ರಾಜ್ಯದಲ್ಲಿ ಮತ್ತೆ 1000ಕ್ಕೂ ಅಧಿಕ ಕೋವಿಡ್‌ ಕೇಸ್‌: 21 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಪತ್ತೆ

By Kannadaprabha NewsFirst Published Jul 8, 2022, 5:30 AM IST
Highlights

*  ಗುರುವಾರ 1053 ಕೊರೋನಾ ಹೊಸ ಪ್ರಕರಣಗಳು
*  27 ಸಾವಿರ ಕೋವಿಡ್‌ ಟೆಸ್ಟ್‌
*  ಸದ್ಯ ಸಕ್ರಿಯ ಸೋಂಕಿತರ ಪೈಕಿ 94 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ
 

ಬೆಂಗಳೂರು(ಜು.08): ರಾಜ್ಯದಲ್ಲಿ ಸತತ ಎರಡನೇ ದಿನ ಕೊರೋನಾ ಸೋಂಕು ಪ್ರಕರಣಗಳು ಒಂದು ಸಾವಿರ ಗಡಿ ದಾಟಿದ್ದು, 21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ.

ಗುರುವಾರ 1053 ಕೊರೋನಾ ಹೊಸ ಪ್ರಕರಣಗಳು ವರದಿಯಾಗಿದ್ದು, 1080 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವಾಗಿಲ್ಲ. ಸದ್ಯ 6,454 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 27 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.3.8 ದಾಖಲಾಗಿದೆ. ಬುಧವಾರದಷ್ಟೇ ಸೋಂಕು ಪರೀಕ್ಷೆಗಳು ನಡೆದಿದ್ದು, ಹೊಸ ಪ್ರಕರಣಗಳು ಮಾತ್ರ 74 ಕಡಿಮೆಯಾಗಿವೆ (ಬುಧವಾರ 1127, ಸಾವು ಶೂನ್ಯ).

3 ದಿನಗಳ ಬಳಿಕ ರಾಜ್ಯದಲ್ಲಿ ಕೋವಿಡ್‌ ಹೆಚ್ಚಳ: ಇಬ್ಬರು ಸೋಂಕಿತರು ಸಾವು

ವಾರದ ಆರಂಭದಲ್ಲಿ 800 ಆಸುಪಾಸಿನಲ್ಲಿದ್ದ ಹೊಸ ಪ್ರಕರಣಗಳು ಬುಧವಾರದಿಂದ ಒಂದು ಸಾವಿರಕ್ಕಿಂತ ಅಧಿಕ ವರದಿಯಾಗಿವೆ. ಸದ್ಯ ಸಕ್ರಿಯ ಸೋಂಕಿತರ ಪೈಕಿ 94 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಉಳಿದಂತೆ 6,364 ಮಂದಿ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ. ರಾಜ್ಯದಲ್ಲಿ ಈವರೆಗೆ 39.7 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.2 ಲಕ್ಷ ಮಂದಿ ಗುಣಮುಖರಾಗಿದ್ದು, 40,080 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಕೊರೋನಾ ವರದಿಯಲ್ಲಿ ತಿಳಿಸಿದೆ.

21 ಜಿಲ್ಲೆಗಳಲ್ಲಿ ಹೊಸ ಪ್ರಕರಣ:

ಬೆಂಗಳೂರಿಗೆ ಸೀಮಿತವಾಗಿದ್ದ ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಇತರೆ ಜಿಲ್ಲೆಗಳಲ್ಲಿಯೂ ವರದಿಯಾಗುತ್ತಿದೆ. ಗುರುವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 966 ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ 15, ಮೈಸೂರು 10, ಧಾರವಾಡ 9, ಕೋಲಾರ 8, ಹಾಸನ 6, ದಾವಣಗೆರೆ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ಉತ್ತರಕನ್ನಡಲ್ಲಿ ತಲಾ ಮೂರು, ಬೆಳಗಾವಿ, ಬಾಗಲಕೋಟೆ, ಬೀದರ್‌, ಚಾಮರಾಜನಗರ, ಹಾವೇರಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದ 21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ. ಒಂಬತ್ತು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
 

click me!