ಗ್ರಾಮೀಣ ಶಾಲೆ ಅಲರ್ಜಿ: ಬಡ್ತಿಯೇ ಬೇಡ ಎನ್ನುತ್ತಿದ್ದಾರೆ ಶಿಕ್ಷಕರು!

By Suvarna News  |  First Published Dec 29, 2019, 7:47 AM IST

ಹಳ್ಳಿ ಅಲರ್ಜಿ: ಬಡ್ತಿಯೇ ಬೇಡ ಅಂತಿದ್ದಾರೆ ಶಿಕ್ಷಕರು!| ಬಡ್ತಿ ಪಡೆದರೆ ಗ್ರಾಮೀಣ ಶಾಲೆಗೆ ಹೋಗಬೇಕೆಂಬ ಭೀತಿ| ಮುಖ್ಯ ಶಿಕ್ಷಕರ ಹುದ್ದೆಗೆ ನೀಡಿದ ಬಡ್ತಿ ನಿರಾಕರಿಸಿದ ಬೆಂಗಳೂರು ಶಿಕ್ಷಕರು


ಬೆಂಗಳೂರು[ಡಿ.29]: ಸರ್ಕಾರಿ ಹುದ್ದೆಯಲ್ಲಿ ಬಡ್ತಿ ಪಡೆಯಲು ವರ್ಷಾನುಗಟ್ಟಲೆ ಕರ್ತವ್ಯ ನಿರ್ವಹಿಸಬೇಕಾದ ಸಂದರ್ಭ ಇರುವಾಗ, ಬೆಂಗಳೂರಿನ ವಿವಿಧ ಸರ್ಕಾರಿ ಶಾಲಾ ಶಿಕ್ಷಕರು ತಮಗೆ ಮುಖ್ಯ ಶಿಕ್ಷಕ ಹುದ್ದೆಗೆ ನೀಡಿರುವ ಬಡ್ತಿಯನ್ನು ನಿರಾಕರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಅವರೂ ಸೇರಿದಂತೆ ಬೆಂಗಳೂರು ದಕ್ಷಿಣ ವಲಯದ 3ರ ವ್ಯಾಪ್ತಿಯ ವಿವಿಧ ಸರ್ಕಾರಿ ಶಾಲೆಗಳ 12 ಶಿಕ್ಷಕರು ತಮಗೆ ನೀಡಿರುವ ಪದೋನ್ನತಿ ವಾಪಸ್‌ ಪಡೆಯಲು ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಬಡ್ತಿ ಪಡೆದರೆ ನಗರ ಬಿಟ್ಟು ಹಳ್ಳಿಗೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ಇವರು ಪದೋನ್ನತಿ ಪಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.

Tap to resize

Latest Videos

undefined

ಸೇವಾ ಹಿರಿತನ ಹಾಗೂ ಇತರೆ ಮಾನದಂಡಗಳನ್ನು ಆಧರಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕ ಹಾಗೂ ಹಿರಿಯ ಮುಖ್ಯಶಿಕ್ಷಕ ಹುದ್ದೆಗಳಿಗೆ ಪದೋನ್ನತಿ ನೀಡಿ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದರಲ್ಲಿ ನಗರದ 12 ಶಿಕ್ಷಕರು ತಮ್ಮ ಬಡ್ತಿ ವಾಪಸ್‌ ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಬೆಂಗಳೂರು ದಕ್ಷಿಣ ವಲಯ-2 ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಮನವಿಯನ್ನು ಪ್ರಾಥಮಿಕ ಶಿಕ್ಷಣ ನಿರ್ದೇಶಕರಿಗೆ ಡಿ.27ರಂದು ಕಳುಹಿಸಿದ್ದಾರೆ. ಶಿಕ್ಷಕರ ಈ ನಡೆ ಇಲಾಖೆ ಹಾಗೂ ಶಿಕ್ಷಕರ ವಲಯದಲ್ಲೇ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿದೆ.

ಹತ್ತಾರು ವರ್ಷಗಳಿಂದ ನಗರ ಪ್ರದೇಶದಲ್ಲೇ ಠಿಕಾಣಿ ಹೂಡಿರುವ ಶಿಕ್ಷಕರನ್ನು ಹಳ್ಳಿಗಳ ಶಾಲೆಗಳಿಗೆ ವರ್ಗಾವಣೆ ಮಾಡಲು ಸರ್ಕಾರ ನಿಯಮ ಜಾರಿಗೆ ತಂದಿದೆ. ಆದರೂ, ಶಿಕ್ಷಕರು ಹಳ್ಳಿಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹಲವು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹಳ್ಳಿಗೆ ಹೋಗಬೇಕೆಂಬ ಕಾರಣಕ್ಕೆ ಬಡ್ತಿಯನ್ನೂ ನಿರಾಕರಿಸುತ್ತಿರುವುದು ಇಲಾಖೆಯಲ್ಲಿ ಆತಂಕ ಮೂಡಿಸಿದೆ.

ಸರ್ಕಾರ ನೀಡಿದ ಬಡ್ತಿ ಅಥವಾ ಪದೋನ್ನತಿ ತಮಗೆ ಇಷ್ಟವಿಲ್ಲದಿದ್ದರೆ ಆ ಹುದ್ದೆಯನ್ನು ಬೇರೊಬ್ಬರಿಗೆ ಬಿಟ್ಟುಕೊಟ್ಟು ತಾವು ಹಾಲಿ ನಿರ್ವಹಿಸುತ್ತಿರುವ ಹುದ್ದೆಯಲ್ಲೇ ಮುಂದುವರೆಯಲು ಸರ್ಕಾರಿ ನೌಕರರಿಗೆ ಅವಕಾಶಗಳಿವೆ. ಆದರೆ, ಬಡ್ತಿ ನೀಡಿ ತಮಗೆ ನಿಯೋಜಿಸಿದ ಸ್ಥಳಕ್ಕೆ ಹೋಗಲು ನಿರಾಕರಿಸಿ ಅಥವಾ ನಗರದಿಂದ ಪಟ್ಟಣಕ್ಕೆ ಹೋಗಬೇಕೆಂಬ ಕಾರಣಕ್ಕೆ ಶಿಕ್ಷಕರು ಬಡ್ತಿ ನಿರಾಕರಿಸುತ್ತಿರುವುದು ಟೀಕೆಗೆ ಗುರಿಯಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ಇಂತಹ ಮನವಿಗಳನ್ನು ಒಪ್ಪಬಾರದು. ಒಂದು ವೇಳೆ ಬಡ್ತಿಯನ್ನು ಆ ಶಿಕ್ಷಕರು ಬಿಟ್ಟುಕೊಟ್ಟರೂ, ಹಳ್ಳಿಗಳ ಶಾಲೆಗೆ ಹೋಗಿ ಕೆಲಸ ಮಾಡುವಂತೆ ವರ್ಗಾವಣೆ ಮಾಡಬೇಕು ಎಂಬ ಆಗ್ರಹ ಶಿಕ್ಷಕರ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಹಳ್ಳಿಗೆ ಹೋಗಬೇಕೆಂಬ ಕಾರಣಕ್ಕೆ ನಾನು ಪದೋನ್ನತಿ ನಿರಾಕರಿಸಿಲ್ಲ. ನನಗೆ ಇನ್ನೊಂದು ವರ್ಷ ಮಾತ್ರ ಸೇವಾವಧಿ ಇದೆ. ಸರ್ಕಾರ ನೀಡುವ ಪದೋನ್ನತಿ ಸ್ವೀಕರಿಸುವುದು ಅಥವಾ ನಿರಾಕರಿಸಿ ಹಿಂದಿನ ಹುದ್ದೆಯಲ್ಲೇ ಮುಂದುವರೆಯಲು ಕಾನೂನಲ್ಲಿ ಅವಕಾಶವಿದೆ. ಅಲ್ಲದೆ, ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನದಲ್ಲಿರುವುದರಿಂದಲೂ ನನಗೆ ನಗರದಲ್ಲಿ ಮುಂದುವರೆಸುವಂತೆ ಕೋರಲು ಅವಕಾಶವಿದೆ. ಆ ಆಧಾರದಲ್ಲಿ ಮನವಿ ಮಾಡಿದ್ದೇನೆ.

- ನಾರಾಯಣಸ್ವಾಮಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

click me!