Bengaluru crime: ಹಾಲು ಮಾರುವ ಸೋಗಲ್ಲಿ 19 ದುಬಾರಿ ಸೈಕಲ್‌ ಕದ್ದವ ಅರೆಸ್ಟ್

By Kannadaprabha NewsFirst Published Aug 19, 2023, 4:43 AM IST
Highlights

ನಗರದ ವಿವಿಧ ಬಡಾವಣೆಗಳಲ್ಲಿ ಮುಂಜಾನೆ ಸೈಕಲ್‌ನಲ್ಲಿ ಹಾಲು-ಪೇಪರ್‌ ಮಾರಾಟದ ಸೋಗಿನಲ್ಲಿ ಓಡಾಡಿಕೊಂಡು ಮನೆ ಎದುರು ನಿಲ್ಲಿಸಿದ್ದ ದುಬಾರಿ ಸೈಕಲ್‌ಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್‌ ಕಳ್ಳನನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.19) :  ನಗರದ ವಿವಿಧ ಬಡಾವಣೆಗಳಲ್ಲಿ ಮುಂಜಾನೆ ಸೈಕಲ್‌ನಲ್ಲಿ ಹಾಲು-ಪೇಪರ್‌ ಮಾರಾಟದ ಸೋಗಿನಲ್ಲಿ ಓಡಾಡಿಕೊಂಡು ಮನೆ ಎದುರು ನಿಲ್ಲಿಸಿದ್ದ ದುಬಾರಿ ಸೈಕಲ್‌ಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್‌ ಕಳ್ಳನನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಮಪುರದ ದಯಾನಂದನಗರ ನಿವಾಸಿ ಶೇಖರ್‌(50) ಬಂಧಿತ. ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ .5 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 19 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಲ್ಲೇಶ್ವರದಲ್ಲಿ ಅಕ್ಷತಾ ಎಂಬುವವರ .65 ಸಾವಿರ ಮೌಲ್ಯದ ಸೈಕಲ್‌ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

ಹಾವೇರಿ: ಮೊಬೈಲ್‌ ಕದ್ದು ಹಣ ದೋಚುತ್ತಿದ್ದ 3 ಆರೋಪಿಗಳ ಬಂಧನ

ದುಬಾರಿ ಸೈಕಲ್‌ಗಳೇ ಟಾರ್ಗೆಟ್‌!

ಆರೋಪಿ ಶೇಖರ್‌ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಸೈಕಲ್‌ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ. ಅದರಲ್ಲೂ ಕಳ್ಳತನಕ್ಕೆ ದುಬಾರಿ ಸೈಕಲ್‌ಗಳನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ. ಮುಂಜಾನೆ ಸೈಕಲ್‌ವೊಂದನ್ನು ತೆಗೆದುಕೊಂಡು ಪೇಪರ್‌-ಹಾಲು ಮಾರಾಟದ ಸೋಗಿನಲ್ಲಿ ನಗರದ ವಿವಿಧೆಡೆ ಬೀದಿ ಬೀದಿಗಳಲ್ಲಿ ಸುತ್ತಾಡುತ್ತಿದ್ದ. ಮನೆ ಎದುರು ನಿಲುಗಡೆ ಮಾಡಿದ ಹೈಟೆಕ್‌ ಸೈಕಲ್‌ಗಳನ್ನು ಗುರುತಿಸಿಕೊಂಡು ಬಳಿಕ ತನ್ನ ಹಳೇ ಸೈಕಲನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಈ ದುಬಾರಿ ಸೈಕಲನ್ನು ತೆಗೆದುಕೊಂಡು ಹಾಲು-ಪೇಪರ್‌ ಮಾರಾಟಕ್ಕೆ ತೆರಳುವವನಂತೆ ಸ್ಥಳದಿಂದ ಪರಾರಿಯಾಗುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

19 ಸೈಕಲ್‌ಗಳು ಜಪ್ತಿ:

ಆರೋಪಿಯು ನಗರದ ಮಲ್ಲೇಶ್ವರ, ಸದಾಶಿವನಗರ, ವಯ್ಯಾಲಿಕಾವಲ್‌, ಯಶವಂತಪುರ, ಶೇಷಾದ್ರಿಪುರಂ, ರಾಜಾಜಿನಗರದ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 19 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಮಲ್ಲೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳ ಸೈಕಲ್‌ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 17 ಸೈಕಲ್‌ಗಳ ವಾರಸುದಾರರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಕ್ಯೂರಿ ಗಾರ್ಡ್‌ ಎಂದು ಮಾರಾಟ

ಆರೋಪಿ ಶೇಖರ್‌ ಕದ್ದ ಸೈಕಲ್‌ಗಳನ್ನು ನಗರದ ಹೊರವಲಯದ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ. ನಾನು ಅಪಾರ್ಚ್‌ಮೆಂಟ್‌ನಲ್ಲಿ ಸೆಕ್ಯೂರಿ ಗಾರ್ಡ್‌ ಕೆಲಸ ಮಾಡುತ್ತಿದ್ದೇನೆ. ಪ್ಲ್ಯಾಟ್‌ನಲ್ಲಿ ಇದ್ದವರು ಮನೆ ಖಾಲಿ ಮಾಡಿಕೊಂಡು ವಿದೇಶಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಈ ಸೈಕಲ್‌ ನನಗೆ ಮಾರಾಟ ಮಾಡಿದ್ದಾರೆ. ನನಗೆ ತುರ್ತು ಹಣದ ಅಗತ್ಯವಿರುವುದರಿಂದ ಈ ಸೈಕಲ್‌ ಮಾರಾಟ ಮಾಡುತ್ತಿರುವುದಾಗಿ ಗಿರಾಕಿಗಳನ್ನು ನಂಬಿಸಿ ಮಾರಾಟ ಮಾಡುತ್ತಿದ್ದ. ಆರೋಪಿಯು ನಗರದಿಂದ ಹೊರವಲಯಕ್ಕೆ ಸೈಕಲ್‌ ತುಳಿದುಕೊಂಡೇ ಹೋಗಿ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ದೊಡ್ಡಬಳ್ಳಾಪುರಕ್ಕೂ ಸೈಕಲ್‌ ತುಳಿದಿದ್ದ!

ಆರೋಪಿ ಶೇಖರಪ್ಪ ಪರಿಚಿತ ಗಿರಾಕಿಗಳು ಮಾತ್ರವಲ್ಲದೆ, ದೊಡ್ಡಬಳ್ಳಾಪುರದಲ್ಲಿರುವ ಸಂಬಂಧಿಕರಿಗೂ ಕದ್ದ ಸೈಕಲ್‌ಗಳನ್ನು ಮಾರಾಟ ಮಾಡಿದ್ದ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೂ ಸೈಕಲ್‌ ತುಳಿದುಕೊಂಡೇ ಹೋಗಿದ್ದ. ಮಲ್ಲೇಶ್ವರ ಪ್ರಕರಣದಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿ ಶೇಖರ ಸೈಕಲ್‌ ಕದ್ದು ಪರಾರಿ ಆಗುತ್ತಿರುವುದು ಸೆರೆಯಾಗಿತ್ತು. ಈ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

Bengaluru ಪೊಲೀಸರೇ ನನ್ನ ಹೆಲ್ಮೆಟ್‌ ಕಳೆದೋಗಿದೆ: ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು

ಸಿಕ್ಕಿಬಿದ್ದರೆ ರೋಗಿ ಎಂದು ಡ್ರಾಮಾ

ಆರೋಪಿ ಶೇಖರ್‌ ಈ ಹಿಂದೆ ಸೈಕಲ್‌ ಕಳ್ಳತನ ಮಾಡುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ. ಆದರೆ, ಆ ಸಂದರ್ಭದಲ್ಲಿ ನಾನು ರೋಗಿ ಎಂದು ನಾಟಕ ಮಾಡಿ ಜನರ ಅನುಕಂಪ ಗಿಟ್ಟಿಸಿ ಬಿಡಿಸಿಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದ. ಕೆಲ ಕಡೆ ಸಾರ್ವಜನಿಕರು ಹಿಡಿದ ತಕ್ಷಣ ಎದೆನೋವು ಎಂದು ಕುಸಿದು ಬಿದ್ದು ತಪ್ಪಿಸಿಕೊಂಡಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

click me!