಿಗೆ ಹಾಕಬೇಕು ಎಂದು ಹೇಳಿತ್ತು. ಆ ಪ್ರಕಾರ, 15 ವರ್ಷ ಮೀರಿದ ವಾಣಿಜ್ಯ ವಾಹನಗಳ ಸಂಖ್ಯೆ ರಾಜ್ಯದಲ್ಲಿ 22.38 ಲಕ್ಷದಷ್ಟಿದ್ದು, ಇವಗಳನ್ನು ಗುಜರಿಗೆ ಹಾಕಬೇಕಾಗುತ್ತದೆ.

ನಿಮ್ಮ ವಾಹನ 15-20 ವರ್ಷಕ್ಕಿಂತ ಹಳೆಯದಾಗಿದ್ರೆ ಗುಜರಿಗೆ ಹಾಕ್ರಿ! ಏನ್ರಿ ಇದು ಪಾಲಿಸಿ.?

ಈ ಪೈಕಿ ಬೆಂಗಳೂರಿನಲ್ಲೇ 21.96 ಲಕ್ಷ ವಾಹನಗಳು ಇವೆ. ಇದನ್ನು ಹೊರತುಪಡಿಸಿದರೆ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿ 42 ಸಾವಿರ ವಾಹನಗಳಿವೆ. ಇಲ್ಲೂ ಕೂಡ ಸಾರಿಗೆಯೇತರ ವಾಹನಗಳೇ ಹೆಚ್ಚಿದ್ದು, ಬೈಕ್‌ ಹೊರತುಪಡಿಸಿ ಕಾರು ಸೇರಿ ಇನ್ನಿತರ 5.67 ಲಕ್ಷ ವಾಹನಗಳನ್ನು ಗುಜರಿಗೆ ಹಾಕಬೇಕಾಗುತ್ತದೆ.

15 ವರ್ಷ ಪೂರ್ಣಗೊಂಡಿರುವ 62.66 ಲಕ್ಷ ವಾಹನಗಳು

ಅವುಗಳಲ್ಲಿ 54.2 ಲಕ್ಷ ಬೈಕ್‌, ಕಾರು, ಜೀಪ್‌, ಟ್ರ್ಯಾಕ್ಟರ್‌, ಕಟ್ಟಡ ನಿರ್ಮಾಣ ವಾಹನಗಳು ಸೇರಿವೆ. ಇವುಗಳಲ್ಲಿ 40.28 ಲಕ್ಷ ದ್ವಿಚಕ್ರ ವಾಹನ, 11.7 ಲಕ್ಷ ಕಾರುಗಳು ಇವೆ.
 

click me!