3800 ಕೋಟಿ ರೂಪಾಯಿಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮಾಡುವ ನಿಟ್ಟಿನಲ್ಲಿ ಶುಕ್ರವಾರ ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಈ ವೇಳೆ. ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ನಗರದಲ್ಲಿ ಸಿದ್ಧತೆ ಮಾಡಲಾಗುತ್ತಿದ್ದು, ಮೋದಿಗೆ ಪರಶುರಾಮ ಪುತ್ಥಳಿಯನ್ನು ಉಡುಗರೆ ನೀಡಲಾಗುತ್ತದೆ.
ಬೆಂಗಳೂರು (ಆ.31): ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಆಯೋಜಿಸಿರುವ ಸಮಾವೇಶದ ಯಶಸ್ಸಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು 1 ಲಕ್ಷಕ್ಕೂ ಮೇಲ್ಪಟ್ಟು ಜನರು ಸೇರುವ ನಿರೀಕ್ಷೆ ಇದೆ. ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯ ಬಳಿಕ ಈ ಸಮಾವೇಶ ನಡೆಯಲಿದೆ. ರಾಜಕೀಯವಾಗಿಯೂ ಇದು ಮಹತ್ವ ಪಡೆದಿರುವುದರಿಂದ ಸಣ್ಣಪುಟ್ಟ ಸಂಗತಿಗಳಿಗೂ ಬಿಜೆಪಿ ವಿಶೇಷ ಲಕ್ಷ್ಯ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮದ ಖುದ್ದು ಮೇಲುಸ್ತುವಾರಿ ವಹಿಸಿದ್ದು, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜತೆಗೆ ಈಗಾಗಲೇ ಸ್ಥಳ ಪರಿಶೀಲನೆ ಹಾಗೂ ಸಭೆ ನಡೆಸಲಾಗಿದೆ. ಈ ಸಮಾವೇಶಕ್ಕೆ ಕರಾವಳಿ ಜಿಲ್ಲೆಗಳಲ್ಲೇ ಇತ್ತೀಚಿನ ದಿನಗಳಲ್ಲಿ ಸೇರದೇ ಇರುವಷ್ಟು ಜನರನ್ನು ಸೇರಿಸಲಾಗುತ್ತಿದೆ. ಕರಾವಳಿ ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ ಸ್ವಯಂಪ್ರೇರಣೆಯಿಂದಲೇ ಜನರು ಸಮಾವೇಶಕ್ಕೆ ಆಗಮಿಸಲಿದ್ದಾರೆ. ಸುಮಾರು ಒಂದು ಲಕ್ಷ ಜನರು ಮೋದಿ ಭಾಷಣ ಕೇಳುವುದಕ್ಕೆ ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
2 ಸಾವಿರ ಬಸ್: ಸಮಾವೇಶ ಸ್ಥಳಕ್ಕೆ ಉಭಯ ಜಿಲ್ಲೆಗಳಿಂದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಕರೆತರುವುದಕ್ಕೆ ಸುಮಾರು 2 ಸಾವಿರ ಬಸ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮದ ಬಳಿಕ ಬಿಜೆಪಿ ಕೋರ್ ಕಮಿಟಿ ಸಭೆಯೂ ಸೇರಿದಂತೆ ಸುಮಾರು ಒಂದು ಗಂಟೆ ಕಾಲ ಪಕ್ಷದ ನಾಯಕರ ಜತೆಗೆ ಪ್ರಧಾನಿ ಮೋದಿ ಚರ್ಚೆ ನಡೆಸಲಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಪರಶುರಾಮ ಪುತ್ಥಳಿ : ಪ್ರಧಾನಿ ಮೋದಿಯವರಿಗೆ ಈ ಕಾರ್ಯಕ್ರಮದ ಸ್ಮರಣಾರ್ಥವಾಗಿ ತುಳುನಾಡು ನಿರ್ಮಾತೃ ಪರಶುರಾಮನ ಭವ್ಯ ಪುತ್ಥಳಿಯನ್ನು ಉಡುಗೊರೆ ರೂಪದಲ್ಲಿ ಕೊಡಲು ನಿಶ್ಚಯಿಸಲಾಗಿದೆ. ಈ ಪುತ್ಥಳಿಯನ್ನು ವಿಶೇಷ ಆಸ್ಥೆಯಿಂದ ಸಿದ್ಧಪಡಿಸುವುದಕ್ಕೆ ಸಚಿವ ಸುನಿಲ್ ಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ. ಕರಾವಳಿಯ ಇತಿಹಾಸದಲ್ಲಿ ನಭೂತೋ ಎಂಬಂತೆ ಕಾರ್ಯಕ್ರಮ ಯಶಸ್ವಿಗೊಳಿಸಲು ಕೇಸರಿಪಡೆ ಈಗ ಸಜ್ಜಾಗಿದೆ.
ಮಂಗಳೂರಿನಲ್ಲಿ 3800 ಕೋಟಿ ರೂಪಾಯಿ ಯೋಜನೆ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ!
3800 ಕೋಟಿ ರೂಪಾಯಿ ಯೋಜನೆ ಅನಾವರಣ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸೆಪ್ಟೆಂಬರ್ 1 ಹಾಗೂ 2 ರಂದು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ (Karnataka) ಹಾಗೂ ಕೇರಳಕ್ಕೆ (Kerala) ಭೇಟಿ ನೀಡಲಿದ್ದಾರೆ. ಮೊದಲು ಕೇರಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ, ಸೆ. 1 ರಂದು ಸಂಜೆ 6.30ಕ್ಕೆ ಕೊಚ್ಚಿನ್ ವಿಮಾನ ನಿಲ್ದಾಣದ ಬಳಿಯ ಕಾಲಡಿ ಗ್ರಾಮದಲ್ಲಿರುವ ಆದಿ ಶಂಕರಾಚಾರ್ಯರ ಪವಿತ್ರ ಜನ್ಮಸ್ಥಳವಾದ ಶ್ರೀ ಆದಿಶಂಕರ ಜನ್ಮ ಭೂಮಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಮರುದಿನ ಕೊಚ್ಚಿನ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣವಾಗಿರುವ ಸಂಪೂರ್ಣ ಸ್ವದೇಶಿ ವಿಮಾನವಾಹಕ ಸಮರನೌಕೆ ಐಎನ್‌ಎಸ್ ವಿಕ್ರಾಂತ್‌ಅನ್ನು ಭಾರತೀಯ ನೌಕಾಪಡೆಗೆ ನಿಯೋಜನೆ ಮಾಡಲಿದ್ದಾರೆ.
ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ಸಮಯ ಬದಲಾವಣೆ: ವಿವರ ಇಲ್ಲಿದೆ..
ಅದಾದ ಬಳಿಕ, ಕರ್ನಾಟಕಕ್ಕೆ ಬರಲಿದ್ದು, ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನವಮಂಗಳೂರು ಬಂದರು ಪ್ರಾಧಿಕಾರವು (New Mangalore Port Authority) ಕೈಗೆತ್ತಿಕೊಂಡಿರುವ 3800 ಕೋಟಿ ರೂಪಾಯಿಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿ ಬಳಿಕ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಿಂದ (Mangalore Refinery and Petrochemicals Limited) ಕೈಗೆತ್ತಿಕೊಂಡ ಎರಡು ಯೋಜನೆಗಳಾದ ಬಿಎಸ್ -4 ಅಪ್ಗ್ರೇಡೇಶನ್ ಪ್ರಾಜೆಕ್ಟ್ ಮತ್ತು ಸೀ ವಾಟರ್ ಡೆಸಾಲಿನೇಶನ್ ಪ್ಲಾಂಟ್ ಅನ್ನು ಉದ್ಘಾಟಿಸಲಿದ್ದಾರೆ. ಸುಮಾರು 1830 ಕೋಟಿ ರೂಪಾಯಿ ಮೌಲ್ಯದ BS VI ಉನ್ನತೀಕರಣ ಯೋಜನೆಯು ಅಲ್ಟ್ರಾ-ಶುದ್ಧ ಪರಿಸರ ಸ್ನೇಹಿ BS-VI ದರ್ಜೆಯ ಇಂಧನ (10 PPM ಗಿಂತ ಕಡಿಮೆ ಸಲ್ಫರ್ ಅಂಶದೊಂದಿಗೆ) ಉತ್ಪಾದನೆಯನ್ನು ಸುಲಭಗೊಳಿಸುತ್ತದೆ.