ವಿಚ್ಛೇದನ ಬಳಿಕ ‘ಸ್ತ್ರೀಧನ’ ಪತಿಗೆ ಸೇರಿದ್ದಲ್ಲ: ಹೈಕೋರ್ಟ್‌!

By Suvarna News  |  First Published Jun 16, 2022, 7:34 AM IST

* ವಿಚ್ಛೇದಿತ ಪತ್ನಿ ತಂದಿದ್ದ ಸ್ತ್ರೀಧನ ವಾಪಸ್‌ ನೀಡಲು ಪತಿಗೆ ಆದೇಶ

* ಮದುವೆ ವೇಳೆ 9 ಲಕ್ಷ ಸ್ತ್ರೀಧನ ನೀಡಿದ್ದ ಪತ್ನಿ

*ಪತ್ನಿಗೆ ವಿಚ್ಛೇದನ ನೀಡುವುದು ಬೇರೆ

*ಪತ್ನಿಗೆ ಜೀವನಾಂಶ ನೀಡುವುದು ಬೇರೆ

*ಎರಡಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ


ಬೆಂಗಳೂರು(ಜೂ.16): ಪತ್ನಿ ಮದುವೆ ವೇಳೆ ತಂದಿದ್ದ ಹಣ, ಒಡವೆ ಸೇರಿದಂತೆ ‘ಸ್ತ್ರೀಧನ’ವನ್ನು ವಿಚ್ಛೇದನದ ನಂತರ ಪತಿ ಹಿಂದಿರುಗಿಸಬೇಕು ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಆದೇಶಿಸಿದೆ.

ಮದುವೆ ವೇಳೆ ತಮ್ಮಿಂದ ಪಡೆದಿದ್ದ .9 ಲಕ್ಷ ಹಣ ಹಾಗೂ ಒಡವೆ ಸೇರಿ ‘ಸ್ತ್ರೀಧನ’ ವಾಪಸ್‌ ನೀಡಿಲ್ಲ ಎಂದು ಆರೋಪಿಸಿ ವಿಚ್ಛೇದಿತ ಪತ್ನಿ ಸುಷ್ಮಾ ದಾಖಲಿಸಿರುವ ನಂಬಿಕೆ ದ್ರೋಹ ಪ್ರಕರಣ ರದ್ದುಪಡಿಸುವಂತೆ ಮುಂಬೈ ಮೂಲದ ಶಿವ ಮತ್ತು ಅವರ ಕುಟುಂಬದ ಸದಸ್ಯರು (ದಂಪತಿಯ ಹೆಸರು ಬದಲಿಸಲಾಗಿದೆ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Tap to resize

Latest Videos

undefined

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯಪೀಠ, ‘ಮದುವೆ ಮುರಿದುಬಿದ್ದು ವಿಚ್ಛೇದನ ಪಡೆದ ನಂತರ ಪತ್ನಿಗೆ ಶಾಶ್ವತ ಜೀವನಾಂಶ ನೀಡುವುದು ಬೇರೆ. ಪತ್ನಿ ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ಗಂಡನ ಮನೆಗೆ ತಂದಿದ್ದ ಹಣ ಹಾಗೂ ಒಡವೆ ವಿಚಾರ ಬೇರೆ. ಒಂದಕ್ಕೊಂದು ಸೇರಿಸುವಂತಿಲ್ಲ. ಮದುವೆ ರದ್ದಾದರೆ ವಿವಾಹದ ವೇಳೆ ಪತ್ನಿ ನೀಡಿದ್ದ ಹಣ ಮತ್ತು ಒಡವೆಗಳನ್ನು ಪತಿ ಮತ್ತವರ ಕುಟುಂಬದವರು ಇಟ್ಟುಕೊಳ್ಳಬಹುದು ಎಂದರ್ಥವಲ್ಲ’ ಎಂದು ತಿಳಿಸಿದರು.

‘ಪ್ರಕರಣದಲ್ಲಿ ಮದುವೆ ಸಂದರ್ಭದಲ್ಲಿ ಪತಿ ಮತ್ತು ಅವರ ಕುಟುಂಬದವರಿಗೆ ಪತ್ನಿ .9 ಲಕ್ಷ ನೀಡಿರುವುದು ಸತ್ಯ. ವಿಚ್ಛೇದನದ ನಂತರ ಪತಿಯು ಪತ್ನಿಗೆ ಜೀವನಾಂಶ ನೀಡುತ್ತಿದ್ದರೂ ಸಹ, ಆಕೆ ಮದುವೆ ವೇಳೆ ನೀಡಿದ್ದ .9 ಲಕ್ಷ ಹಣ ಹಾಗೂ ಒಡವೆಯನ್ನು ವಾಪಸ್‌ ನೀಡಬೇಕು. ಅದರ ಮೇಲೆ ಹಕ್ಕು ಮಂಡಿಸಲು ಪತಿ ಮತ್ತವರ ಕುಟುಂಬದವರಿಗೆ ಅವಕಾಶವಿಲ್ಲ’ ಎಂದು ಆದೇಶಿಸಿರುವ ಹೈಕೋರ್ಟ್‌, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.

ಪ್ರಕರಣದ ವಿವರ:

ಬಾಂಬೆ ಮೂಲದ ಶಿವ ಮತ್ತು ಬೆಂಗಳೂರಿನ ಸುಷ್ಮಾ 1998ರಲ್ಲಿ ಮದುವೆಯಾಗಿದ್ದರು. ಮದುವೆ ವೇಳೆ ಸುಷ್ಮಾ ಅವರು ಪತಿಗೆ 9 ಲಕ್ಷ ರು. ಮತ್ತು ಒಡವೆ ನೀಡಿದ್ದರು. 2001ರಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಉದ್ಭವಿಸಿತ್ತು. ಇದರಿಂದ ಪತ್ನಿಯು ಗಂಡನ ತೊರೆದಿದ್ದರು. 2001ರ ಸೆ.10ರಂದು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ಮತ್ತು ಜೀವನಾಂಶಕ್ಕಾಗಿ 3 ಲಕ್ಷ ಹಣವನ್ನು ಪತ್ನಿಗೆ ಪತಿ ನೀಡಲು ಒಪ್ಪಂದವಾಗಿತ್ತು. ಅದರಂತೆ ಪತ್ನಿಗೆ ಮೂರು ಲಕ್ಷ ಪಾವತಿಸಿದ್ದರು.

ನಂತರ ವಿಚ್ಛೇದನ ಕೋರಿ ಬಾಂಬೆ ಹೈಕೋರ್ಟ್‌ಗೆ ಪತಿ ಅರ್ಜಿ ಸಲ್ಲಿಸಿದ್ದರು. ಹಲವು ಸುತ್ತಿನ ಕಾನೂನು ಹೋರಾಟದ ನಂತರ ಅಂತಿಮವಾಗಿ 2014ರಲ್ಲಿ ಬಾಂಬೆ ಹೈಕೋರ್ಟ್‌ ವಿಚ್ಛೇದನ ಮಂಜೂರು ಮಾಡಿತು. ಜತೆಗೆ, ಪತ್ನಿಗೆ ಶಾಶ್ವತ ಜೀವನಾಂಶವಾಗಿ 4 ಲಕ್ಷ ರು. ನೀಡುವಂತೆ ಶಿವ ಅವರಿಗೆ ಆದೇಶಿಸಿತ್ತು.

ಈ ಮಧ್ಯೆ ಮದುವೆ ವೇಳೆ ನೀಡಿದ್ದ 9 ಲಕ್ಷ ಹಣ ಮತ್ತು ಒಡವೆಯನ್ನು ನೀಡಲು ನಿರಾಕರಿಸಲಾಗಿದೆ ಎಂದು ಆರೋಪಿಸಿ ಸುಷ್ಮಾ ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದರು. ಅದರ ವಿಚಾರಣೆಯನ್ನು ಬೆಂಗಳೂರಿನ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ನಡೆಸುತ್ತಿದೆ. ಅದನ್ನು ರದ್ದುಪಡಿಸುವಂತೆ ಕೋರಿ ಶಿವ ಮತ್ತವರ ಕುಟುಂಬದವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲರು, ಬಾಂಬೆ ಹೈಕೋರ್ಟ್‌ ಆದೇಶದಂತೆ ಸುಷ್ಮಾಗೆ ಜೀವನಾಂಶವಾಗಿ 4 ಲಕ್ಷ ಹಣ ನೀಡಲಾಗಿದೆ. ಆದ್ದರಿಂದ ಆಕೆಗೆ ಮತ್ಯಾವುದೇ ಹಣ ಪಾವತಿಸುವುದು ಉಳಿದಿಲ್ಲ ಎಂದು ವಾದಿಸಿದ್ದರು.

ಸುಷ್ಮಾ ಪರ ವಕೀಲರು, ಶಾಶ್ವತ ಜೀವನಾಂಶವಾಗಿ ನೀಡಿರುವ ನಾಲ್ಕು ಲಕ್ಷ ರು.ಹಣದಲ್ಲಿ ಮದುವೆಗೂ ಮುನ್ನ ನೀಡಿರುವ ಹಣ ಸೇರಿಲ್ಲ. ವಿಚ್ಛೇದನ ಮಂಜೂರಾದ ನಂತರ ಸ್ತ್ರೀಧನ ರೂಪದಲ್ಲಿ ನೀಡಿರುವ ಹಣವನ್ನು ಪತಿ ಮತ್ತವರ ಕುಟುಂಬದವರು ಇಟ್ಟುಕೊಳ್ಳುವಂತಿಲ್ಲ. ಅದನ್ನು ಹಿಂದಿರುಗಿಸದೆ ನಂಬಿಕೆ ದ್ರೋಹ ಮಾಡಲಾಗಿದೆ ಎಂದು ಪ್ರತಿಪಾದಿಸಿದ್ದರು.

click me!