ರಾಜ್ಯದಲ್ಲಿ 3 ದಿನದಲ್ಲಿ ಸಾವಿನ ಸಂಖ್ಯೆ ಡಬಲ್‌!

By Kannadaprabha NewsFirst Published Apr 16, 2020, 7:06 AM IST
Highlights

ರಾಜ್ಯದಲ್ಲಿ 3 ದಿನದಲ್ಲಿ ಸಾವಿನ ಸಂಖ್ಯೆ ಡಬಲ್‌!| ನಿನ್ನೆ 2 ಸಾವು: ಮೃತರ ಸಂಖ್ಯೆ 12ಕ್ಕೇರಿಕೆ| ಮತ್ತೆ 19 ಮಂದಿಗೆ ವೈರಸ್‌: ಒಟ್ಟು 279

ಬೆಂಗಳೂರು(ಏ.16):ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಬುಧವಾರ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ವೃದ್ಧರು ಸಾವನ್ನಪ್ಪಿದ್ದು, ಮೃತಪಟ್ಟಒಟ್ಟು ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಕಳೆದ ಮೂರು ದಿನಗಳಿಂದ ನಿತ್ಯ ಇಬ್ಬರು ಸಾವನ್ನಪ್ಪಿದ ಪರಿಣಾಮ ಏ.13ರವರೆಗೆ ಆರರಷ್ಟಿದ್ದ ಸೋಂಕಿತರ ಮರಣ ಸಂಖ್ಯೆ ಕೇವಲ ಮೂರೇ ದಿನಗಳಲ್ಲಿ ದ್ವಿಗುಣಗೊಂಡಿದ್ದು ಆತಂಕ ಸೃಷ್ಟಿಸಿದೆ.

ಮತ್ತೊಂದೆಡೆ ಬುಧವಾರ ಕಲಬುರಗಿ ಜಿಲ್ಲೆಯ ಒಂದು ವರ್ಷದ ಗಂಡು ಮಗು ಹಾಗೂ ಬಾಗಲಕೋಟೆ ಜಿಲ್ಲೆ ಜಮಖಂಡಿಯ ಕರ್ತವ್ಯ ನಿರತ 39 ವರ್ಷದ ಪೊಲೀಸ್‌ ಪೇದೆ ಸೇರಿದಂತೆ ಹೊಸದಾಗಿ 19 ಜನರಿಗೆ ಕೊರೋನಾ ಸೋಂಕು (ಮೈಸೂರಲ್ಲೇ 10 ಪ್ರಕರಣ) ದೃಢಪಟ್ಟಿದ್ದು, ಇದುವರೆಗೆ ಒಂದೇ ದಿನದಲ್ಲಿ ಪತ್ತೆಯಾದ ಗರಿಷ್ಠ ಸಂಖ್ಯೆ ಪ್ರಕರಣಗಳಾಗಿವೆ. ತನ್ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 279ಕ್ಕೆ ತಲುಪಿದಂತಾಗಿದೆ.

ಆಪತ್ತಿಗೆ ಆದ ರಷ್ಯಾ ಸ್ನೇಹಿತ, ಮೋದಿ ಮಾತಿಗೆ ದೊಡ್ಡ ಮೊತ್ತವ ದೇಣಿಗೆ ನೀಡಿದ

ಮೃತರ ಪೈಕಿ ಒಬ್ಬರು ಚಿಕ್ಕಬಳ್ಳಾಪುರ ಮೂಲದ 65 ವರ್ಷದ ಪುರುಷರಾಗಿದ್ದು, ಇವರನ್ನು ಏ.13ರಂದು ಕೊರೋನಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ನಿಗದಿತ ಕೋವಿಡ್‌-19 ರೋಗಿಗಳ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಈ ವ್ಯಕ್ತಿಯು ಎಚ್‌1ಎನ್‌1 ಕಾಯಿಲೆ ಹಾಗೂ ಮಿತಿಮೀರಿದ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದರು. ಇವರು ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮತ್ತೊಬ್ಬರು ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 80 ವರ್ಷದ ಮಹಿಳೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

10 ಪ್ರಕರಣ ಮೈಸೂರಲ್ಲೇ ಪತ್ತೆ:

ಹೊಸ 19 ಸೋಂಕಿತರ ಪೈಕಿ 10 ಪ್ರಕರಣಗಳು ಮೈಸೂರು ಜಿಲ್ಲೆಯಲ್ಲೇ ವರದಿಯಾಗಿವೆ. ಇದರಲ್ಲಿ 9 ಮಂದಿ ನಂಜನಗೂಡಿನ ಜ್ಯುಬಿಲಿಯೆಂಟ್‌ ಫಾರ್ಮಾ ಕಂಪನಿಯ ನೌಕರರಾಗಿದ್ದಾರೆ.

"

ಉಳಿದ ಒಂಬತ್ತು ಪ್ರಕರಣಗಳಲ್ಲಿ ಬೆಂಗಳೂರು ನಗರ ಮತ್ತು ಬಾಗಲಕೋಟೆಯಲ್ಲಿ ತಲಾ ಎರಡು, ವಿಜಯಪುರದಲ್ಲಿ ಮೂರು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಎರಡು ಪ್ರಕರಣಗಳಲ್ಲಿ ತೀವ್ರ ಉಸಿರಾಟ ತೊಂದರೆ ಇದ್ದ ಅನಂತಪುರ ಮೂಲದ ವ್ಯಕ್ತಿ ಸೇರಿದ್ದಾರೆ. ಕಲಬುರಗಿಯ ಒಂದು ವರ್ಷದ ಮಗು ಇನ್‌ಫ್ಲುಯೆಂಜಾದಿಂದ ಬಳಲುತ್ತಿದ್ದು, ಆ ಮಗುವಿಗೂ ಸೋಂಕು ದೃಢಪಟ್ಟಿದೆ. ಉಳಿದಂತೆ ಮಿಕ್ಕೆಲ್ಲರಿಗೂ ಇತರೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಕೋವಿಡ್‌-19 ಉಸ್ತುವಾರಿ ಹೊತ್ತಿರುವ ಸಚಿವ ಎಸ್‌.ಸುರೇಶ್‌ ಕುಮಾರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೋನಾ ವೈರಸ್ ಸಂಕಷ್ಟ; ಮುದ್ದಿನ ನಾಯಿಗೆ 2 ವಾರ ಐಸೋಲೇಶನ್!

80 ಜನ ಡಿಸ್ಚಾಜ್‌ರ್‍

ಕೊರೋನಾ ಸೋಂಕಿತರ ಪೈಕಿ ಬುಧವಾರ ಮತ್ತೆ 9 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಒಟ್ಟು 279 ಸೋಂಕಿತರ ಪೈಕಿ ಇದುವರೆಗೆ 80 ಜನರು ಬಿಡುಗಡೆಯಾದಂತಾಗಿದೆ. ಉಳಿದ 187 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಜನ ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯವನ್ನು ಬೆಚ್ಚಿ ಬೀಳಿಸಿದ 4 ಕೇಸು

1. ಮೈಸೂರು ವ್ಯಕ್ತಿಗೆ ಕೊರೋನಾ: ಎಲ್ಲಿಂದ ಎಂಬುದೇ ಗೊತ್ತಿಲ್ಲ

2. 1 ವರ್ಷದ ಕಲ್ಬುರ್ಗಿ ಬಾಲಕಗೆ ಸೋಂಕು: ಮೂಲ ನಿಗೂಢ

3. ಲಾಠಿಚಾರ್ಜಲ್ಲಿ ಪಾಲ್ಗೊಂಡಿದ್ದ ಜಮಖಂಡಿ ಪೇದೆಗೆ ವೈರಸ್‌

4. 300 ಜನರಿಗೆ ಕಿಟ್‌ ಹಂಚಿದ್ದ ಚಿಕ್ಕಬಳ್ಳಾಪುರದ ವೃದ್ಧ ಸಾವು

click me!