ಬೆಂಗಳೂರು (ಮೇ.25): ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಇನ್ನೂ ಎರಡು ವರ್ಷಗಳ ಕಾಲ ಸಾಮಾಜಿಕ ಲಸಿಕೆ ಮತ್ತು ಜೈವಿಕ ಲಸಿಕೆ ಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಮೂರನೇ ಅಲೆ ಅಪ್ಪಳಿಸುವ ಕುರಿತು ರಾಜಕೀಯ ಹೇಳಿಕೆಗಳನ್ನು ಹೊರತುಪಡಿಸಿದರೆ, ತಜ್ಞರಲ್ಲಿ ಭಿನ್ನತೆ ಇದೆ. ವೈದ್ಯರಿಗೆ, ವಿಜ್ಞಾನಿಗಳಿಗೆ ಮೂರನೇ ಅಲೆಯ ಬಗ್ಗೆ ಬಹುದೊಡ್ಡ ಪ್ರಶ್ನೆ ಇದೆ ಎಂದೂ ಅವರು ಹೇಳಿದ್ದಾರೆ.
undefined
ಸಾಮಾಜಿಕ ಜಾಲತಾಣದ ಮೂಲಕ ಮಾತನಾಡಿರುವ ಅವರು, ಒಂದು ವೈಜ್ಞಾನಿಕವಾಗಿ ಪಡೆಯುವ ಲಸಿಕೆಯಾದರೆ, ಮತ್ತೊಂದು ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಪಾಡುವ ಸಾಮಾಜಿಕ ಲಸಿಕೆ. ಆದರೆ, ಹುಂಬತನದಿಂದ ಎಡವುತ್ತಿರುವ ಕಾರಣ ಮುಂದಿನ ಎರಡು ವರ್ಷಗಳ ಕಾಲವೂ ಈ ಸಮಸ್ಯೆಯನ್ನು ಎದುರಿಸಬೇಕು ಎಂಬುದು ಕೆಲವು ತಜ್ಞರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ಕೊರೋನಾ ಲಸಿಕೆ ಜನರ ತೋಳಿಗೇ ಏಕೆ ಕೊಡ್ತಾರೆ?! ...
ದೇಶದಲ್ಲಿ ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ದಾಖಲಾಗುತ್ತಿದ್ದ ಪ್ರಕರಣಗಳು ಕಳೆದ ಹತ್ತು ದಿನಗಳಿಂದ ಎರಡೂವರೆ ಲಕ್ಷಕ್ಕಿಂತ ಹೆಚ್ಚು ದಾಖಲಾಗುತ್ತಿವೆ. ಉತ್ತರಪ್ರದೇಶದಲ್ಲಿ 40 ಸಾವಿರದಷ್ಟಿದ್ದ ಸೋಂಕಿನ ಪ್ರಕರಣ 7-8 ಸಾವಿರಕ್ಕೆ ಇಳಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 60 ಸಾವಿರದಿಂದ 35 ಸಾವಿರಕ್ಕೆ ಇಳಿಕೆಯಾಗುತ್ತಿದೆ. ಹೀಗೆ ಹಲವು ರಾಜ್ಯದಲ್ಲಿ ತುತ್ತತುದಿಯನ್ನು ಮುಟ್ಟಿನಿಧಾನವಾಗಿ ಸೋಂಕು ಇಳಿಮುಖವಾಗುತ್ತಿದೆ ಎಂದರು.
ದೇಶವು ಕೋವಿಡ್ ಸಮಸ್ಯೆಯಿಂದಾಗಿ ಉಸಿರುಗಟ್ಟಿದ ವಾತಾವರಣದಲ್ಲಿದೆ. ಇಂತಹ ಸಮಯದಲ್ಲಿ ಇಷ್ಟಬಂದಂತೆ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರು ಅಂದಿನ ದುಡಿಮೆಯನ್ನು ಅಂದೇ ದುಡಿದು ಬದುಕುವುದು ಕಷ್ಟಕರವಾಗುತ್ತಿದೆ. ಇದರಿಂದ ಹೊರ ಬರಬೇಕಾಗಿದೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣವನ್ನು ಪಕ್ಷದ ಹೆಸರುಗಳ ಮೂಲಕ ಮತ್ತು ಮತಗಳ ಮೂಲಕ ನೋಡಬಾರದು. ಇತ್ತೀಚೆಗೆ ನಡೆದ ಗಾಜಾಪಟ್ಟಿಮತ್ತು ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಇಸ್ರೇಲ್‌ನ ರಾಜಕೀಯ ಪಕ್ಷಗಳು, ಜನರು ವರ್ತಿಸಿರುವುದನ್ನು ನೋಡಿ ನಮ್ಮ ದೇಶದ ರಾಜಕೀಯ ಪಕ್ಷಗಳು ಕಲಿಯಬೇಕು ಎಂದು ಸಂತೋಷ್ ಸಲಹೆ ನೀಡಿದರು.
ಚುನಾವಣೆ, ಕುಂಭಮೇಳ ಕಾರಣ ಆರೋಪ ಸುಳ್ಳು: ಕೋವಿಡ್ ಹೆಚ್ಚುವುದಕ್ಕೆ ಸಂಬಂಧಿಸಿದಂತೆ ಚುನಾವಣೆ, ಕುಂಭಮೇಳಕ್ಕೆ ಅವಕಾಶ ನೀಡಿ ಕೇಂದ್ರ ಸರ್ಕಾರ ಎಡವಿತು ಎಂಬ ಆರೋಪಗಳು ಕೇಳಿಬಂದವು. ಆದರೆ, ಇದರಲ್ಲಿ ಸತ್ಯಾಂಶ ಇಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಮಾರ್ಚ್ ಮೊದಲ ವಾರದಲ್ಲಿ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಯಿತು. ಆದರೆ, ಮುಂಬೈನಲ್ಲಿ ಹೆಚ್ಚಳವಾಗಲಿಲ್ಲ. ಮಹಾರಾಷ್ಟ್ರ, ದೆಹಲಿ, ಛತ್ತೀಸ್‌ಗಢದಲ್ಲಿ ಚುನಾವಣೆಗಳಾಗಲಿ, ದೊಡ್ಡ ಕಾರ್ಯಕ್ರಮಗಳಾಗಲಿ ಇರಲಿಲ್ಲ. ಅನಿರೀಕ್ಷಿತವಾಗಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಯಿತು. ನಂತರ ಬೇರೆ ರಾಜ್ಯಗಳಲ್ಲೂ ಸೊಂಕು ಹಬ್ಬಿತು ಎಂದು ಹೇಳಿದರು.
ಕೇಂದ್ರ ಸರ್ಕಾರವು ಸೆಪ್ಟೆಂಬರ್ ತಿಂಗಳಲ್ಲಿಯೇ ಆಮ್ಲಜನಕ ಉತ್ಪಾದನೆ ಹೆಚ್ಚಳಕ್ಕೆ ಪ್ರಯತ್ನ ಮಾಡಿತ್ತು. ರಾಜ್ಯಗಳಿಗೆ ಈ ಬಗ್ಗೆ ಸೂಚನೆಯನ್ನು ಸಹ ನೀಡಿದ್ದರೂ ಬಹುತೇಕ ರಾಜ್ಯಗಳು ಕ್ರಮ ಕೈಗೊಳ್ಳಲಿಲ್ಲ. 24 ಗಂಟೆಯಲ್ಲಿ ಆಮ್ಲಜನಕ ಖರೀದಿ ಮಾಡಬೇಕು ಎಂದು ಮುಖ್ಯಮಂತ್ರಿಯೊಬ್ಬರು ಹೇಳಿದರು. ಆದರೆ, ಆ ರೀತಿ ಆಗಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಕೇಂದ್ರ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಹುಳುಕು ಹುಡುಕುವ ಪ್ರಯತ್ನ ಮಾಡಬಾರದು. ಸಮಾಜದ ಪ್ರತಿಯೊಬ್ಬರೂ ಸರ್ಕಾರ, ವೈದ್ಯರು, ಆಸ್ಪತ್ರೆ, ಪೊಲೀಸರ ಜತೆ ಕೈ ಜೋಡಿಸಬೇಕು. ಆಗ ಮಾತ್ರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯ. ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ಕೋವಿಡ್ ಹೆಚ್ಚುವುದಕ್ಕೆ ಸಂಬಂಧಿಸಿದಂತೆ ಚುನಾವಣೆ, ಕುಂಭಮೇಳಕ್ಕೆ ಅವಕಾಶ ನೀಡಿ ಕೇಂದ್ರ ಸರ್ಕಾರ ಎಡವಿತು ಎಂಬ ಆರೋಪಗಳು ಕೇಳಿಬಂದವು. ಆದರೆ, ಇದರಲ್ಲಿ ಸತ್ಯಾಂಶ ಇಲ್ಲ.
ಬಿ.ಎಲ್. ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ