Uttara Kannada: ದೇಶಸೇವೆಯತ್ತ ಬಾವಿಕೇರಿಯ 17 ನಾಯಿ ಮರಿಗಳು: ಇವುಗಳ ವಿಶೇಷತೆಯೇನು ಗೊತ್ತಾ?

Published : Jun 16, 2023, 02:00 AM IST
Uttara Kannada: ದೇಶಸೇವೆಯತ್ತ ಬಾವಿಕೇರಿಯ 17 ನಾಯಿ ಮರಿಗಳು: ಇವುಗಳ ವಿಶೇಷತೆಯೇನು ಗೊತ್ತಾ?

ಸಾರಾಂಶ

ಅವರು ಸರಕಾರಿ ಉದ್ಯೋಗಿ. ವಿವಿಧ ತಳಿಯ ನಾಯಿಗಳ ಸಾಕಾಣೆ ಇವರದ್ದೊಂದು ಹವ್ಯಾಸ. ಇವರು ಸಾಕಿರುವ ಈ ವಿಶೇಷ ತಳಿಯ ನಾಯಿ ಮರಿಗಳಂತೂ ಇಂದು ಇಂಡಿಯನ್ ಆರ್ಮಿಯಲ್ಲಿ ಸೇರಿಕೊಂಡು ದೇಶ ಸೇವೆಗೆ ಕಾಲಿರಿಸಿದೆ.

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಜೂ.16): ಅವರು ಸರಕಾರಿ ಉದ್ಯೋಗಿ. ವಿವಿಧ ತಳಿಯ ನಾಯಿಗಳ ಸಾಕಾಣೆ ಇವರದ್ದೊಂದು ಹವ್ಯಾಸ. ಇವರು ಸಾಕಿರುವ ಈ ವಿಶೇಷ ತಳಿಯ ನಾಯಿ ಮರಿಗಳಂತೂ ಇಂದು ಇಂಡಿಯನ್ ಆರ್ಮಿಯಲ್ಲಿ ಸೇರಿಕೊಂಡು ದೇಶ ಸೇವೆಗೆ ಕಾಲಿರಿಸಿದೆ. ಇಂಡಿಯನ್ ಆರ್ಮಿಯ ಕಮಾಂಡರ್ ಹಾಗೂ ಜವಾನರೇ ಖುದ್ದಾಗಿ ಬಂದು ಇವರ ಮನೆಯಿಂದ‌ ಮುದ್ದಾಗಿ ಸಾಕಿದ್ದ ಬರೋಬ್ಬರಿ 17 ನಾಯಿ ಮರಿಗಳನ್ನು ಅಸ್ಸಾಂಗೆ ಕೊಂಡೊಯ್ದಿದ್ದಾರೆ. ದೇಶಸೇವೆಗೆ ತಮ್ಮ ಮನೆಯ ನಾಯಿ ಮರಿಗಳನ್ನು ನೀಡಿದಂತಹ ಈ ವ್ಯಕ್ತಿಯಾದ್ರೂ ಯಾರು..? ಇಂಡಿಯನ್ ಆರ್ಮಿ‌ ಜತೆ ಸೇರಿಕೊಂಡ ಆ ನಾಯಿ ಮರಿಗಳು ಯಾವ ತಳಿಯದ್ದು....? ಈ ಸ್ಟೋರಿ ನೋಡಿ. 

ಯಸ್, ಇವರ ಹೆಸರು ರಾಘವೇಂದ್ರ ಭಟ್. ಅಂಕೋಲಾ ತಾಲೂಕಿನ ಬಾವಿಕೇರಿ ನಿವಾಸಿ. ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆಯ ಉದ್ಯೋಗಿ. ಕಳೆದ 25 ವರ್ಷಗಳಿಂದ‌ ಇವರು ವಿಶೇಷ ಹಾಗೂ ಬೆಳೆ ಬಾಳುವ ತಳಿಗಳಾದ ಡಾಬರ್‌ಮನ್, ಜರ್ಮನ್ ಶೆಫರ್ಡ್, ಪಿಟ್‌ಬುಲ್, ಅಮೇರಿಕನ್ ಬುಲ್ಲಿ, ಮುಧೋಳ್, ಪಾಕಿಸ್ತಾನ ಬುಲ್ಲಿ, ಬಾಕ್ಸರ್, ಪಗ್, ಗ್ರೇಟ್ ಡೇನ್, ಲ್ರಾಬ್ರಡಾರ್ ಹಾಗೂ ಬೆಲ್ಝಿಯಂ‌ ಮೆಲಿನೋಯ್ಸ್ ಮುಂತಾದ ನಾಯಿಗಳನ್ನು ಸಾಕಿದ್ದಾರೆ. ಪ್ರಸ್ತುತ ರಾಘವೇಂದ್ರ ಭಟ್ ಅವರ ಮನೆಯಲ್ಲಿ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ನಾಯಿಗಳಿದ್ದು, ಇವುಗಳ ಮರಿಗಳು ಇದೀಗ ದೇಶಸೇವೆಗೆ ಹೊರಟಿವೆ. 

ಪ್ರತಾಪ್‌ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್‌ ರಾಜಕಾರಣಿಗಳು: ಎನ್‌.ಚಲುವರಾಯಸ್ವಾಮಿ

ಇವರು ಈ ಹಿಂದೆ ಸಾಕಿದ್ದ ಬೆಲ್ಝಿಯಂ ಮೆಲಿನೋಯ್ಸ್ ಜಾತಿಯ ನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಕಾರ್ಕಳ ಎಎನ್‌ಎಫ್, ಬೆಳಗಾಂ ಮತ್ತು ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಇವರು ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಗೆ ನೀಡಿದ್ದ ನಾಯಿಯನ್ನು ನೋಡಿ ಹಾಗೂ ಇವರ ಫೇಸ್‌‌ಬುಕ್ ಪೇಜ್‌ ಅನ್ನು ವೀಕ್ಷಿಸಿ ಇಂಡಿಯನ್ ಆರ್ಮಿಯ ಅಧಿಕಾರಿಗಳು ಇವರನ್ನು ಸಂಪರ್ಕಿಸಿದ್ದಲ್ಲದೇ ನಾಯಿಗಳ ವೀಕ್ಷಣೆಗೆ ಇವರ ಮನೆಗೆ ಭೇಟಿ ನೀಡಿ ಪರಿಶೀಲನೆ ಕೂಡಾ ನಡೆಸಿದ್ದರು.‌ ಆ ನಂತರ ಇಂಡಿಯಾನ್ ಆರ್ಮಿಯ ಜವಾನ ಕಳೆದ 45 ದಿನಗಳಿಂದ ಇವರ ಮನೆಯಲ್ಲೇ ತಂಗಿ ನಾಯಿಗಳ ನಡವಳಿಕೆ, ಆಹಾರ ಪದ್ಧತಿ, ಅವುಗಳ ಬುದ್ಧಿಮತ್ತೆ, ಆರೋಗ್ಯ ಪರಿಶೀಲಿಸಿ ದಿನಾಲೂ ಉನ್ನತಾಧಿಕಾರಿಗಳಿಗೆ ವರದಿ ನೀಡುತ್ತಿದ್ದರು.‌ 

ಆದರೆ, ಇಂದು ಇಂಡಿಯನ್ ಆರ್ಮಿಯ ತಂಡವೇ ಬಂದು‌ ಬೆಲ್ಝಿಯಂ ಮೆಲಿನೋಯ್ಸ್ ತಳಿಯ 17 ನಾಯಿ ಮರಿಗಳನ್ನು ಖಾಸಗಿ ಎಸಿ ಬಸ್‌ನಲ್ಲಿ ಕುಳ್ಳಿರಿಸಿ ಅಸ್ಸಾಂನತ್ತ ಕೊಂಡೊಯ್ದಿದ್ದಾರೆ.‌ ಇವರು ಸಾಕಿರುವ ನಾಯಿ ಮರಿಗಳು ಪ್ರಸ್ತುತ ದೇಶಸೇವೆಗೆ ತೆರಳಿರುವುದು ಮನೆಯವರಿಗೆಲ್ಲಾ ಸಾಕಷ್ಟು ಖುಷಿ ತಂದುಕೊಟ್ಟಿದೆ. ರಾಘವೇಂದ್ರ ಭಟ್ ಅವರು ಹೇಳುವ ಪ್ರಕಾರ, ಬೆಲ್ಝಿಯಂ ಮೆಲಿನೋಯ್ಸ್ ಮೂರು ಜಾತಿಗಳನ್ನು ಹೊಂದಿರುತ್ತವೆ. ಇದನ್ನು ಸಾಕಲು, ರಕ್ಷಣೆಗೆ ಹಾಗೂ ಯಾವುದೇ ಕೆಲಸ ಕಾರ್ಯಗಳಿಗೆ ಈ ನಾಯಿಗಳನ್ನು ಬಳಸಬಹುದು. ಬೆಲ್ಝಿಯಂ ಮೆಲಿನೋಯ್ಸ್, ಡಚ್ ಶೆಫರ್ಡ್ ಹಾಗೂ ಜರ್ಮನ್ ಶೆಫರ್ಡ್ ನಾಯಿಗಳು ಈ ಮೂರು ಗುಣಗಳನ್ನು ಹೊಂದಿರುತ್ತಾದರೂ, ಇದರಲ್ಲಿ ಉತ್ತಮ‌ ದಕ್ಷತೆಯನ್ನು ಬೆಲ್ಝಿಯಂ ಮೆಲಿನೋಯ್ಸ್ ಹೊಂದಿದೆ. 

ಅಲ್ಲದೇ, ಇದೇ ಪ್ರಥಮ ಬಾರಿಗೆ ರಾಜ್ಯದಿಂದ ಇಂಡಿಯನ್ ಆರ್ಮಿಯವರ 17 ನಾಯಿ ಮರಿಗಳನ್ನು ಕೊಂಡೊಯ್ದಿದ್ದಾರೆ‌. ರಾಘವೇಂದ್ರ ಭಟ್ ಅವರಿಗೆ ಚಿಕ್ಕಂದಿನಿಂದಲೂ ನಾಯಿಗಳ ಮೇಲೆ ವಿಶೇಷ ಪ್ರೀತಿಯಿದ್ದ ಕಾರಣ ಕ್ರಮೇಣ ಉದ್ಯೋಗ ಪಡೆದ‌ ಬಳಿಕ ಗುಣಮಟ್ಟದ ನಾಯಿಗಳನ್ನು ಸಾಕುವ ಕಾಯಕ ತೊಡಗಿಸಿಕೊಂಡರು. ನಾಯಿಗಳ ಗುಣಮಟ್ಟದ ಆಧಾರದ ಮೇಲೆ 50,000ರೂ.ನಿಂದ 2 ಲಕ್ಷ ರೂ.ವರೆಗೆ ಅವುಗಳು ಬೆಲೆ ಬಾಳುತ್ತವೆ. ಹವ್ಯಾಸಕ್ಕಾಗಿ ಇವರು ನಾಯಿಗಳನ್ನು ಸಾಕುತ್ತಿದ್ದು, ಇವರು ಈಗಾಗಲೇ ಒಂದೊಂದು ಬೆಲ್ಝಿಯಂ ಮೆಲಿನೋಯ್ಸ್ ನಾಯಿಗಳಿಗೆ 80 ಸಾವಿರ ರೂ.ನಿಂದ‌ 2 ಲಕ್ಷ ರೂ.ವರೆಗೆ ನೀಡಿ ಖರೀದಿಸಿದ್ದಾರೆ. 

ಅಂದಹಾಗೆ, ಉತ್ತರಕನ್ನಡ ಜಿಲ್ಲೆಯಲ್ಲಿ ಬೆಲ್ಝಿಯಂ ಮೆಲಿನೋಯ್ಸ್ ನಾಯಿಗಳು ಬೇರೆಲ್ಲೂ ಇಲ್ಲದ ಕಾರಣ ವಿಶೇಷವಾಗಿ ಗುರುತಿಸಲೆಂದು ಹೈದರಾಬಾದ್‌ನಿಂದ ತಂದಂತಹ ಒಂದು ನಾಯಿಗೆ ಇವರು 'ಕೆಎಫ್' ಎಂದು ಹೆಸರಿಟ್ಟಿದ್ದಾರೆ. ಈ ನಾಯಿ ಕಾರವಾರ, ಶಿವಮೊಗ್ಗ, ಮಂಗಳೂರು, ಉಡುಪಿ, ಗೋವಾ, ಬೆಳಗಾವಿ, ಶಿರಸಿ ಮುಂತಾದೆಡೆ ನಡೆದ ಡಾಗ್ ಶೋಗಳಲ್ಲಿ ಪ್ರಶಸ್ತಿ ಹಾಗೂ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಬಾಚಿಕೊಂಡಿದೆ. ಹರಿಯಾಣದಿಂದ ತಂದಂತಹ‌ ನಾಯಿಗೆ ಲೀಸಾ, ಹೈದಾರಾಬಾದ್‌ನಿಂದ ತಂದಂತಹ ಇನ್ನೊಂದು ನಾಯಿಗೆ ಡೆವಿಲ್ ಹಾಗೂ ಉಡುಪಿಯಿಂದ ತಂದಂತಹ ನಾಯಿಗೆ ಟೈನಿ ಎಂದು ಹೆಸರಿಡಲಾಗಿದೆ. ಡೆವಿಲ್ ನಾಯಿಯಂತೂ ತುಂಬಾ ಆಕ್ರಮಣಕಾರಿಯಾಗಿದ್ದು, ಸುಮಾರು 10 ಫೀಟ್‌ವರೆಗೆ ಜಿಗಿಯುವಂತಹ ಸಾಮರ್ಥ್ಯವನ್ನು ಹೊಂದಿದೆ. 

ಈ ನಾಯಿಗಳಿಗೆ ಅನ್ನ, ಮಜ್ಜಿಗೆ, ಮೊಸರು, ಹಾಲು, ಮೊಟ್ಟೆ, ಸ್ವಲ್ಪ ಚಿಕನ್, ಡ್ರೈ ಫ್ರೂಟ್‌, ಮಲ್ಟಿ ಗ್ರೈನ್ ಪೌಡರ್‌ಗಳನ್ನು ಕಲಸಿ ನೀಡಲಾಗುತ್ತದೆ. ಇದರೊಂದಿಗೆ ತರಕಾರಿಗಳನ್ನು ಕೂಡಾ ಬೇಯಿಸಿ ನೀಡಲಾಗುತ್ತದೆ. ರಾಘವೇಂದ್ರ ಭಟ್ ಅವರ ಪತ್ನಿ ರಾಜೇಶ್ವರಿ ಹಾಗೂ ಅವರ ತಾಯಿ ನಾಯಿಗಳಿಗೆ ಬೇಕಾದ ಆಹಾರವನ್ನು ತಯಾರಿಸುತ್ತಾರೆ. ಬೆಲ್ಝಿಯಂ ಮೆಲಿನೋಯ್ಸ್  ರೋಗಗಳ ಬಾಧೆ ಎದುರಾಗುವುದು ತುಂಬಾನೇ ಕಡಿಮೆಯಾಗಿದ್ದು, ಇವುಗಳಿಗೆ ಸಮಯಕ್ಕೆ ಸರಿಯಾಗಿ ಜಂತು ನಾಶಕ ಹಾಗೂ ವ್ಯಾಕ್ಸಿನೇಷನ್ ಪ್ರತೀ ವರ್ಷ ನೀಡಬೇಕು. ಇದರಿಂದ ಯಾವುದೇ ಕಾಯಿಲೆಗಳು‌ ಈ ನಾಯಿಗಳಿಗೆ ಬರುವುದಿಲ್ಲ ಅಂತಾರೆ ರಾಘವೇಂದ್ರ ಭಟ್. 

ಇನ್ನು ರಾಘವೇಂದ್ರ ಭಟ್ ಅವರ ಪತ್ನಿ ರಾಜೇಶ್ವರಿ ಭಟ್ ಹೇಳುವ ಪ್ರಕಾರ, ನಾನು ಗಂಡನ ಮನೆಗೆ ಬಂದ ಬಳಿಕವೇ ವಿವಿಧ ತಳಿಗಳ ನಾಯಿಗಳನ್ನು ನೋಡಿರೋದು.‌ ಇಲ್ಲಿಯವರೆಗೆ ಸುಮಾರು 8-10 ತಳಿಗಳನ್ನು ಮನೆಯಲ್ಲಿ ಸಾಕಿದ್ದೇವೆ. ಆದರೆ, ಬೆಲ್ಝಿಯಂ ಮೆಲಿನೋಯ್ಸ್ ಎಲ್ಲದಕ್ಕಿಂತಲೂ ಉತ್ತಮ ತಳಿಯಾಗಿದೆ.‌ ಈ ಜಾತಿಯ ನಾಯಿಗಳಿಗೆ ಯಾರು ಆಹಾರ ತಯಾರಿಸಿ ನೀಡಿದರೂ, ದಿನಾಲೂ ಆಹಾರ ಒದಗಿಸುವವರೇ ಪೂರೈಸಬೇಕು ಹೊರತು ಇತರರು ಯಾರೇ ನೀಡಿದರೂ ಸ್ವೀಕರಿಸಲ್ಲ. ಮಹಿಳೆಯರು ಮನೆಯಲ್ಲಿ ಒಬ್ಬರೇ ಇದ್ದರೂ ಈ ನಾಯಿಯನ್ನು ಬಿಟ್ಟು ಯಾವುದೇ ಭೀತಿಯಿಲ್ಲದೇ ಇರಬಹುದು. 

ಹೈನೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಲಿ: ಎಚ್‌.ಡಿ.ಕುಮಾರಸ್ವಾಮಿ ಸಲಹೆ

ಮನೆಯವರಿಗೆ ಈ ನಾಯಿ ಯಾವಾಗಲೂ ದಾಳಿ ಮಾಡಲ್ಲ, ಹೊರಗಿನಿಂದ ಬಂದವರನ್ನು ಈ ನಾಯಿಗಳು ಬಿಡಲ್ಲ. ಮನೆ ಮಾಲಕರು ಎಷ್ಟೇ ದೂರದಿಂದ ಬರುತ್ತಿದ್ದರೂ ಕೂಡಲೇ ಗುರುತಿಸಿ ಮನೆಯವರಿಗೆ ವಿಶೇಷವಾಗಿ ಕೂಗುವ ಮೂಲಕ ಮಾಹಿತಿ ನೀಡುತ್ತದೆ. ಈ ನಾಯಿಗಳಿಂದಾಗಿ ಮಂಗಗಳ ಕಾಟವೂ ಇರುವುದಿಲ್ಲ. ನಾಯಿ ಮರಿಗಳು ಹುಟ್ಟಿ ಮೂರು ತಿಂಗಳವರೆಗೆ ಸಾಮಾನ್ಯವಾಗಿ ಮನುಷ್ಯರ ಮೇಲೆ ಅಟ್ಯಾಚ್‌ಮೆಂಟ್ ಇರಲ್ಲ. ಆದರೆ, ಈ ಜಾತಿಯ ನಾಯಿಯ ಮರಿಗಳನ್ನು ಈ ನಾವೇ ಪ್ರೀತಿಯಿಂದ ಸಾಕಿದ್ದು, ನಮ್ಮ ಮೇಲೆ ಮರಿಗಳೂ ಕೂಡಾ ತುಂಬಾ ಅಟ್ಯಾಚ್‌ಮೆಂಟ್ ಹೊಂದಿವೆ. 

ಕರ್ನಾಟಕದಿಂದ ಮೊದಲ ಬಾರಿಗೆ ಸಾಕಿದ 17 ನಾಯಿ ಮರಿಗಳು ಆರ್ಮಿಗೆ ಹೋಗುತ್ತಿದ್ದು, ಇದು ನಮಗೆ ತುಂಬಾ ಹೆಮ್ಮೆ ತಂದಿದೆ. ಪ್ರತಿಯೊಬ್ಬರಿಗೂ ದೇಶಸೇವೆ ಮಾಡಬೇಕೆಂಬ ಆಸೆಯಿರುತ್ತದೆ. ಆದರೆ, ನಮಗಾಗಿಲ್ಲ. ನಾವು ಸಾಕಿದ 17 ನಾಯಿ ಮರಿಗಳು ದೇಶಸೇವೆ ತೆರಳುತ್ತಿದ್ದು, ಅದು ಇನ್ನಷ್ಟು ಹೆಮ್ಮೆಯ ವಿಚಾರ ಎಂದು ಹೇಳ್ತಾರೆ ರಾಜೇಶ್ವರಿ. ಒಟ್ಟಿನಲ್ಲಿ ನಾಯಿ ಸಾಕಾಣೆಯ ಹವ್ಯಾಸ ಹೊಂದಿರುವ ರಾಘವೇಂದ್ರ ಭಟ್ ಅವರ ಮನೆಯಿಂದ ನಾಯಿ ಮರಿಗಳು ದೇಶಸೇವೆ ತೆರಳಿದ್ದು, ಅವರ ಕುಟುಂಬಕ್ಕೆ ಬಹಳಷ್ಟು ಸಂತೋಷ ನೀಡಿದೆ. ಅಲ್ಲದೇ, ತಮ್ಮೂರಿನ ನಾಯಿ ಮರಿಗಳು ಇಂಡಿಯನ್ ಆರ್ಮಿಯಲ್ಲಿ ಸೇವೆಗೆ ತೆರಳಿರುವುದು ನೋಡಿ ಊರಿನ ಜನರು ಕೂಡಾ ಸಾಕಷ್ಟು ಹರ್ಷ ವ್ಯಕ್ತಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!
ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!