ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಗ್ರಾಹಕನಿಗೆ 1 ರೂ. ಚಿಲ್ಲರೆ ಕೊಡದೇ ಅಪಹಾಸ್ಯ ಮಾಡಿ ಕಳುಹಿಸಿದ್ದ ಮಹಿಳಾ ಕಂಡಕ್ಟರ್ ಹಾಗೂ ಬಿಎಂಟಿಸಿ ಸಂಸ್ಥೆಗೆ ಗ್ರಾಹಕರ ನ್ಯಾಯಾಲಯ ಬರೋಬ್ಬರಿ 3 ಸಾವಿರ ರೂ. ದಂಡವನ್ನು ವಿಧಿಸಿದೆ.
ಬೆಂಗಳೂರು (ಫೆ.23): ಪ್ರತಿಯೊಬ್ಬ ಗ್ರಾಹಕ ಅಥವಾ ಪ್ರಯಾಣಿಕ ತನ್ನ ಸಾಮರ್ಥ್ಯದಿಂದ ದುಡಿದ 1 ರೂ. ಬಾಕಿಯನ್ನೂ ಪಡೆಯಲು ಅರ್ಹನಾಗಿದ್ದಾನೆ ಎಂದು ಗ್ರಾಹಕರ ಕಾನೂನು ಹೇಳುತ್ತದೆ. ಆದರೆ, ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ನಿರ್ವಾಹಕ (ಕಂಡಕ್ಟರ್) 1 ರೂ. ಚಿಲ್ಲರೆ ಕೊಡದೇ ಹೋಗಿದ್ದರು. ಈಗ ಬರೋಬ್ಬರಿ 3 ಸಾವಿರ ರೂ. ದಂಡವನ್ನು ತೆತ್ತಿದ್ದಾರೆ.
ನಾವು ಸಾಮಾನ್ಯವಾಗಿ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಖರೀದಿ ಮಾಡುವ ವೇಳೆ ಕಂಡಕ್ಟರ್‌ಗಳಿಗೆ ನೋಟುಗಳನ್ನು ಕೊಡುತ್ತೇವೆ. ಆದರೆ, ಅವರು ನಮಗೆ 5 ರೂ.ಗಳಿಗಿಂತ ಕಡಿಮೆ ಮೊತ್ತದ ಚಿಲ್ಲರೆ ಹಣವನ್ನು ವಾಪಸ್ ಕೊಡದೇ ತಮ್ಮಲ್ಲಿಯೇ ಉಳಿಸಿಕೊಳ್ಳುತ್ತಾರೆ. ಇನ್ನು ಕೆಲವರು ನಾಮಕಾವಸ್ಥೆಗೆ ಟಿಕೆಟ್ ಹಿಂದೆ ಬರೆದುಕೊಟ್ಟಿದ್ದು, ಪ್ರಯಾಣಿಕ ನೆನಪು ಮಾಡಿಕೊಂಡು ಕೇಳಿದರೆ ಮಾತ್ರ ವಾಪಸ್ ಕೊಡುತ್ತಾರೆ. ಇಲ್ಲವೆಂದರೆ ಹಣವನ್ನು ತಮ್ಮ ಜೇಬಿಗಿಳಿಸಿಕೊಂಡು ಹೋಗುತ್ತಾರೆ. ಅದೇ ರೀತಿ ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್ ಒಬ್ಬರು 1 ರೂ. ಚಿಲ್ಲರೆ ಹಣವನ್ನು ಕೇಳಿದರೂ ಕೊಡದೇ 3 ಸಾವಿರ ಸಂಬಳವನ್ನೇ ದಂಡವಾಗಿ ಕಟ್ಟಿದ್ದಾಳೆ.
Bengaluru: ಜನವರಿ ಒಂದೇ ತಿಂಗಳಲ್ಲಿ 6.77 ಲಕ್ಷ ರೂ. ದಂಡ ಸಂಗ್ರಹಿಸಿದ ಬಿಎಂಟಿಸಿ!
ಬಾಕಿ ಹಣ ಕೇಳಿದ್ದಕ್ಕೆ ಕೋಪಗೊಂಡ ಕಂಡಕ್ಟರ್: ಸೆಪ್ಟೆಂಬರ್ 11, 2019ರಂದು, ತುಮಕೂರು ನಿವಾಸಿ ರಮೇಶ್ ನಾಯ್ಕ ಅವರು BMTC ವೋಲ್ವೋ ಬಸ್‌ನಲ್ಲಿ ಪ್ರಯಾಣ ಮಾಡಿರುತ್ತಾರೆ. ಈ ವೇಳೆ ಶಾಂತಿನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ 360 ಬಿ ಬಸ್‌ನಲ್ಲಿ ಆಗಮಿಸಿರುತ್ತಾರೆ. ಈ ವೇಳೆ 29 ರೂ. ಇರುವ ಬಸ್ ಟಿಕೆಟ್ ದರಕ್ಕೆ 30 ರೂ. ಹಣವನ್ನು ಮಹಿಳಾ ಕಂಡಕ್ಟರ್‌ಗೆ ಕೊಟ್ಟಿರುತ್ತಾರೆ. ಟಿಕೆಟ್ ಕೊಟ್ಟ ನಂತರ ಬಾಕಿ 1 ರೂ. ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಮಹಿಳಾ ಕಂಡಕ್ಟರ್ ಪ್ರಯಾಣಿಕ ರಮೇಶ್ ನಾಯಕ್ ಅವರನ್ನು ಕೋಪದಿಂದ ದುರುಗುಟ್ಟಿ ನೋಡುತ್ತಾರೆ. ಈ ವೇಳೆ ಸಹ ಪ್ರಯಾಣಿಕರು ಕೂಡ ಆತನನ್ನು ನೋಡಿ ನಕ್ಕು ಅಪಹಾಸ್ಯ ಮಾಡಿದ್ದರು.
ಹಿರಿಯ ಅಧಿಕಾರಿಗಳಿಂದಲೂ ಅಪಹಾಸ್ಯ: ತನ್ನದೇ 1 ರೂ. ಹಣವನ್ನು ಕಳೆದುಕೊಂಡು ಅಪಹಾಸ್ಯಕ್ಕೆ ಒಳಗಾದ ರಮೇಶ್ ನಾಯ್ಕ ಅವರು ಬಸ್ ಸಂಖ್ಯೆ ಹಾಗೂ ಟಿಕೆಟ್ ಸಮೆತವಾಗಿ ಮಹಿಳಾ ಕಂಡಕ್ಟರ್ ವಿರುದ್ಧ ಬಿಎಂಟಿಸಿ ಹಿರಿಯ ಅಧಿಕಾರಿಗಳ ಬಳಿ ಹೋಗಿ ದೂರು ನೀಡುತ್ತಾರೆ. ಆದರೆ, ಈ ವೇಳೆ ಒಂದು ರೂ. ಹಣಕ್ಕಾಗಿ ನೀನು ಅವರ ಮೇಲೆ ದೂರು ಹೇಳಲು ಬಂದಿದ್ದೀಯಾ ಎಂದು ಅವರನ್ನು ಅಲ್ಲಿಯೂ ಅಪಹಾಸ್ಯ ಮಾಡಿ ಕಳುಹಿಸುತ್ತಾರೆ. ಆಗ ನಿಮ್ಮನ್ನು ನಾನು ಬಿಡುವುದಿಲ್ಲ ನನ್ನ ಹಣ ಪಡೆದೇತಿರುತ್ತೇನೆ ಎಂದು ಅಧಿಕಾರಿಗಳಿಗೆ ಸವಾಲು ಹಾಕಿ ಅಲ್ಲಿಂದ ಹೋಗುತ್ತಾರೆ.
15 ಸಾವಿರ ಪರಿಹಾರಕ್ಕೆ ಮನವಿ: ಬಿಎಂಟಿಸಿ ಹಿರಿಯ ಅಧಿಕಾರಿಗಳು ನಡೆದುಕೊಂಡ ಹಾಗೂ ಅಲ್ಲಿಂದ ಆತನನ್ನು ಹೊರಗೆ ಕಳುಹಿಸಿದ ಅವಮಾನದಿಂದ ಮತ್ತಷ್ಟು ಕುಪಿತರಾದರು. ಈ ವೇಳೆ ಬಿಎಂಟಿಸಿ ಸಂಸ್ಥೆ, ಬಿಎಂಟಿಸಿ ಎಂಡಿ ಹಾಗೂ ಮಹಿಳಾ ಕಂಡಕ್ಟರ್ ವಿರುದ್ಧ ಬೆಂಗಳೂರು ಬೆಂಗಳೂರು IVನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಶಾಂತಿನಗರದಲ್ಲಿ ಮೊಕದ್ದಮೆ ಹೂಡುತ್ತಾರೆ. ಈ ವೇಳೆ ತನಗೆ ಉಂಟಾದ ಅನ್ಯಾಯಕ್ಕಾಗಿ 15,000ರೂಪಾಯಿಗಳ
ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.
ಮಾರ್ಚ್‌ನಿಂದ ಬೆಂಗಳೂರಿನಲ್ಲಿ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಸೇವೆ, ದರ ಮತ್ತು ಮಾರ್ಗ ಮಾಹಿತಿ
ಕ್ಷುಲ್ಲಕ ಆರೋಪ ಎಂದ ಬಿಎಂಟಿಸಿಗೆ ಛೀಮಾರಿ: ಇನ್ನು ಈ ಪ್ರಕರಣದ ಅರ್ಜಿಯನ್ನು ವಿಚಾರಣೆ ಮಾಡಿದ ವೇಳೆ ರಮೇಶ್ ನಾಯಕ್ ಅವರು ತಮ್ಮ ವಾದವನ್ನು ನ್ಯಾಯಾಲಯದಲ್ಲಿ ಮಂಡಿಸಿದ್ದಾರೆ. ಆದರೆ, ಬಿಎಂಟಿಸಿ ಪರವಾಗಿ ಹಾಜರಾದ ವಕೀಲರು ಆರೋಪವನ್ನು ನಿರಾಕರಿಸಿ ಈ ದೂರು ಕ್ಷುಲ್ಲಕವಾಗಿದೆ ಎಂದು ಹೇಳಿದರು. ಜನವರಿ 31, 2023ರಂದು ತಮ್ಮ ತೀರ್ಪಿನಲ್ಲಿ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು ಈ ಕೇಸು ನೋಡಲಿಕ್ಕೆ ಕ್ಷುಲ್ಲಕ ಆಗಿರಬಹುದು. ಆದರೆ, BMTC ಬಸ್ ಕಂಡಕ್ಟರ್‌ನ ನಿರ್ಲಕ್ಷ್ಯ ಮತ್ತು ಅಸಡ್ಡೆ ಸೇವೆ ಸ್ವೀಕಾರ್ಹವಾಗಿ ಇರಲಿಲ್ಲ. 1 ರೂಪಾಯಿ ಆದರೂ ತನ್ನ ಹಣವನ್ನು ಪಡೆಯುವುದು ಗ್ರಾಹಕರ ಹಕ್ಕು ಆಗಿದೆ. ಆದ್ದರಿಂದ ಲೋಪದೋಷಗಳಿಗೆ ಬಿಎಂಟಿಸಿಯಿಂದ ಸರಿಯಾದ ಪರಿಹಾರವನ್ನು ಪಡೆಯಲು ಗ್ರಾಹಕ ಸಂರಕ್ಷಣಾ ಕಾಯ್ದೆ -1986ರ ಮೂಲಕ ಅವರಿಗೆ ನ್ಯಾಯ ಒದಗಿಸಬೇಕಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಹಣ ಮರುಪಾತಿಗೆ 45 ದಿನಗಳ ಗಡುವು: BMTC ವ್ಯವಸ್ಥಾಪಕ ನಿರ್ದೇಶಕರು ಬಸ್ ಪ್ರಯಾಣಿಕ ರಮೇಶ್ ನಾಯಕ್ ಅವರಿಗೆ 1ರೂ. ಮರುಪಾವತಿ ಮಾಡಬೇಕು. ಜೊತೆಗೆ, ಅವರಿಗೆ ಉಂಟಾಗಿರುವ ಅಪಹಾಸ್ಯ ಹಾಗೂ ತೊಂದರೆಯ ಕಾರಣಕ್ಕೆ ಪರಿಹಾರವಾಗಿ 2,000 ರೂ.ಗಳನ್ನು ಪಾವತಿಸಬೇಕು. ಜೊತೆಗೆ, ಪ್ರಯಾಣಿಕ ನಾಯಕ್ ಅವರ ಗ್ರಾಹಕ ನ್ಯಾಯಾಲಯದ ವ್ಯಾಜ್ಯ ವೆಚ್ಚಕ್ಕಾಗಿ 1,000 ರೂಪಾಯಿ ಪಾವತಿಸಬೇಕು. ಮತ್ತೊಂದೆಡೆ ನ್ಯಾಯಾಲಯದ ಆದೇಶದ 45
ದಿನಗಳ ಒಳಗೆ ಎಲ್ಲಾ ಮೊತ್ತವನ್ನು ಪ್ರಯಾಣಿಕನಿಗೆ ಪಾವತಿಸಬೇಕು. ಇದನ್ನು ಪಾಲಿಸುವಲ್ಲಿ ವಿಫಲವಾದರೆ ಹೆಚ್ಚುವರಿಯಾಗಿ ದಂಡ ಮತ್ತು ಈಗ ವಿಧಿಸಿರುವ ದಂಡಕ್ಕೆ ಬಡ್ಡಿಯನ್ನು ವಿಧಿಸಲಾಗುವುದು ನ್ಯಾಯಾಲಯ ಆದೇಶ ಹೊರಡಿಸಿದೆ.