
ಬೆಂಗಳೂರು (ಸೆ.24): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬಳಸುವ ಆ್ಯಪ್‌ನಲ್ಲಿ 14 ಎಸ್‌ಸಿ-ಎಸ್‌ಟಿ ಕ್ರೈಸ್ತ ಜಾತಿಗಳು ಕಾಣದಂತೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರ ನಿಯೋಗ ಮಂಗಳವಾರ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂಧನ್ ನಾಯಕ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಈ ಮನವಿ ಬೆನ್ನಲ್ಲೇ ಮಧುಸೂಧನ್ ನಾಯಕ್ ಅವರು ಆಯೋಗದ ಸದಸ್ಯರ ಸಭೆ ನಡೆಸಿ ಬಿಜೆಪಿ ಸದಸ್ಯರು ಆಕ್ಷೇಪಿಸಿದ್ದ 14 ಎಸ್‌ಸಿ-ಎಸ್‌ಟಿ ಕ್ರೈಸ್ತ ಜಾತಿಗಳ ಹೆಸರನ್ನು ಸಮೀಕ್ಷಾ ಪಟ್ಟಿ ಹಾಗೂ ಆ್ಯಪ್‌ನ ಡ್ರಾಪ್‌ಡೌನ್‌ನಿಂದ ಕೈಬಿಡುವ ನಿರ್ಧಾರ ಕೈಗೊಂಡಿತು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವ ವಿ.ಸುನೀಲ್ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ. ವಿಧಾನಪರಿಷತ್ತಿನ ಪ್ರತಿಪಕ್ಷದ ಸಚೇತಕ ಎನ್.ರವಿಕುಮಾರ್ ಮತ್ತಿತರರು ನಿಯೋಗದಲ್ಲಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೃಹತ್ ಐಟಿ ದಾಳಿ: ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಬಿಗ್ ಶಾಕ್
ಆ.23ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗೆ ಸಿದ್ಧಪಡಿಸಿರುವ 1,400 ಜಾತಿಗಳ ಪಟ್ಟಿ ಘೋಷಿಸಿತ್ತು. ಆ ಪಟ್ಟಿಯಲ್ಲಿ 48 ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಎಂದು ಗುರುತಿಸಲಾಗಿತ್ತು. ಈ 48 ಜಾತಿಗಳ ಪೈಕಿ 15 ಎಸ್ಸಿ ಮತ್ತು 1 ಎಸ್ಟಿ ಜಾತಿಗಳಿದ್ದವು. ಇದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸೆ.2ರಂದು ಬಿಜೆಪಿ ನಿಯೋಗ ತಮ್ಮನ್ನು ಭೇಟಿಯಾಗಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಆಕ್ಷೇಪಣೆ ಸಲ್ಲಿಸಿತ್ತು.
ಸೆ.21ರಂದು ತಾವು ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಮೀಕ್ಷೆಗೆ ಬಳಸುವ ಆ್ಯಪ್‌ನಲ್ಲಿ ಈ 33 ಹಿಂದೂ ಜಾತಿಗಳನ್ನು ಕ್ರೈಸ್ತ ಪಟ್ಟಿಯಲ್ಲಿ ಕಾಣದಂತೆ ಮಾಡಿರುವುದಾಗಿ ಹೇಳಿದ್ದೀರಿ. 33 ಜಾತಿಗಳ ಬಗ್ಗೆ ನೀವು ಸರಿಪಡಿಸಿ ಸ್ಪಷ್ಟನೆ ಕೊಟ್ಟಿದ್ದೀರಿ. ಆದರೆ, ಅಧಿಕೃತವಾಗಿ ಇನ್ನೂ ತೆಗೆಯದೆ ಉಳಿದಿರುವ ಜಾತಿಗಳೆಲ್ಲವೂ ಪರಿಶಿಷ್ಟ ಜಾತಿಗಳೇ ಆಗಿರುವುದು ಆತಂಕದ ಬೆಳವಣಿಗೆ ಎಂದು ನಿಯೋಗ ಕಳವಳ ವ್ಯಕ್ತಪಡಿಸಿತ್ತು. ಜೊತೆಗೆ ತಕ್ಷಣ ಈ ಹೆಸರನ್ನು ತೆಗೆದು ಹಾಕಬೇಕು ಮತ್ತು ಈ ಬಗ್ಗೆ ಆಯೋಗ ಅಧಿಕೃತ ಪ್ರಕಟಣೆ ನೀಡಬೇಕು ಎಂದು ಆಗ್ರಹಿಸಿತ್ತು.
ನ್ಯಾ.ದಾಸ್ ಆಯೋಗದ ಸಮೀಕ್ಷೆಯಲ್ಲಿ ಇರಲಿಲ್ಲ:
ಆಯೋಗವು 33 ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟು ಉಳಿದ ದಲಿತ ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ನೀಡದೆ ಕತ್ತಲಲ್ಲಿ ಇರಿಸಿರುವುದು ಸಮರ್ಥನೀಯವಲ್ಲ. ಎರಡು ತಿಂಗಳ ಹಿಂದೆಯೇ ನ್ಯಾ.ನಾಗಮೋಹನ್ ದಾಸ್ ಆಯೋಗ 101 ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿತ್ತು. ಆಗ ಈ 15 ಕ್ರೈಸ್ತ ಜಾತಿಗಳು ಇರಲಿಲ್ಲ. ಈ ಆಯೋಗದ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ಪ್ರವರ್ಗಗಳನ್ನು ರಚಿಸಿ ಮೀಸಲಾತಿ ವರ್ಗೀಕರಿಸಲಾಗಿದೆ. ಈಗ ನಿಮ್ಮ ಆಯೋಗದಿಂದ 14 ಹೊಸ ಕ್ರೈಸ್ತ ಎಸ್ಸಿ ಜಾತಿಗಳ ಸೇರ್ಪಡೆಯಾಗಿ ಸಮೀಕ್ಷೆ ನಡೆದರೆ ದೊಡ್ಡ ಗೊಂದಲ ಉಂಟಾಗಿ ದತ್ತಾಂಶಗಳು ಏರುಪೇರಾಗುತ್ತವೆ. ಹೀಗಾಗಿ ತಾವು ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದೆ.
ಆ್ಯಪ್‌ನಲ್ಲಿ ಹೈಡ್ ಮಾಡಿ:
ಆನ್‌ಲೈನ್‌ನಲ್ಲಿ ಲಭ್ಯವಿರುವ ಆಯೋಗದ ಕೈಪಿಡಿಯಲ್ಲಿ ತಾವು ಈ ತಪ್ಪು ಸರಿಪಡಿಸಿರುವುದು ನಿಜ. ಆದರೆ, ಸಮೀಕ್ಷೆಗೆ ಬಳಸುವ ಆ್ಯಪ್‌ನಲ್ಲೂ ಈ 15 ಕ್ರೈಸ್ತ ಎಸ್ಸಿ ಜಾತಿಗಳು ಕಾಣದಂತೆ ಮಾಡಬೇಕು. ಈ ಬಗ್ಗೆ ತಾವು ತುರ್ತು ಗಮನಹರಿಸಿ ಕ್ರಮ ವಹಿಸಬೇಕು ಎಂದು ನಿಯೋಗವು ಕೋರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ