
ಬೆಂಗಳೂರು : ಕಳೆದೊಂದು ವಾರದಿಂದ ಇಂಡಿಗೋ ವಿಮಾನಯಾನ ಸಮಸ್ಯೆ ಮುಂದುವರಿದಿದ್ದು, ಭಾನುವಾರ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 150 ವಿಮಾನಗಳು ರದ್ದಾಗಿದ್ದವು.
ನಿಲ್ದಾಣಕ್ಕೆ ಬರುವ 76 ವಿಮಾನಗಳು ಹಾಗೂ ಇಲ್ಲಿಂದ ಹೊರಡಬೇಕಿದ್ದ 74 ವಿಮಾನಗಳ ಸಂಚಾರವನ್ನು ಇಂಡಿಗೋ ರದ್ದುಗೊಳಿಸಿತು. ಹಲವು ವಿಮಾನಗಳು ವಿಳಂಬವಾಗಿ ಆಗಮಿಸಿ, ಹೊರಟವು. ದೆಹಲಿ, ಹೈದರಾಬಾದ್, ಇಂದೋರ್, ರಾಯಪುರ್, ಕೊಲ್ಕತ್ತಾ, ಮಂಗಳೂರು ಕೊಚ್ಚಿ, ಶ್ರೀನಗರ, ಭೂಪಾಲ್, ಸೇರಿದಂತೆ ಹಲವಡೆ ತೆರಳಬೇಕಿದ್ದ ವಿಮಾನಗಳು ಸಂಚರಿಸುವುದಿಲ್ಲ ಎಂದು ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದರು.
12 ಗಂಟೆ ಆಸುಪಾಸಿನಲ್ಲಿ ಹೊರಡಬೇಕಿದ್ದ ವಿಮಾನಗಳು ಹಾರಾಡಲಿಲ್ಲ. 11.50ರ ಕೊಲ್ಕತ್ತಾ, 12.40ರ ಮಂಗಳೂರು, 1 ಗಂಟೆಗೆ ದೆಹಲಿ, 1.5ಕ್ಕೆ ಕೊಚ್ಚಿ ಹಾಗೂ 1.20 ರ ನಾಸಿಕ್ ವಿಮಾನ ಸೇರಿ ವಿಮಾನಗಳು ರದ್ದಾಗಿದ್ದವು.
ಟ್ರಾವೆಲ್ ಏಜೆಂಟರೊಬ್ಬರು ಮಾತನಾಡಿ, ವಿಮಾನ ರದ್ದತಿಯಿಂದ ನಮಗೆ ಸಾಕಷ್ಟು ತೊಂದರೆ ಆಗಿದೆ. ನಮ್ಮಲ್ಲಿ ಬುಕ್ ಮಾಡಿರುವ ಪ್ರಯಾಣಿಕರ ಸಂಚಾರ ವ್ಯತ್ಯಯಗೊಂಡು ಪ್ರವಾರ ರದ್ದುಪಡಿಸಿದರು. ಡಿಸೆಂಬರ್ ತಿಂಗಳು ಪ್ರವಾಸದ ಸಮಯ. ಇದಕ್ಕಾಗಿ ಮೂರು ನಾಲ್ಕು ತಿಂಗಳ ಮುಂಚಿತವಾಗಿ ಬುಕ್ ಮಾಡಿದ್ದರು. ನಮ್ಮಲ್ಲಿ ಬುಕ್ ಮಾಡಿರುವ ಗ್ರಾಹಕರು ವಿಮಾನ ನಿಲ್ದಾಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಹಕರಿಗೆ ಉತ್ತರಿಸುವುದು ಕಷ್ಟವಾಗಿದ ಎಂದರು.
ವಿಮಾನಗಳು ವಿಳಂಬವಾದ ಹಿನ್ನೆಲೆಯಲ್ಲಿ ಕೆಲ ಪ್ರಯಾಣಿಕರು ಏರ್ಪೋರ್ಟ್‌ನಲ್ಲಿ ಕಾದು ಕುಳಿತಿದ್ದರು. ಪ್ರಯಾಣಿಕರಿಗೆ ಫ್ಲೈಟ್‌ಗಳ ಬಗ್ಗೆ ಸೂಕ್ತ ಮಾಹಿತಿ ನೀಡಲು ಮತ್ತು ಗೊಂದಲ ನಿವಾರಿಸಲು ಏರ್ಪೋರ್ಟ್ ಆಡಳಿತ ಮಂಡಳಿಯು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿತ್ತು. ರದ್ದಾದ ವಿಮಾನಗಳ ಮಾಹಿತಿಯನ್ನು ಮೊದಲೇ ನೀಡುತ್ತಿರುವುದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂದಣಿ ಕಡಿಮೆಯಾಗಿದ್ದು ಕಂಡುಬಂತು. ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ವಿಮಾನ ನಿಲ್ದಾಣವು ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಏರ್ಪೋರ್ಟ್ ಮಂಡಳಿ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ