
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ಏ.13): ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಬಿಯರ್ ಮಾರಾಟದಲ್ಲೂ ಹೆಚ್ಚಳವಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ತಣ್ಣನೆಯ ಬಿಯರ್ ಖರೀದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿರುವುದು ಇದಕ್ಕೆ ಕಾರಣವಾಗಿದೆ.
ಏ.1 ರಿಂದ 11 ರವರೆಗೂ ರಾಜ್ಯದಲ್ಲಿ ಒಟ್ಟಾರೆ 17.67 ಲಕ್ಷ ಲೀಟರ್ ವಿವಿಧ ಬ್ರಾಂಡ್‌ನ ಬಿಯರ್ ಮಾರಾಟವಾಗಿದೆ. 2021ರಲ್ಲಿ ಇದೇ ಅವಧಿಯಲ್ಲಿ 8.83 ಲಕ್ಷ ಲೀಟರ್, 2022ರಲ್ಲಿ 9.20 ಲಕ್ಷ ಲೀಟರ್, 2023ರಲ್ಲಿ 13.16 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. ಆದರೆ ಈ ಬಾರಿ ಬಿಸಿನ ಝಳ ಹೆಚ್ಚಾಗಿರುವುದರಿಂದ ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಅಧಿಕ ಬಿಯರ್ ಬಿಕರಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 4.51 ಲಕ್ಷ ಲೀಟರ್ ಬಿಯರ್ ಅಧಿಕ ಸೇಲ್ ಆಗಿದೆ.
ಪ್ರತಿ ಗ್ರಾಮಕ್ಕೆ ಬಾರ್, ಬಡವರಿಗೆ ಉಚಿತ ಬಿಯರ್-ವಿಸ್ಕಿ; ಮತದಾರರಿಗೆ ಭರ್ಜರಿ ಭರವಸೆ ನೀಡಿದ ಅಭ್ಯರ್ಥಿ!
‘ಸಾಮಾನ್ಯವಾಗಿ ದಿನಕ್ಕೆ ಸುಮಾರು ಒಂದು ಲಕ್ಷ ಲೀಟರ್ ಬಿಯರ್ ರಾಜ್ಯಾದ್ಯಂತ ಮಾರಾಟವಾಗುತ್ತದೆ. ಈ ಬಾರಿ ಬಿಸಿಲು ಅಧಿಕವಾಗಿರುವುದರಿಂದ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಲೋಕಸಭಾ ಚುನಾವಣೆಯ ಕಾವು ಇನ್ನೂ ‘ರಂಗೇ’ರದೇ ಇರುವುದರಿಂದ ಇದು ಬಿಯರ್ ಮಾರಾಟದ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ‘ಮದ್ಯದ ಘಾಟು’ ಅಷ್ಟೊಂದು ಇರುವುದಿಲ್ಲ’ ಎಂದು ಕೆಲ ಮದ್ಯ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಐಎಂಎಲ್ ಮಾರಾಟವೂ ಹೆಚ್ಚಳ
ಬಿಯರ್ ಅಷ್ಟೇ ಅಲ್ಲ, ಭಾರತೀಯ ಮದ್ಯ(ಐಎಂಎಲ್)ಗಳ ಮಾರಾಟದಲ್ಲೂ ಏಪ್ರಿಲ್ ಆರಂಭದಲ್ಲಿ ಹೆಚ್ಚಳ ಕಂಡುಬಂದಿದೆ. 2022ರಲ್ಲಿ 14.95 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 180 ಎಂಎಲ್‌ನ 48 ಬಾಟಲ್‌ಗಳಿರುತ್ತವೆ) ಮದ್ಯ ಮಾರಾಟವಾಗಿದ್ದರೆ, 2023ರಲ್ಲಿ 18.02 ಲಕ್ಷ ಬಾಕ್ಸ್ ಇದ್ದದ್ದು, 2024 ರಲ್ಲಿ 18.67 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ.
ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ 65 ಸಾವಿರ ಬಾಕ್ಸ್ ಭಾರತೀಯ ಮದ್ಯ ಅಧಿಕವಾಗಿ ಮಾರಾಟವಾಗಿದೆ. ಸಾಮಾನ್ಯವಾಗಿ ಪ್ರತಿ ದಿನ ರಾಜ್ಯದಲ್ಲಿ ಸುಮಾರು 1.50 ಲಕ್ಷದಿಂದ 1.60 ಲಕ್ಷ ಬಾಕ್ಸ್ ಭಾರತೀಯ ಮದ್ಯ ಮಾರಾಟವಾಗುತ್ತದೆ. ಚುನಾವಣೆ ‘ಕಾವು’ ಇನ್ನೂ ಅಷ್ಟೊಂದು ಹೆಚ್ಚಾಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಮದ್ಯ ಮಾರಾಟದಲ್ಲಿ ಇನ್ನೂ ಹೆಚ್ಚಳ ಕಂಡುಬರಬಹುದು ಎಂದು ಮೂಲಗಳು ತಿಳಿಸಿವೆ.
ಏ.1 ರಿಂದ 11 ರವರೆಗೂ ಬಿಯರ್ ಮಾರಾಟ
2021 8.83 ಲಕ್ಷ ಲೀಟರ್
2022 9.20 ಲಕ್ಷ ಲೀಟರ್
2023 13.16 ಲಕ್ಷ ಲೀಟರ್
2024 17.67 ಲಕ್ಷ ಲೀಟರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ