ರಾಜ್ಯಕ್ಕೆ 'ಮಹಾ' ಕಂಟಕ: ಮೊದಲ ಬಾರಿಗೆ ಕೊರೋನಾ ಶತಕ ಸ್ಫೋಟ!

By Kannadaprabha NewsFirst Published May 19, 2020, 7:15 AM IST
Highlights

ರಾಜ್ಯದಲ್ಲಿ ಕೊರೋನಾ ಸೋಂಕು ಸೋಮವಾರ ಮೊದಲ ಬಾರಿಗೆ ಶತಕ ಮೀರಿದೆ| ಮಹಾರಾಷ್ಟ್ರದಿಂದ ವಾಪಸ್ಸಾದವರು ಕರ್ನಾಟಕಕ್ಕೆ ದಿನೇ ದಿನೇ ದೊಡ್ಡ ಕಂಟಕವಾಗಿ ಪರಿಣಮಿಸುತ್ತಿದ್ದಾರೆ|  ಸೋಂಕು ದೃಢಪಟ್ಟ108 ಪ್ರಕರಣಗಳಲ್ಲಿ 74 ಜನರು ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರ, ರಾಯಘಡ ಪ್ರವಾಸದ ಹಿನ್ನೆಲೆಯುಳ್ಳ ಹಾಗೂ ಅವರ ಸಂಪರ್ಕತರು ಎಂಬುದು ಆತಂಕ

ಬೆಂಗಳೂರು(ಮೇ.19): ರಾಜ್ಯದಲ್ಲಿ ಕೊರೋನಾ ಸೋಂಕು ಸೋಮವಾರ ಮೊದಲ ಬಾರಿಗೆ ಶತಕ ಮೀರಿದೆ.ಒಂದೇ ದಿನ 108 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1255ಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ ದೇಶದಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಕೊರೋನಾ ಸೋಂಕು ಹರಡಿರುವ ಮಹಾರಾಷ್ಟ್ರದಿಂದ ವಾಪಸ್ಸಾದವರು ಕರ್ನಾಟಕಕ್ಕೆ ದಿನೇ ದಿನೇ ದೊಡ್ಡ ಕಂಟಕವಾಗಿ ಪರಿಣಮಿಸುತ್ತಿದ್ದಾರೆ. ಸೋಮವಾರ ಸೋಂಕು ದೃಢಪಟ್ಟ108 ಪ್ರಕರಣಗಳಲ್ಲಿ 74 ಜನರು ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರ, ರಾಯಘಡ ಪ್ರವಾಸದ ಹಿನ್ನೆಲೆಯುಳ್ಳ ಹಾಗೂ ಅವರ ಸಂಪರ್ಕತರು ಎಂಬುದು ಆತಂಕದ ವಿಚಾರವಾಗಿದೆ. ಮಹಾರಾಷ್ಟ್ರವಲ್ಲದೆ ತಮಿಳುನಾಡಿನ ಚೆನ್ನೈ, ವೆಲ್ಲೂರು ಪ್ರವಾಸ ಹಿನ್ನೆಲೆಯಲ್ಲಿ ಬೆಂಗಳೂರಿನ ಇಬ್ಬರು, ಗದಗ, ಕೊಪ್ಪಳದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಒಟ್ಟು ಅಂತಾರಾಜ್ಯ ಪ್ರವಾಸ ಹಿನ್ನೆಲೆಯ 78 ಜನರಿಗೆ ಸೋಂಕು ಹರಡಿದೆ.

KSRTC ಬಸ್ ಸಂಚಾರ ಆರಂಭ: ಆನ್‌ಲೈನ್ ಬುಕ್ಕಿಂಗ್ ಶುರು...!

ಕಳೆದ ಒಂದು ವಾರದಿಂದ ಮಹಾರಾಷ್ಟ್ರದಿಂದ ಬಂದ ಒಬ್ಬಿಬ್ಬರಿಗೆ ಸೋಂಕು ದೃಢಪಟ್ಟವರದಿಯಾಗುತ್ತಿತ್ತು. ಕಳೆದ ಮೂರು ದಿನಗಳಿಂದ ಇದು ಹೆಚ್ಚುತ್ತಿದೆ. ಶನಿವಾರ 21 ಮಂದಿಗೆ, ಭಾನುವಾರ 40 ಜನರಿಗೆ ಮತ್ತು ಸೋಮವಾರ 74 ಜನ ಸೇರಿ ಮೂರು ದಿನಗಳಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯುಳ್ಳ 135 ಜನರಿಗೆ ಸೋಂಕು ದೃಢಪಟ್ಟಂತಾಗಿದೆ. ಈ ಪೈಕಿ 60 ಪ್ರಕರಣಗಳು ಮಂಡ್ಯ ಜಿಲ್ಲೆಯಲ್ಲೇ ಪತ್ತೆಯಾಗಿವೆ.

ಸೋಮವಾರ ರಾಜಧಾನಿ ಬೆಂಗಳೂರಿನಲ್ಲಿ 24, ಮಂಡ್ಯ 17, ಕಲಬುರಗಿ 10, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ತಲಾ 9, ರಾಯಚೂರು 6, ವಿಜಯಪುರ, ಯಾದಗಿರಿ, ಗದಗದಲ್ಲಿ ತಲಾ 5, ಹಾಸನ 4, ಕೊಪ್ಪಳ 3, ಬೆಳಗಾವಿ, ದಕ್ಷಿಣ ಕನ್ನಡ 2, ಮೈಸೂರು, ಕೊಡಗು, ಉಡುಪಿ, ಬಳ್ಳಾರಿ, ದಾವಣಗೆರೆ, ಬೀದರ್‌ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 99 ಜನರಿಗೆ ಸೋಂಕು ದೃಢಪಟ್ಟಿವೆ. ಇದರಲ್ಲಿ ಶಿವಮೊಗ್ಗದ 9 ಪ್ರಕರಣಗಳು ಮಾತ್ರ ಅಧಿಕೃತ ಘೋಷಣೆ ಬಾಕಿ ಇದೆ. ಹೊಸ ಪ್ರಕರಣಗಳಲ್ಲಿ ಬೆಂಗಳೂರಿನ 24 ಬಿಟ್ಟು ಉಳಿದ ಬಹುತೇಕ ಅಂತಾರಾಜ್ಯ ಪ್ರವಾಸದ ಹಿನ್ನಲೆಯಿಂದ ಕೂಡಿವೆ.

ಉಳಿದಂತೆ ಬೆಂಗಳೂರಿನ 24 ಪ್ರಕರಣಗಳಲ್ಲಿ 16 ಜನರಿಗೆ ಶಿವಾಜಿನಗರದ ಪಿ.653 ರೋಗಿಯಿಂದ, ಕಂಟೈನ್ಮೆಂಟ್‌ ಪ್ರದೇಶದ ಐವರಿಗೆ ಮತ್ತು ನೆಲಮಂಗಲ, ದಾಬಸಪೇಟೆ ಪ್ರಯಾಣ ಹಿನ್ನೆಲೆಯ ಒಬ್ಬ ವ್ಯಕ್ತಿಗೆ ಸೋಂಕು ಹರಡಿದೆ. ಗದಗದಲ್ಲಿ ಕಂಟೈನ್ಮೆಂಟ್‌ ಪ್ರದೇಶದ ಇಬ್ಬರಿಗೆ, ಪಿ.913ನೇ ರೋಗಿಯಿಂದ ಮತ್ತಿಬ್ಬರಿಗೆ, ಬಳ್ಳಾರಿ, ದಕ್ಷಿಣ ಕನ್ನಡದಲ್ಲಿ ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯ ತಲಾ ಒಬ್ಬರಿಗೆ, ಬೀದರ್‌ನಲ್ಲಿ ಪಿ.939ನೇ ಸೋಂಕಿತನಿಂದ ಒಬ್ಬರಿಗೆ, ಉತ್ತರ ಕನ್ನಡದಲ್ಲಿ ಪಿ.659ನೇ ಸೋಂಕಿತನಿಂದ ಒಬ್ಬರಿಗೆ, ಬೆಳಗಾವಿಯಲ್ಲಿ ಪಿ.575ನೇ ರೋಗಿಯಿಂದ ಒಬ್ಬರಿಗೆ ಸೋಂಕು ಹರಡಿದೆ.

ದೇಶದಲ್ಲಿ 1 ಲಕ್ಷ ಗಡಿ ದಾಟಿತು ಕೊರೋನಾ!

21 ಜನ ಬಿಡುಗಡೆ

ಸೋಮವಾರ ಬೆಳಗಾವಿಯಲ್ಲಿ ಎಂಟು ಮಂದಿ, ಬಾಗಲಕೋಟೆಯಲ್ಲಿ ನಾಲ್ವರು, ತುಮಕೂರು, ಗಲಬುರಗಿ, ಮಂಡ್ಯದಲ್ಲಿ ತಲಾ ಇಬ್ಬರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಸೇರಿ ಒಟ್ಟು 21 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಒಟ್ಟು 1246 ಸೋಂಕಿತರಲ್ಲಿ ಈ ವರೆಗೆ ಗುಣಮುಖರಾದವರ ಸಂಖ್ಯೆ 530ರಷ್ಟಾಗಿದೆ. 37 ಜನ ಮೃತಪಟ್ಟಿದ್ದು, ಉಳಿದ 678 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೈಸೂರು-ಕೊಡಗಿಗೆ ಮತ್ತೆ ಕೊರೋನಾ ಎಂಟ್ರಿ

ಕೊರೋನಾ ಮುಕ್ತ ಜಿಲ್ಲೆಗಳಾಗಿದ್ದ ಮೈಸೂರು ಮತ್ತು ಕೊಡಗಿನಲ್ಲಿ ಸೋಮವಾರ ಮತ್ತೆ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಮೈಸೂರು ಎಲ್ಲ 89 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗುವ ಮೂಲಕ ಶುಕ್ರವಾರವಷ್ಟೇ ಸಂಪೂರ್ಣ ಕೊರೋನಾ ಮುಕ್ತಗೊಂಡಿತ್ತು. ಕೊಡಗಿನಲ್ಲಿ ಮಾಚ್‌ರ್‍ನಲ್ಲಿ ಮಾತ್ರ ಒಬ್ಬ ವ್ಯಕ್ತಿಗೆ ಸೋಂಕು ತಗುಲಿತ್ತು. ನಂತರದ 60 ದಿನಗಳಿಂದ ಜಿಲ್ಲೆ ಸಂಪೂರ್ಣ ವೈರಸ್‌ ಮುಕ್ತವಾಗಿತ್ತು. ಇದರ ಬೆನ್ನಲ್ಲೇ ಸೋಮವಾರ ಮೈಸೂರಲ್ಲಿ ಮುಂಬೈ ಪ್ರವಾಸದ ಹಿನ್ನೆಲೆಯ 46 ವರ್ಷದ ಪುರುಷನಿಗೆ, ಕೊಡಗಿನಲ್ಲಿ ಮುಂಬೈನಿಂದ ಬಂದಿದ್ದ 45 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್‌ ಬಂದಿದೆ.

click me!