ನರಹಂತಕ ಹುಲಿ ಹಿಡಿಯಲು 120 ಸಿಬ್ಬಂದಿ, 200 ಕ್ಯಾಮೆರಾ!| ಡ್ರೋನ್ ಕ್ಯಾಮೆರಾ ಕೂಡ ಬಳಸಿ ಶೋಧ: ಸಚಿವ ಪಾಟೀಲ್| ಮೃತ ಇಬ್ಬರ ಕುಟುಂಬಕ್ಕೆ 5 ಲಕ್ಷ ಬದಲು 10 ಲಕ್ಷ ರು. ಪರಿಹಾರ
ವಿಧಾನಸಭೆ[ಅ.13]: ಬಂಡೀಪುರ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಹುಲಿ ದಾಳಿಯಿಂದ ಮೃತಪಟ್ಟಇಬ್ಬರು ರೈತರ ಕುಟುಂಬಗಳಿಗೆ 5 ಲಕ್ಷ ರು. ಬದಲಿಗೆ 10 ಲಕ್ಷ ರು. ಪರಿಹಾರ ನೀಡಲು ಹಣಕಾಸು ಇಲಾಖೆ ಅನುಮತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲದೆ, ಹುಲಿಯನ್ನು ಸೆರೆಹಿಡಿಯಲು ಆದೇಶಿಸಿದ್ದು, 120 ಮಂದಿ ಸಿಬ್ಬಂದಿ, 200ಕ್ಕೂ ಹೆಚ್ಚು ಕಡೆ ಕ್ಯಾಮೆರಾ ಹಾಗೂ ಡ್ರೋನ್ ಕೆಮೆರಾಗಳನ್ನೂ ಸಹ ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಅರಣ್ಯ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಗುಂಡ್ಲುಪೇಟೆ ವಿಧಾನಸಭೆ ಸದಸ್ಯ ಸಿ.ಎಸ್. ನಿರಂಜನ್‌ಕುಮಾರ್ ಅವರ ಗಮನ ಸೆಳೆಯುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಚೌಡಳ್ಳಿ ಗ್ರಾಮದ ಶಿವಮಾದಯ್ಯ ಅವರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರದ ಚೆಕ್ ನೀಡಿದ್ದು, ವಾರಸುದಾರರಿಗೆ 2 ಸಾವಿರ ರು. ಮಾಸಾಶನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮತ್ತೊಬ್ಬ ಮೃತದಾರ ಶಿವಲಿಂಗಪ್ಪ ಅವರ ಕುಟುಂಬಕ್ಕೂ 5 ಲಕ್ಷ ರು. ಪರಿಹಾರ ನೀಡಲಾಗಿದೆ. ವನ್ಯಜೀವಿ ದಾಳಿಯಿಂದ ಮರಣ ಹೊಂದಿದ ಕುಟುಂಬದ ವಾರಸುದಾರರಿಗೆ ನೀಡುವ ಪರಿಹಾರ ಮೊತ್ತವನ್ನು 10 ಲಕ್ಷ ರು.ಗೆ ಹೆಚ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶಿಸಿರುವ ಕಡತವನ್ನು ಆರ್ಥಿಕ ಇಲಾಖೆ ಅನುಮತಿಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು.
ಚಾಮರಾಜನಗರ: ಹುಲಿ ಹಿಡಿಯಲು ಸೋಲಿಗರ ಮೊರೆ
ಅಲ್ಲದೆ, ಶಿವಮಾದಯ್ಯ ಅವರು ಹುಲಿ ದಾಳಿಗೆ ಮೃತರಾದಾಗಲೇ ಚೌಡಳ್ಳಿ ಹಾಗೂ ಹುಂಡೀಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಎರಡು ಕಡೆ ತಾತ್ಕಾಲಿಕ ಕ್ಯಾಂಪ್ ರಚಿಸಿ ಇಲಾಖೆಯ ಆನೆ, ಡ್ರೋನ್ ಕ್ಯಾಮೆರಾ ಸಹಾಯದಿಂದ ದಾರಿ ತಪ್ಪಿದ ಹುಲಿಯ ಶೋಧಕಾರ್ಯ ಕೈಗೊಂಡಿದ್ದರೂ ಹುಲಿ ಪತ್ತೆಯಾಗಿರಲಿಲ್ಲ. ಅ.8ರಂದು ಶಿವಲಿಂಗಪ್ಪ ಅವರ ಮೇಲೂ ದಾಳಿ ಮಾಡಿ ಕೊಂದಿತ್ತು. ಹೀಗಾಗಿ ಅ.9ರಂದು ಹುಲಿ ಪತ್ತೆ ಮಾಡಿ ಸೆರೆ ಹಿಡಿಯಲು ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಶಿಷ್ಟಾಚಾರದ ಪ್ರಕಾರ ಹಿರಿಯ ಅಧಿಕಾರಿಗಳು, 6 ಮಂದಿ ಪಶು ವೈದ್ಯಾಧಿಕಾರಿಗಳನ್ನು ಒಳಗೊಂಡ 120ಕ್ಕೂ ಹೆಚ್ಚು ಸಿಬ್ಬಂದಿಯನ್ನು ಶೋಧ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಇದಲ್ಲದೆ ಹುಲಿಯ ಚಲನವಲನ ಗುರುತಿಸಲು 200ಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಿದ್ದು, ಕೆಲವು ಕಡೆ ಡ್ರೋನ್ ಕೆಮೆರಾಗಳನ್ನೂ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
48 ಗಂಟೆಯಲ್ಲ, ನಾಲ್ಕು ದಿನವಾದ್ರೂ ಸರಿ ಹುಲಿ ಕೊಲ್ಬೇಡಿ: ಅರಣ್ಯ ಸಚಿವರ ಆದೇಶ!