ಒಂದು ಅಂಕಪಟ್ಟಿ ಇಬ್ಬರು ಸಹೋದರಿಯರಿಗೆ ಸರ್ಕಾರಿ ಕೆಲಸ; 18 ವರ್ಷದಲ್ಲಿ ₹1.6 ಕೋಟಿ ಸಂಬಳ ಪಡೆದ ಹಗರಣ!

Published : May 06, 2025, 04:40 PM IST
ಒಂದು ಅಂಕಪಟ್ಟಿ ಇಬ್ಬರು ಸಹೋದರಿಯರಿಗೆ ಸರ್ಕಾರಿ ಕೆಲಸ; 18 ವರ್ಷದಲ್ಲಿ ₹1.6 ಕೋಟಿ ಸಂಬಳ ಪಡೆದ ಹಗರಣ!

ಸಾರಾಂಶ

ಮಧ್ಯಪ್ರದೇಶದಲ್ಲಿ ಅವಳಿ ಸಹೋದರಿಯರು ಒಂದೇ ಅಂಕಪಟ್ಟಿ ಬಳಸಿ ೧೮ ವರ್ಷಗಳ ಕಾಲ ಶಿಕ್ಷಕಿಯರಾಗಿ ಕೆಲಸ ಮಾಡಿ ೧.೬೦ ಕೋಟಿ ರೂ. ಸಂಬಳ ಪಡೆದಿದ್ದಾರೆ. ವರ್ಗಾವಣೆ ವೇಳೆ ವಂಚನೆ ಬಯಲಾಗಿದೆ. ಒಬ್ಬರನ್ನು ಅಮಾನತುಗೊಳಿಸಲಾಗಿದ್ದು, ಮತ್ತೊಬ್ಬರು ಪರಾರಿಯಾಗಿದ್ದಾರೆ. ನ್ಯಾಯಾಲಯದ ಆದೇಶದಂತೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ಸರ್ಕಾರಿ ಕೆಲಸ ಪಡೆಯುವುದಕ್ಕೂ ಅದೃಷ್ಟ ಇರಬೇಕು, ಅದರಲ್ಲಿಯೂ ಸರ್ಕಾರಿ ಸಂಬಳವನ್ನು ತಿನ್ನುವುದಕ್ಕೆ ಪುಣ್ಯ ಮಾಡಿರಬೇಕು ಎಂದು ಹೇಳುತ್ತಾರೆ. ಆದರೆ, ಇಲ್ಲೊಬ್ಬ ಅವಳಿ ಸಹೋದರಿಯರು ಇಬ್ಬರೂ ಪಿಯುಸಿ, ಡಿಗ್ರಿ ಹಾಗೂ ವೃತ್ತಿಪರ ಕೋರ್ಸ್‌ನ ಒಂದು ಅಂಕಪಟ್ಟಿಯನ್ನು ಬಳಸಿ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕಿಯರಾಗಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾರೆ. ನಂತರ, 18 ವರ್ಷಗಳ ಕಾಲ ವಿವಿಧ ಶಾಲೆಗಳಲ್ಲಿ ಕೆಲಸ ಮಾಡಿ ಸರ್ಕಾರಿ ಸಂಬಳವನ್ನೂ ತಿಂದಿದ್ದಾರೆ. ಇದೀಗ, ಒಂದೇ ಶಾಲೆಗೆ ವರ್ಗಾವಣೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದಾಗ ದಾಖಲೆ ಪರಿಶೀಲನೆ ವೇಳೆ ಸಿಕ್ಕಿ ಬಿದ್ದಿದ್ದಾರೆ. 

ಈ ಘಟನೆ ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ನಡೆದಿದ್ದು, ಅವಳಿ ಸಹೋದರಿಯರು ಒಂದೇ ಶಾಲೆಗೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಕೆ ಮಾಡಿದಾಗ ಆಶ್ಚರ್ಯಕರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಇಬ್ಬರು ಅವಳಿ ಸಹೋದರಿಯರು ಕೇವಲ ಒಂದು ಹೆಸರು ಮತ್ತು ಒಂದೇ ಪ್ರಮಾಣಪತ್ರವನ್ನು ಬಳಸಿಕೊಂಡು ಸರ್ಕಾರಿ ಕೆಲಸ ಪಡೆದುಕೊಂಡಿದ್ದಾರೆ. ಅದು ಕೂಡ 18 ವರ್ಷಗಳ ಕಾಲ ಸರ್ಕಾರಿ ಕೆಲಸ ಮಾಡುತ್ತಾ ಇಬ್ಬರೂ ಸೇರಿ ಸುಮಾರು 1.60 ಕೋಟಿ ರೂ. ಸಂಬಳವನ್ನು ಸರ್ಕಾರದಿಂದ ಪಡೆದುಕೊಂಡಿದ್ದಾರೆ.

ಒಂದೇ ಮುಖ, ಇಬ್ಬರು ಶಿಕ್ಷಕಿಯರು! ಇಬ್ಬರು ಶಿಕ್ಷಕಿಯರಿಗೆ ಒಂದೇ ಪ್ರಮಾಣಪತ್ರ:

ಇನ್ನು ಶಿಕ್ಷಣ ಇಲಾಖೆ ತನಿಖೆಯಲ್ಲಿ ಇಬ್ಬರು ಸಹೋದರಿಯರ ಹೆಸರು ಒಂದೇ ಆಗಿತ್ತು ಮತ್ತು ಅವರು ಒಂದೇ ಬಿಎ ಪದವಿ ಪ್ರಮಾಣಪತ್ರದ ಆಧಾರದ ಮೇಲೆ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಪಡೆದಿದ್ದಾರೆ ಎಂದು ಬಹಿರಂಗವಾಗಿದೆ. ಒಂದೇ ಹೆಸರಿನ ದಾಖಲೆಗಳಿಂದ ಅವರು ಶಿಕ್ಷಣ ಇಲಾಖೆಯನ್ನು ದಾರಿ ತಪ್ಪಿಸಿ ದೀರ್ಘಕಾಲದವರೆಗೆ ಬೇರೆ ಬೇರೆ ಶಾಲೆಗಳಲ್ಲಿ ಪಾಠ ಮಾಡಿದ್ದಾರೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಈ ವಂಚನೆಯು ಇದೀಗ ಇಬ್ಬರು ಸಹೋದರಿಯರು ಒಂದೇ ಶಾಲೆಗೆ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದಾಗ ಬೆಳಕಿಗೆ ಬಂದಿದೆ. ಇಬ್ಬರ ಹೆಸರು ಮತ್ತು ದಾಖಲೆಗಳು ಯಥಾವತ್ತಾಗಿ ಹೊಂದಾಣಿಕೆಯಾದಾಗ ಅಧಿಕಾರಿಗಳಿಗೆ ಅನುಮಾನ ಬಂದು, ಆಳವಾದ ತನಿಖೆ ನಡೆಸಿದಾಗ ಆಘಾತಕಾರಿ ಸತ್ಯ ಬಯಲಾಗಿದೆ.

1.60 ಕೋಟಿ ಸಂಬಳ, ಒಂದೇ ಒಂದು ಪ್ರಮಾಣಪತ್ರವೂ ನಿಜವಲ್ಲ: 

ಈವರೆಗೆ ಮಧ್ಯಪ್ರದೇಶ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯಡಿ ಇಬ್ಬರು ಸಹೋದರಿಯರು ಬೇರೆ ಬೇರೆ ಶಾಲೆಗಳಲ್ಲಿ ಕೆಲಸ ಮಾಡಿ ಒಟ್ಟು 1.60 ಕೋಟಿ ರೂ. ಸಂಬಳ ಪಡೆದಿದ್ದಾರೆ. ಅವರು ಪ್ರತಿ ವರ್ಷ ಸಂಬಳ ಹೆಚ್ಚಳ ಮತ್ತು ಸೌಲಭ್ಯಗಳನ್ನು ಪಡೆಯುತ್ತಿದ್ದರು. ಆದರೆ ಇಬ್ಬರು ಒಂದೇ ಪ್ರಮಾಣಪತ್ರದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಯಾರೂ ಗುರುತಿಸಲಿಲ್ಲ. ಇನ್ನು ಶಿಕ್ಷಣ ಇಲಾಖೆ ತನಿಖೆಯ ಸಮಯದಲ್ಲಿ, ತಪ್ಪು ಮಾಡಿರುವುದು ಬೆಳಕಿಗೆ ಬಂದಿದೆ. ಇಬ್ಬರು ಸಹೋದರಿಯರ ಪೈಕಿ ದೀಪೇಂದ್ರ ಅವರ ಪತ್ನಿ ರಶ್ಮಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ವಿಜಯ್ ಅವರ ಪತ್ನಿ ರಶ್ಮಿ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. ಹೈಕೋರ್ಟ್ ಆದೇಶದ ಹೊರತಾಗಿಯೂ ಶಿಕ್ಷಣ ಇಲಾಖೆ ಆರಂಭದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರಿ ಅಧಿಕಾರಿಗಳ ವಿರುದ್ಧವೇ ಹಗರಣದಲ್ಲಿ ಭಾಗಿ ಆಗಿರಬಹುದು ಎಂಬ ಅನುಮಾನ ಹುಟ್ಟುಹಾಕಿದೆ.

ಸೇವೆಯಿಂದ ವಜಾಗೊಳಿಸಲು ತೀರ್ಮಾನ: 

ಶಿಕ್ಷಣ ಇಲಾಖೆಯಿಂದ ಶಿಕ್ಷಕಿಯರ ಮೇಲೆ ದೂರು ದಾಖಲಿಸಿದ ನಂತರ ಈ ಪ್ರಕರಣವು ದೊಡ್ಡ ಹಂತಕ್ಕೆ ಬೆಳೆದಿದ್ದರಿಂದ ಈ ಪ್ರಕರಣ ಹೈಕೋರ್ಟ್‌ಗೆ ತಲುಪಿತು. ಏಪ್ರಿಲ್ 9 ರೊಳಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಆದಾಗ್ಯೂ, ನಕಲಿ ದಾಖಲೆಗಳ ಶಂಕೆಯಿರುವ 16 ಶಿಕ್ಷಕರು ಇನ್ನೂ ಸೇವೆಯಲ್ಲಿದ್ದಾರೆ ಎಂಬುದು ತಿಳಿದುಬಂದಿದೆ. ಇದರ ಬೆನ್ನಲ್ಲಿಯೇ ದಮೋಹ್‌ ಜಿಲ್ಲಾ ಶಿಕ್ಷಣಾಧಿಕಾರಿ ಎಸ್‌.ಕೆ. ನೇಮಾ ಅವರು ಪರಾರಿಯಾಗಿರುವ ಸಹೋದರಿಗೆ ಅಂತಿಮ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅವಳು ಉತ್ತರಿಸದಿದ್ದರೆ, ಇಲಾಖೆಯು ಒಂದು ತಿಂಗಳೊಳಗೆ ಅವಳ ಸೇವೆಯನ್ನು ಕೊನೆಗೊಳಿಸಿ ಹೈಕೋರ್ಟ್‌ಗೆ ವರದಿ ಸಲ್ಲಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!