ರಾಜ್ಯದ 195 ತಾಲೂಕಲ್ಲಿ ಬರ, ಸರ್ಕಾರ ಘೋಷಣೆ: ನಿಮ್ಮ ಊರು ಇದೆಯಾ ಚೆಕ್ ಮಾಡಿಕೊಳ್ಳಿ!

By Kannadaprabha News  |  First Published Sep 15, 2023, 4:45 AM IST

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2023ರ ಮುಂಗಾರು ಹಂಗಾಮಿನಲ್ಲಿ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದೆ.


ಬೆಂಗಳೂರು (ಸೆ.15): ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2023ರ ಮುಂಗಾರು ಹಂಗಾಮಿನಲ್ಲಿ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದೆ. ಈ ಮೂಲಕ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ, 195 ತಾಲೂಕುಗಳನ್ನು ಬರಪೀಡಿತ ಎಂಬುದಾಗಿ ಅಧಿಕೃತವಾಗಿ ಪರಿಗಣಿಸಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯ ರಾಜ್ಯ ಸಚಿವ ಸಂಪುಟ ಉಪಸಮಿತಿಯ ಶಿಫಾರಸ್ಸಿನ ಮೇರೆಗೆ ಸರ್ಕಾರವು 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳು ಮತ್ತು 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಕೇಂದ್ರ ಸರ್ಕಾರದ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳ ಅನ್ವಯ ಒಟ್ಟು 195 ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ.

ಜಿಲ್ಲಾಧಿಕಾರಿಗಳಿಂದ ಪಡೆದ ಬೆಳೆಹಾನಿಯ ಸಮೀಕ್ಷೆಯ ವರದಿಯ ಅನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ. 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸಲಾಗಿದೆ. ಮುಂದಿನ ಆರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದೇ ಮೊದಲು ಅಲ್ಲಿಯವರೆಗೂ ಬರ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಬರ ನಿರ್ವಹಣೆ ಕಾರ್ಯಕ್ರಮ ಕೈಗೊಳ್ಳಲು ಸರ್ಕಾರದಿಂದ ಕಾಲಕಾಲಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ನಿಯಮಗಳ ಅನ್ವಯ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಉಲ್ಲೇಖಿಸಲಾಗಿದೆ.

Tap to resize

Latest Videos

ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ, ದಕ್ಷಿಣದ ಪಪ್ಪು ಉದಯನಿಧಿ ಸ್ಟಾಲಿನ್: ಶ್ರೀರಾಮುಲು

ಬುಧವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ಸಭೆ ನಡೆಯಿತು. ಈ ವೇಳೆ ಮಳೆಯಿಂದ ರಾಜ್ಯದ ವಿವಿಧ ತಾಲೂಕುಗಳಲ್ಲಿನ ಬರ ಪರಿಸ್ಥಿತಿಯ ಬಗ್ಗೆ ನಡೆಸಿದ ವಿಸ್ತೃತ ಸಮೀಕ್ಷೆಯ ಮಾಹಿತಿಯ ವರದಿ ಪರಿಶೀಲಿಸಲಾಯಿತು. ಬರ ಪೀಡಿತ ಎಂದು ಘೋಷಿಸುವ ಸಂಬಂಧ ಕೇಂದ್ರದ ಮಾನದಂಡದ ಮಾರ್ಗಸೂಚಿಯ ಅಡಿಯಲ್ಲಿ ಬರುವ 161 ತಾಲೂಕು ಸೇರಿದಂತೆ ಮಳೆಯ ಕೊರತೆ ಇದ್ದರೂ ಸಾಧಾರಣ ಬರ ಸ್ಥಿತಿ ಇರುವ 34 ತಾಲೂಕುಗಳನ್ನು ಸಹ ಬರ ಪೀಡಿತ ಎಂದು ಘೋಷಿಸುವಂತೆ ರಾಜ್ಯ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿತ್ತು. ಆ ಶಿಫಾರಸ್ಸನ್ನು ಪರಿಗಣಿಸಿದ ಸರ್ಕಾರ ಗುರುವಾರ ಅಧಿಕೃತವಾಗಿ ಬರ ಘೋಷಣೆ ಮಾಡಿದೆ.

ಆರ್ಥಿಕ ನೆರವಿಗೆ ಕೇಂದ್ರಕ್ಕೆ ಪ್ರಸ್ತಾವನೆ: ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೈಗೊಳ್ಳಲು ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯ ಪ್ರಕಾರ ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಅವುಗಳಿಗೆ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲು ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬರ ಘೋಷಣೆಗೂ ಮೊದಲು ಸಾಕಷ್ಟು ಸಮೀಕ್ಷೆ ನಡೆಸಲಾಗಿದೆ. ಹಣಕಾಸಿನ ಮೊತ್ತದ ಬಗ್ಗೆ ಇಲ್ಲಿವರೆಗೂ ಅಂದಾಜು ಮಾಡಿಲ್ಲ ಎಂದರು.

ತೀವ್ರ ಬರಪೀಡಿತ ತಾಲೂಕುಗಳ ಪಟ್ಟಿ: ಬೆಂಗಳೂರು ನಗರ ಜಿಲ್ಲೆ -ಬೆಂಗಳೂರು ಪೂರ್ವ. ಬೆಂಗಳೂರು ಗ್ರಾಮಾಂತರ ಜಿಲ್ಲೆ -ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ. ರಾಮನಗರ -ಕನಕಪುರ, ರಾಮನಗರ, ಹಾರೋಹಳ್ಳಿ. ಕೋಲಾರ ಜಿಲ್ಲೆ -ಬಂಗಾರಪೇಟೆ, ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್‌. ಚಿಕ್ಕಬಳ್ಳಾಪುರ ಜಿಲ್ಲೆ -ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ. ತುಮಕೂರು ಜಿಲ್ಲೆ -ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ತಿಪಟೂರು, ತುರುವೇಕೆರೆ. ಚಿತ್ರದುರ್ಗ ಜಿಲ್ಲೆ -ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು. ದಾವಣಗೆರೆ ಜಿಲ್ಲೆ -ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು. 

ಮೈಸೂರು ಜಿಲ್ಲೆ -ಎಚ್‌.ಡಿ.ಕೋಟೆ, ಹುಣಸೂರು, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ಟಿ.ನರಸೀಪುರ, ಸರಗೂರು, ಸಾಲಿಗ್ರಾಮ. ಮಂಡ್ಯ ಜಿಲ್ಲೆ -ಕೆ.ಆರ್‌.ಪೇಟೆ, ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ. ಬಳ್ಳಾರಿ ಜಿಲ್ಲೆ -ಬಳ್ಳಾರಿ, ಸಂಡೂರು, ಶಿರಗುಪ್ಪ, ಕುರುಗೋಡು, ಕಂಪ್ಲಿ. ಕೊಪ್ಪಳ ಜಿಲ್ಲೆ -ಗಂಗಾವತಿ, ಕೊಪ್ಪಳ, ಕುಷ್ಠಗಿ, ಯಲಬುರ್ಗಿ, ಕಾರಟಗಿ, ಕುಕನೂರು, ಕನಕಗಿರಿ. ರಾಯಚೂರು ಜಿಲ್ಲೆ -ಲಿಂಗಸುಗೂರು, ಮಾನ್ವಿ, ರಾಯಚೂರು, ಸಿರಿವಾರ, ಕಲಬುರಗಿ ಜಿಲ್ಲೆ -ಅಫ್ಜಲ್‌ಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಕಲಬುರಗಿ, ಜೇವರ್ಗಿ, ಸೇಡಂ, ಕಳಗಿ, ಕಮಲಪುರ, ಯಡ್ರಾಮಿ, ಶಹಬಾದ್‌. ಬೀದರ್‌ ಜಿಲ್ಲೆ -ಬಾಲ್ಕಿ, ಬಸವ ಕಲ್ಯಾಣ, ಹುಲಸೂರು, ಬೆಳಗಾವಿ ಜಿಲ್ಲೆ -ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ್‌, ಹುಕ್ಕೇರಿ, ರಾಮದುರ್ಗ, ರಾಯಭಾಗ್‌, ಸವದತ್ತಿ, ಕಿತ್ತೂರು, ನಿಪ್ಪಾಣಿ, ಕಾಗವಾಡ, ಮುದಲಗಿ, ಯರಗಟ್ಟಿ. 

ಬಾಗಲಕೋಟೆ ಜಿಲ್ಲೆ -ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ, ಗುಳೇದಗುಡ್ಡ, ಇಳಕಲ್‌, ರಬಕವಿ ಬನಹಟ್ಟಿ. ವಿಜಯಪುರ ಜಿಲ್ಲೆ -ಬಸವನಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೇಬಿಹಾಳ, ಸಿಂಧಗಿ, ಬಬ್ಲೇಶ್ವರ, ಚಡಚಣ, ನಿಡಗುಂದಿ, ತಾಳಿಕೋಟೆ, ಕೊಲ್ಹಾರ, ದೇವರಹಿಪ್ಪರಗಿ. ಗದಗ ಜಿಲ್ಲೆ -ಗದಗ, ನರಗುಂದ, ರೋಣ, ಶಿರಹಟ್ಟಿ, ಗಜೇಂದ್ರಗಡ. ಹಾವೇರಿ ಜಿಲ್ಲೆ -ಹಾವೇರಿ, ಹೀರೆಕೆರೂರ್‌, ರಾಣೆಬೆನ್ನೂರು, ಸವಣೂರು, ರಟ್ಟಿಹಳ್ಳಿ. ಧಾರವಾಡ ಜಿಲ್ಲೆ -ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಹುಬ್ಬಳ್ಳಿನಗರ. ಶಿವಮೊಗ್ಗ ಜಿಲ್ಲೆ -ಭದ್ರಾವತಿ, ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ. ಹಾಸನ ಜಿಲ್ಲೆ -ಅರಕಲಗೂಡು. ಚಿಕ್ಕಮಗಳೂರು ಜಿಲ್ಲೆ -ಕಡೂರು, ಅಜ್ಜಂಪುರ. ಕೊಡಗು ಜಿಲ್ಲೆ -ಮಡಿಕೇರಿ, ವಿರಾಜಪೇಟೆ, ಕುಶಾಲನಗರ. ಉಡುಪಿ ಜಿಲ್ಲೆ -ಕಾರ್ಕಳ. ಉತ್ತರಕನ್ನಡ ಜಿಲ್ಲೆ -ಹಳಿಯಾಳ, ಮುಂಡಗೋಡ್‌, ಶಿರಸಿ, ಯಲ್ಲಾಪುರ. ಯಾದಗಿರಿ ಜಿಲ್ಲೆ -ಶಹಾಪುರ, ವಡಗೇರಾ. ವಿಜಯನಗರ ಜಿಲ್ಲೆ -ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ.

ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌: ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

ಸಾಧಾರಣ ಬರ ಪೀಡಿತ ತಾಲೂಕುಗಳ ಪಟ್ಟಿ: ಬೆಂಗಳೂರು ನಗರ ಜಿಲ್ಲೆ - ಆನೇಕಲ್‌, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಯಲಹಂಕ. ರಾಮನಗರ ಜಿಲ್ಲೆ - ಚನ್ನಪಟ್ಟಣ, ಮಾಗಡಿ. ಕೋಲಾರ ಜಿಲ್ಲೆ - ಮಾಲೂರು. ತುಮಕೂರು ಜಿಲ್ಲೆ - ತುಮಕೂರು. ಚಾಮರಾಜನಗರ ಜಿಲ್ಲೆ - ಗುಂಡ್ಲುಪೇಟೆ, ಕೊಳ್ಳೆಗಾಲ, ಹನೂರು. ರಾಯಚೂರು ಜಿಲ್ಲೆ - ದೇವದುರ್ಗ, ಮಸ್ಕಿ. ಹಾಸನ ಜಿಲ್ಲೆ - ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ. ಚಿಕ್ಕಮಗಳೂರು - ಕೊಪ್ಪ, ನರಸಿಂಹರಾಜಪುರ, ಶೃಂಗೇರಿ, ಕಳಸ. ಕೊಡಗು ಜಿಲ್ಲೆ - ಸೋಮವಾರ ಪೇಟೆ, ದಕ್ಷಿಣ ಕನ್ನಡ ಜಿಲ್ಲೆ - ಮಂಗಳೂರು, ಮೂಡಬಿದರೆ. ಉಡುಪಿ ಜಿಲ್ಲೆ - ಬ್ರಹ್ಮಾವರ. ಉತ್ತರ ಕನ್ನಡ ಜಿಲ್ಲೆ - ಅಂಕೋಲ, ಭಟ್ಕಳ, ಕಾರವಾಡ, ಕುಮಟ, ಜೋಯಿಡ. ಯಾದಗಿರಿ ಜಿಲ್ಲೆ - ಸುರಪುರ, ಯಾದಗಿರಿ, ಗುರುಮಿಟ್ಕಲ್‌, ಹುಣಸಿಗಿ.

click me!