ಮಲೆನಾಡಲ್ಲಿ ಭಾರೀ ಮಳೆ: ಟಿಬಿ, ಕೆಆರ್‌ಎಸ್‌ ಡ್ಯಾಂನಿಂದ 1 ಲಕ್ಷ ಕ್ಯುಸೆಕ್‌ ಹೊರಕ್ಕೆ

By Kannadaprabha NewsFirst Published Aug 8, 2022, 2:30 AM IST
Highlights

ಕೃಷ್ಣರಾಜ ಸಾಗರ ಮತ್ತು ಹೊಸಪೇಟೆಯ ತುಂಗಭದ್ರಾ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿರುವ ನೀರು 

ಬೆಂಗಳೂರು(ಆ.07):  ರಾಜ್ಯದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ಪ್ರಮುಖ ನದಿಗಳಾದ ಕಾವೇರಿ, ಹೇಮಾವತಿ, ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೃಷ್ಣರಾಜ ಸಾಗರ ಮತ್ತು ಹೊಸಪೇಟೆಯ ತುಂಗಭದ್ರಾ ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡುತ್ತಿರುವ ಹಿನ್ನೆಲೆಯಲ್ಲಿ ತೀರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಮಂಡ್ಯ ಜಿಲ್ಲೆಯಲ್ಲಿ ಕೆಆರ್‌ಎಸ್‌ನಿಂದ ಹೊರಬಿಟ್ಟಿರುವ ನೀರಿನಿಂದಾಗಿ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ, ವಿಶ್ವಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ನದಿ ಸಮೀಪದ ತಗ್ಗು ಪ್ರದೇಶಗಳು, ಪ್ರವಾಸಿ ತಾಣಗಳು ಮುಳುಗಡೆ ಹಂತಕ್ಕೆ ಬಂದಿವೆ. ಇನ್ನು ಹೊಸಪೇಟೆಯಲ್ಲಿ ತುಂಗಭದ್ರಾ ಜಲಾಶಯದಿಂದ ಹೊರಬಿಟ್ಟಿರುವ ನೀರಿನಿಂದಾಗಿ ವಿಶ್ವಪ್ರಸಿದ್ಧ ಪರಂಪರೆಯ ತಾಣಗಳಾದ ಹಂಪಿಯ ಹಲವು ಸ್ಥಳಗಳು ಮುಳುಗಡೆಯಾಗಿವೆ.

ಕೊಡಗಿನ ಭಾಗಮಂಡಲ, ಮಡಿಕೇರಿ, ಹಾಸನ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೃಷ್ಣರಾಜಸಾಗರ ಜಲಾಶಯದಿಂದ ಕಾವೇರಿ ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರನ್ನು ಹೊರ ಬಿಟ್ಟಿರುವುದರಿಂದ ಕಾವೇರಿ ನದಿ ತೀರದ ಪ್ರವಾಸಿ ತಾಣಗಳು, ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ನದಿ ತೀರದ ಪ್ರಮುಖ ಪ್ರವಾಸಿತಾಣಗಳಾದ ಬಲಮುರಿ, ಎಡಮುರಿ, ಪಶ್ಚಿಮವಾಹಿನಿ, ಪಟ್ಟಣದ ಸ್ನಾನಘಟ್ಟ, ವೆಲ್ಲೆಸ್ಲಿ ಸೇತುವೆ, ರಂಗನತಿಟ್ಟು, ಗಂಜಾಂನ ನಿಮಿಷಾಂಬ, ಸಂಗಮ…, ಗೋಸಾಯಿಘಾಚ್‌ ಸೇರಿದಂತೆ ಇತರೆಡೆಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ನೀರಕ್ಕೆ ತೆರಳದಂತೆ ತಾಲೂಕು ಹಾಗೂ ಪೊಲೀಸ್‌ ಇಲಾಖೆ ಬ್ಯಾರಿಕೇಡ್‌ ಬಳಸಿ ಕಟ್ಟೆಚ್ಚರ ವಹಿಸಿದ್ದಾರೆ.

ಕೊಡಗು- ಮಡಿಕೇರಿಯಲ್ಲಿ ಕಂಡು ಕೇಳರಿಯದ ಮೇಘಸ್ಪೋಟ, ಭೂಕುಸಿತ ಕಂಟಕ

ಶಿವಮೊಗ್ಗದ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ 1.09 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ 30 ಗೇಟ್‌ ತೆಗೆದು 98 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಗಿದೆ. ಇದರಿಂದ ಹಂಪಿಯ ಪುರಂದರ ಮಂಟಪ, ಕಾಲು ಸೇತುವೆ, ಧಾರ್ಮಿಕ ವಿಧಿವಿಧಾನ ನಡೆಸುವ ಮಂಟಪ, ರಾಮಲಕ್ಷ್ಮಣ ದೇಗುಲ ಜಲಾವೃತವಾಗಿವೆ. ನದಿ ದಡದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಂಗಾವತಿ ಬಳಿಯ ಕೃಷ್ಣದೇವರಾಯ ಸಮಾಧಿ, ನವ ವೃಂದಾವನ ಗಡ್ಡೆಯೂ ಜಲಾವೃತವಾಗಿದೆ. ಜಲಾಶಯದ 33 ಗೇಟ್‌ ಪೈಕಿ 30 ಗೇಟ್‌ ತೆರೆದು ನದಿಗೆ ನೀರು ಹೊರ ಬಿಡಲಾಗುತ್ತಿದೆ.

ಇನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಿನ್ನೀರು ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಲಿಂಗನಮಕ್ಕಿ ಜಲಾಶಯಕ್ಕೆ 40 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯ ಶೇ.65ರಷ್ಟುಭಾಗ ಭರ್ತಿಯಾಗಿದೆ. ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ ಜಲಾಶಯ ಶೀಘ್ರದಲ್ಲೇ ಭರ್ತಿಯಾಗುವ ಸಾಧ್ಯತೆಗಳಿವೆ.
 

click me!