ಇಂದಿನಿಂದ ಆಟೋ, ಕ್ಯಾಬ್‌, ಟ್ಯಾಕ್ಸಿ ಸೇವೆ ಶುರು!

By Kannadaprabha News  |  First Published May 19, 2020, 7:07 AM IST

ಇಂದಿನಿಂದ ಆಟೋ, ಕ್ಯಾಬ್‌, ಟ್ಯಾಕ್ಸಿ ಸೇವೆ ಶುರು ಪುನಾರಂಭ| 54 ದಿನದಿಂದ ನಿಂತಿದ್ದ ಸೇವೆಗೆ ಮರುಚಾಲನೆ| ಓಲಾ, ಊಬರ್‌ ಕೂಡ ಆರಂಭ


 ಬೆಂಗಳೂರು(ಮೇ.19): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ 54 ದಿನಗಳಿಂದ ಸಂಚಾರ ಸ್ಥಗಿತಗೊಳಿಸಿದ್ದ ಆಟೋ, ಓಲಾ, ಉಬರ್‌, ಟ್ಯಾಕ್ಸಿ ಗಳು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಮಂಗಳವಾರದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸೇವೆ ಪುನರಾರಂಭಿಸಲಿವೆ.

ಕೊರೋನಾ ಮಹಾಮಾರಿ ನಿಯಂತ್ರಣದ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಾ.24ರಿಂದ ದೇಶಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿದ್ದ ಪರಿಣಾಮ ಎಲ್ಲ ಮಾದರಿಯ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಇದೀಗ ರಾಜ್ಯ ಸರ್ಕಾರ ಕೆಲ ಷರತ್ತುಗಳ ಮೇರೆಗೆ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ ಸೇವೆ ಪುನರಾಂಭಿಸಲು ಅವಕಾಶ ನೀಡಿದೆ. ಸರ್ಕಾರದ ಈ ನಿರ್ಧಾರವನ್ನು ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘಟನೆಗಳು ಸ್ವಾಗತಿಸಿದ್ದು, ಸೇವೆ ನೀಡಲು ಸನ್ನದ್ಧವಾಗಿವೆ.

Tap to resize

Latest Videos

ರಾಜ್ಯಕ್ಕೆ 'ಮಹಾ' ಕಂಟಕ: ಮೊದಲ ಬಾರಿಗೆ ಕೊರೋನಾ ಶತಕ ಸ್ಫೋಟ!

ರಾಜಧಾನಿ ಬೆಂಗಳೂರಿನಲ್ಲಿ 1.30 ಲಕ್ಷ ಆಟೋ ರಿಕ್ಷಾ ಸೇರಿದಂತೆ ರಾಜ್ಯದಲ್ಲಿ ಸುಮಾರು ಮೂರು ಲಕ್ಷ ಆಟೋರಿಕ್ಷಾಗಳಿವೆ. ಅಂತೆಯೆ ರಾಜ್ಯದಲ್ಲಿ 13 ಸಾವಿರ ಸ್ಟೇಜ್‌ ಕ್ಯಾರಿಯೇಜ್‌ ಬಸ್‌ಗಳು ಹಾಗೂ 14 ಸಾವಿರ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್‌ ಬಸ್‌ಗಳು ಇವೆ. ಖಾಸಗಿ ಬಸ್‌ ಆಪರೇಟರ್‌ಗಳು ಸದ್ಯಕ್ಕೆ ಸೇವೆ ಪುನರಾರಂಭಿಸಲು ನಿರಾಕರಿಸಿದ್ದಾರೆ. ಹೀಗಾಗಿ ಬಹುತೇಕ ಆಟೋ ರಿಕ್ಷಾಗಳು ಮಂಗಳವಾರದಿಂದ ರಸ್ತೆಗೆ ಇಳಿಯಲಿವೆ.

ರಾಜ್ಯ ಸರ್ಕಾರವು ಆಟೋ ಹಾಗೂ ಟ್ಯಾಕ್ಸಿಗಳಲ್ಲಿ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಚಾಲಕ ಹೊರತುಪಡಿಸಿ ಇಬ್ಬರು ಪ್ರಯಾಣಿಕರು ಮಾತ್ರ ಸಂಚರಿಸಲು ಅನುಮತಿಸಿದೆ. ಚಾಲಕ ಮತ್ತು ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಸೂಚಿಸಿದೆ. ಅದರಂತೆ ಮಂಗಳವಾರದಿಂದ ಸರ್ಕಾರದ ಮಾರ್ಗಸೂಚಿ ಪಾಲನೆಯೊಂದಿಗೆ ಆಟೋ ಹಾಗೂ ಟ್ಯಾಕ್ಸಿಗಳು ಸಾರ್ವಜನಿಕ ಸೇವೆ ಆರಂಭಿಸಲಿವೆ.

ಖಾಸಗಿ ಬಸ್‌ ಸೇವೆ ಇರಲ್ಲ

ರಾಜ್ಯ ಸರ್ಕಾರ ಖಾಸಗಿ ಬಸ್‌ ಸಂಚಾರಕ್ಕೂ ಅವಕಾಶ ನೀಡಿದ್ದರೂ ಬಸ್‌ ಸೇವೆ ಆರಂಭಿಸಲು ಮಾಲೀಕರು ಸಿದ್ಧರಿಲ್ಲ. ಗ್ರಾಮೀಣ ಭಾಗಗಳಲ್ಲಿ ಸೇವೆ ನೀಡುವ ಸ್ಟೇಜ್‌ ಕ್ಯಾರಿಯೇಜ್‌ ಹಾಗೂ ವಿವಿಧ ನಗರಗಳಿಗೆ ಸಂಚರಿಸುವ ಕಾಂಟ್ರ್ಯಾಕ್ಟ್ ಆಧಾರಿತ ಬಸ್‌ ಸೇವೆ ಇರುವುದಿಲ್ಲ. 30 ಮಂದಿ ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 30 ಅಥವಾ 50 ಎಷ್ಟೇ ಪ್ರಯಾಣಿಕರಿದ್ದರೂ ಖರ್ಚುಗೆ ಒಂದೇ ಆಗಿರುತ್ತದೆ. ಇದರಿಂದ ಬಸ್‌ ಮಾಲೀಕರಿಗೆ ನಷ್ಟವಾಗುತ್ತದೆ. ಹೀಗಾಗಿ ಯಾವುದೇ ಬಸ್‌ಗಳು ಮಂಗಳವಾರದಿಂದ ರಸ್ತೆಗೆ ಇಳಿಯುವುದಿಲ್ಲ ಎಂದು ರಾಜ್ಯ ಟ್ರಾವೆಲ್‌ ಆಪರೇಟರ್‌ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್‌ ಶರ್ಮಾ ತಿಳಿಸಿದರು.

KSRTC ಬಸ್ ಸಂಚಾರ ಆರಂಭ: ಆನ್‌ಲೈನ್ ಬುಕ್ಕಿಂಗ್ ಶುರು...!

ಅಂಕಿ-ಅಂಶ

- ರಾಜ್ಯದಲ್ಲಿರುವ ಸ್ಟೇಜ್‌ ಕ್ಯಾರಿಯೇಜ್‌ ಬಸ್‌ ಸಂಖ್ಯೆ 13 ಸಾವಿರ

- ಕಾಂಟ್ರ್ಯಾಕ್ಸ್‌ ಕ್ಯಾರಿಯೇಜ್‌ ಬಸ್‌ ಸಂಖ್ಯೆ 14 ಸಾವಿರ

- ಆಟೋ ರಿಕ್ಷಾಗಳ ಸಂಖ್ಯೆ 3 ಲಕ್ಷ

click me!