ರಾಜಸ್ಥಾನದ 150 ಜನರಿಂದ ವೈದ್ಯಕೀಯ ಸೀಟು ಬ್ಲಾಕ್

By Kannadaprabha NewsFirst Published Oct 14, 2019, 7:29 AM IST
Highlights

ರಾಜ್ಯದ ಮೂರು ವೈದ್ಯಕೀಯ ಕಾಲೇಜುಗಳಲ್ಲಿ 185 ವೈದ್ಯಕೀಯ ಸೀಟುಗಳ ಪೈಕಿ ಸುಮಾರು 150 ಸೀಟುಗಳನ್ನು ರಾಜಸ್ಥಾನ ಮೂಲದ ವಿದ್ಯಾರ್ಥಿಗಳು ಹಿಂದಿರುಗಿಸಿರುವ ಸಂಗತಿಯನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ 

ಬೆಂಗಳೂರು [ಅ.14]:  ಕರ್ನಾಟಕದ ಮೂರು ವೈದ್ಯಕೀಯ ಕಾಲೇಜುಗಳಲ್ಲಿ 185 ವೈದ್ಯಕೀಯ ಸೀಟುಗಳ ಪೈಕಿ ಸುಮಾರು 150 ಸೀಟುಗಳನ್ನು ರಾಜಸ್ಥಾನ ಮೂಲದ ವಿದ್ಯಾರ್ಥಿಗಳು ಹಿಂದಿರುಗಿಸಿರುವ ಸಂಗತಿಯನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಮೂರು ಕಾಲೇಜುಗಳಲ್ಲಿ ಎರಡು ಡೀಮ್ಡ್  ವಿವಿಗಳ ಸಂಯೋಜಿತ ಕಾಲೇಜುಗಳಾಗಿವೆ. ಸೀಟು ಹಿಂದಿರುಗಿಸಿರುವ ಅಭ್ಯರ್ಥಿಗಳು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ತಮ್ಮ ರಾಜ್ಯದ  ರ‌್ಯಾಂಕ್  ಆಧಾರದಲ್ಲಿ ಸೀಟುಗಳನ್ನು ಪಡೆದಿದ್ದರು. ಅಲ್ಲದೆ, ರಾಷ್ಟ್ರ ಮಟ್ಟದ ಏಕಗವಾಕ್ಷಿ ಸೀಟು ಆಯ್ಕೆ ಪ್ರಕ್ರಿಯೆಯಲ್ಲೂ ಪಾಲ್ಗೊಂಡು ಕರ್ನಾಟಕದ ಕಾಲೇಜುಗಳಲ್ಲಿನ ಸೀಟುಗಳನ್ನು ಬ್ಲಾಕಿಂಗ್ ಮಾಡಿದ್ದರು. ಇದರಿಂದಾಗಿ ಆ 3 ಕಾಲೇಜುಗಳು ಹಿಂತಿರುಗಿಸಿದ್ದ ಸೀಟುಗಳನ್ನು ಮ್ಯಾನೇಜ್‌ಮೆಂಟ್ ಕೋಟಾದಡಿ ದುಬಾರಿ ಡೊನೇಷನ್ ಮೂಲಕ ಭರ್ತಿ ಮಾಡಲಾಗಿದೆ. 

ಕಾನೂನು ಪ್ರಕಾರ ಆ ಸೀಟುಗಳು ಡೀಮ್ಡ್ ವಿವಿಗಳಿಗೆ ಹಿಂದಿರುಗಬೇಕಾಗಿತ್ತು. ಆದರೆ, ಕಾಲೇಜುಗಳೇ ತಮ್ಮ ಸಿಬ್ಬಂದಿ ಮತ್ತು ಏಜೆಂಟರ ಮೂಲಕ ದುಬಾರಿ ಡೊನೇಷನ್ ಪಡೆದು ಭರ್ತಿ ಮಾಡಿವೆ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಡೀಮ್ಡ್ ವಿವಿಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೂಪಿಸಿರುವ ನಿಯಮಗಳ ಪ್ರಕಾರವೇ ಹಂಚಿಕೆ ಮಾಡಲಾಗುತ್ತದೆ. ಎರಡೂ ಪ್ರಕ್ರಿಯೆಗಳು ಕೂಡ ನೀಟ್ ರ‌್ಯಾಂಕಿಂಗ್ ಆಧಾರದಲ್ಲಿಯೇ ನಡೆಯುತ್ತವೆ. 

ಕಾಂಗ್ರೆಸಿಗೆ ಪ್ರಧಾನಿ ಮೋದಿ ಸವಾಲ್...

ಆದರೆ, ಕೆಲವು ನಿಯಮಗಳನ್ನು ಮೀರಿ ಸೀಟುಗಳನ್ನು ಬ್ಲಾಕಿಂಗ್ ಮಾಡಲಾಗಿದೆ ಎನ್ನಲಾಗಿದೆ. ಕಳೆದ ಗುರುವಾರದಿಂದ ಶನಿವಾರದವರೆಗೆ ಮಾಜಿ ಉಪಮುಖ್ಯ ಮಂತ್ರಿ ಡಾ| ಜಿ.ಪರಮೇಶ್ವರ್ ನಿವಾಸ ಸೇರಿದಂತೆ ಬೆಂಗಳೂರು ಮತ್ತು ದೆಹಲಿಯ ವಿವಿಧ 28 ಸ್ಥಳಗಳಲ್ಲಿ ಐಟಿ ತನಿಖಾ ಘಟಕದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಮೇಶ್ವರ್ ಕುಟುಂಬದ ನಿಯಂತ್ರಣದಲ್ಲಿರುವ ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಹಾಗೂ ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ದೇವರಾಜು ಅರಸ್ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಬ್ಲಾಕಿಂಗ್ ನಡೆಯುತ್ತಿರುವ ಆರೋಪದ ಮೇಲೆ ದಾಳಿ ಮಾಡಲಾಗಿದೆ. ಯಾವ ಕಾಲೇಜುಗಳಲ್ಲಿರುವ ಸೀಟುಗಳನ್ನು ರಾಜಸ್ಥಾನ ಮೂಲದ ವಿದ್ಯಾರ್ಥಿಗಳು ಬ್ಲಾಕಿಂಗ್ ಮಾಡಿದ್ದರು ಎಂದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ, ಸದ್ಯ ಪರಮೇಶ್ವರ್ ನಿಯಂತ್ರಣದ ಕಾಲೇಜುಗಳ ಮೇಲೆ ದಾಳಿ ನಡೆದಿರುವುದರಿಂದ ಇದೇ ಕಾಲೇಜುಗಳಲ್ಲಿಯೇ ಬ್ಲಾಕಿಂಗ್ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

click me!