* ರಾಜಕೀಯ ಅನಿಶ್ಚಿತತೆಯಿಂದ ಹೊರಬಂದು ಭರವಸೆಯ ಹೆಜ್ಜೆ
* ಜನಪರ ಕಾರ್ಯಕ್ರಮಗಳ ಮೂಲಕ ಅಭಿವೃದ್ದಿಯ ಹೊಸ ಭರವಸೆ
* ಬೊಮ್ಮಾಯಿ ಇದೇ ಹಾದಿಯಲ್ಲಿ ಸಾಗಿದಲ್ಲಿ ಪಕ್ಷ ಮತ್ತು ಸರ್ಕಾರದ ವರ್ಚಸ್ಸು ವೃದ್ಧಿ
ಬೆಂಗಳೂರು(ಆ.28): ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಇಂದಿಗೆ(ಶನಿವಾರ) ಮೊದಲ ಒಂದು ತಿಂಗಳು ಪೂರೈಸಲಿದ್ದು, ಹಂತ ಹಂತವಾಗಿ ರಾಜಕೀಯ ಅನಿಶ್ಚಿತತೆಯಿಂದ ಹೊರಬಂದು ಭರವಸೆಯತ್ತ ಹೆಜ್ಜೆ ಇರಿಸಿದ್ದಾರೆ.
ಈ ಒಂದು ತಿಂಗಳ ಅವಧಿಯ ಬೊಮ್ಮಾಯಿ ಅವರ ನಡೆ ಮತ್ತು ಅವರ ಆಡಳಿತದ ವೈಖರಿಯನ್ನು ಕುತೂಹಲದಿಂದ ಗಮನಿಸುತ್ತಿರುವ ಆಡಳಿತಾರೂಢ ಬಿಜೆಪಿ ವರಿಷ್ಠರಿಗೆ ಮತ್ತು ಕಾರ್ಯಕರ್ತರಿಗೆ ಒಂದಷ್ಟು ಸಮಾಧಾನ ತಂದಿದೆ. ಬೊಮ್ಮಾಯಿ ಅವರು ಇದೇ ಹಾದಿಯಲ್ಲಿ ಸಾಗಿದಲ್ಲಿ ಪಕ್ಷ ಮತ್ತು ಸರ್ಕಾರದ ವರ್ಚಸ್ಸು ವೃದ್ಧಿಯಾಗಲಿದೆ ಎಂಬ ನಿರೀಕ್ಷೆಯನ್ನೂ ಮೂಡಿಸಿದೆ.
ರಾಜ್ಯ ಬಿಜೆಪಿಯಲ್ಲಿನ ತೀವ್ರ ಬೆಳವಣಿಗೆಗಳ ನಡುವೆ ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ ಬೊಮ್ಮಾಯಿ ಅವರು ಕಳೆದ ಜು.28ರಂದು ಪ್ರಮಾಣವಚನ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿರುವ ಬೊಮ್ಮಾಯಿ ಅವರು ಅವರಂತೆಯೇ ಏಕಾಂಗಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹಲವು ಹೊಸ ನಿರ್ಣಯಗಳನ್ನು ಪ್ರಕಟಿಸುವ ಮೂಲಕ ಹಾಗೂ ನಂತರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಾಡಿನ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲೂ ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ತಾವು ಅಭಿವೃದ್ಧಿ ಪರ ಎಂಬುದನ್ನು ನಿರೂಪಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಬೆನ್ನಲ್ಲೇ ಎದುರಾದ ಸಂಪುಟ ರಚನೆ ಮತ್ತು ಖಾತೆಗಳ ಹಂಚಿಕೆಯಲ್ಲಿ ಜಾಣ್ಮೆಯನ್ನು ಮೆರೆದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅದಕ್ಕೆ ಸಂಬಂಧಿಸಿದ ಅಸಮಾಧಾನವನ್ನೂ ಅಲ್ಲಲ್ಲೇ ನಿಭಾಯಿಸಿ ತಣ್ಣಗಾಗಿಸುವಲ್ಲಿ ಯಶಸ್ವಿಯಾದರು.
ಸಚಿವ ಆನಂದ್ ಸಿಂಗ್ ಸುದ್ದಿಗೋಷ್ಠಿ: ಖಾತೆ ಬಗ್ಗೆ ಮಹತ್ವದ ಹೇಳಿಕೆ
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಮುಂದೆ ಯಾರೇ ಮುಖ್ಯಮಂತ್ರಿಯಾದರೂ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ತೀವ್ರ ಸ್ವರೂಪಕ್ಕೆ ತಿರುಗಿ ಕೋಲಾಹಲವಾಗುತ್ತದೆ ಎಂಬ ಪ್ರತಿಪಕ್ಷಗಳ ಎಣಿಕೆಯನ್ನು ಹುಸಿಗೊಳಿಸಿದ ಕೀರ್ತಿಯೂ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ. ಕಳೆದ ಒಂದು ತಿಂಗಳಲ್ಲಿ ಪ್ರತಿಪಕ್ಷಗಳು ಪ್ರಮುಖವಾಗಿ ಬೆರಳು ತೋರುವಂಥ ಯಾವುದೇ ಅಚಾತುರ್ಯವಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಸಣ್ಣ ಪುಟ್ಟಆರೋಪಗಳು ಕೇಳಿಬಂದರೂ ಅದಕ್ಕೆ ತಕ್ಷಣವೇ ಸ್ಪಂದಿಸಿ ಸರಿಪಡಿಸುವ ಪ್ರಯತ್ನವನ್ನೂ ಬೊಮ್ಮಾಯಿ ಮಾಡಿದ್ದಾರೆ.
ಅನಗತ್ಯ ವೆಚ್ಚಕ್ಕೆ ಕಡಿವಾಣ:
ತಮ್ಮನ್ನು ಭೇಟಿಯಾಗಲು ಬರುವವರು ಹಾರ ತರಾಯಿ ತರದಂತೆ ಸೂಚನೆ ನೀಡಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ತಾಕೀತು ಮಾಡಿದ್ದಾರೆ.
3 ಅಲೆ ತಡೆಗೆ ಕ್ರಮ:
ಕೋವಿಡ್ ಮೂರನೇ ಅಲೆ ಬರಬಹುದು ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಬೊಮ್ಮಾಯಿ ಅವರು ನೆರೆಯ ಕೇರಳದಿಂದ ಅಪಾಯವಾಗುವುದನ್ನು ತಡೆಗಟ್ಟುವ ಸಂಬಂಧ ಗಡಿ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಬಂದಿದ್ದಾರೆ.
ಆರ್ಥಿಕ ಶಿಸ್ತು:
ಕ್ಷಿಪ್ರ ಅವಧಿಯಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಆರ್ಥಿಕ ಶಿಸ್ತನ್ನು ಸರಿದಾರಿಗೆ ತರಲು ಬೇಕಾದ ಪ್ರಯತ್ನಕ್ಕೂ ಕೈಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಂಡು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಚರ್ಚೆ ನಡೆಸಿದ್ದಾರೆ.
ರಾಜ್ಯದ ಹಿತಕ್ಕೆ ಬದ್ಧ:
ಇದೆಲ್ಲದರ ನಡುವೆ ನೆರೆಯ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅದಕ್ಕೆ ಪ್ರತಿಯಾಗಿ ಕಾನೂನು ತಜ್ಞರ ನೆರವಿನೊಂದಿಗೆ ಯೋಜನೆ ಜಾರಿಗೆ ಹೆಜ್ಜೆ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ನೆಲ, ಜಲ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಾರಿದ್ದಾರೆ.
ಈ ನಡುವೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳ ಚುನಾವಣೆ ಘೋಷಣೆಯಾಗಿದೆ. ಬರುವ ಸೆ.3ರಂದು ಮತದಾನ ನಡೆಯಲಿದೆ. ಆ ಚುನಾವಣೆಯತ್ತಲೂ ಗಮನಹರಿಸಿರುವ ಬೊಮ್ಮಾಯಿ ಅವರು ಅಲ್ಲಿ ಪಕ್ಷ ಗೆಲ್ಲಲು ಬೇಕಾದ ರಣತಂತ್ರವನ್ನೂ ಪಕ್ಷದ ಮುಖಂಡರೊಂದಿಗೆ ರೂಪಿಸುತ್ತಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸರಿದಾರಿಯಲ್ಲಿ ಸಾಗುತ್ತಿದ್ದಾರೆ ಎಂಬ ಮೆಚ್ಚುಗೆ ಆಡಳಿತಾರೂಢ ಬಿಜೆಪಿಯಷ್ಟೇ ಅಲ್ಲದೆ ಪ್ರತಿಪಕ್ಷಗಳಿಂದಲೂ ವ್ಯಕ್ತವಾಗುತ್ತಿದೆ.