ತಿಂಗಳಲ್ಲಿ 15,000 ಶಿಕ್ಷಕರ ಆಯ್ಕೆ ಪಟ್ಟಿ: ಸಚಿವ ನಾಗೇಶ್‌

By Kannadaprabha NewsFirst Published Aug 25, 2022, 12:00 AM IST
Highlights

ಹೋಬಳಿಗೊಂದು ಮಾದರಿ ಶಾಲೆಗಳನ್ನು ಆರಂಭಿಸಿ ಅವುಗಳಲ್ಲಿ ನಮ್ಮ ಮಕ್ಕಳಿಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲು ಇಲಾಖೆ ನಿರ್ಧರಿಸಿದೆ: ಬಿ.ಸಿ. ನಾಗೇಶ್‌ 

ಬೆಂಗಳೂರು(ಆ.25): ಸರ್ಕಾರಿ ಶಾಲೆಗಳಲ್ಲಿ 6ರಿಂದ 8ನೇ ತರಗತಿಗೆ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಇನ್ನೊಂದು ತಿಂಗಳಲ್ಲಿ ಆಯ್ಕೆ ಪಟ್ಟಿಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ. ನಗರದ ತಿಮ್ಮಯ್ಯ ರಸ್ತೆಯ ಕಾರ್ಪೊರೇಷನ್‌ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ಇಂಡಿಯನ್‌ ಅಕಾಡೆಮಿ ಸಮೂಹ ಸಂಸ್ಥೆಗಳು’ ದತ್ತು ಪಡೆದ ಸರ್ಕಾರಿ ಮತ್ತು ಬಿಬಿಎಂಪಿ ಶಾಲೆಗಳ ನವೀಕೃತ ಕಟ್ಟಡಗಳ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಅವರು 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿದ ಬಳಿಕ ಇಲಾಖೆಯು ಸಿಇಟಿ ನಡೆಸಿ ಈಗಾಗಲೆ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಿದೆ. ಶಿಕ್ಷಕರ ನೇಮಕಾತಿಗೆ ಆಯ್ಕೆ ಪಟ್ಟಿಸಿದ್ಧಪಡಿಸುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪಟ್ಟಿ ಪ್ರಕಟಿಸಲಾಗುವುದು ಎಂದರು.

KARNATAKA HIGH COURT RECRUITMENT 2022; 150 ಗ್ರೂಪ್-ಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸರ್ಕಾರಿ ಶಾಲೆಗಳಲ್ಲಿ 8 ಸಾವಿರಕ್ಕೂ ಹೆಚ್ಚು ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರಕ್ಕೆ ಶಾಲೆಗಳ ಕಟ್ಟಡ ಕಟ್ಟಿಕೊಡಲು ಸಮಸ್ಯೆ ಇಲ್ಲ. ಆದರೆ, ನಿರ್ವಹಣೆಯಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು, ಶೌಚಾಲಯಗಳ ನಿರ್ವಹಣೆ, ಇಂಗ್ಲಿಷ್‌ ಕಲಿಕಾ ಶಿಕ್ಷಕರ ನೆರವು ನೀಡಲು ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು, ಸಂಘ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸಬೇಕು ಎಂದರು.

ಹೋಬಳಿಗೊಂದು ಮಾದರಿ ಶಾಲೆಗಳನ್ನು ಆರಂಭಿಸಿ ಅವುಗಳಲ್ಲಿ ನಮ್ಮ ಮಕ್ಕಳಿಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲು ಇಲಾಖೆ ನಿರ್ಧರಿಸಿದೆ. 2023-24ನೇ ಸಾಲಿನಲ್ಲಿ ಸುಮಾರು 250 ಶಾಲೆಗಳನ್ನು ಮಾದರಿ ಶಾಲೆಗಳಾಗಿಸಿ ಮಕ್ಕಳಿಗೆ ಸಾರಿಗೆ ಸೌಲಭ್ಯ, ತರಗತಿಗೊಬ್ಬರು ಶಿಕ್ಷಕರು, ಅಗತ್ಯ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತದೆ. ಇದಕ್ಕಾಗಿ ಇಂಗ್ಲಿಷ್‌ ಭಾಷಾ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.

ಶಿಕ್ಷಣ ಸುಧಾರಣೆಗಳ ಸರ್ಕಾರದ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆ ದತ್ತು ಯೋಜನೆಗೆ ರಾಜ್ಯದ ಅನೇಕ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಯೋಜನೆಯಡಿ ಇಂಡಿಯನ್‌ ಅಕಾಡೆಮಿ ಸಮೂಹ ಸಂಸ್ಥೆಯು ಒಟ್ಟು 10 ಶಾಲೆಗಳನ್ನು ದತ್ತು ಪಡೆದಿದ್ದು, ಮೊದಲ ಹಂತದಲ್ಲಿ ಐದು ಶಾಲೆಗಳನ್ನು ಅಭಿವೃದ್ಧಿಪಡಿಸಿದೆ. ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಉಳ್ಳವರು, ದಾನಿಗಳು ಇದೇ ರೀತಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಇಂಡಿಯನ್‌ ಅಕಾಡೆಮಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಟಿ.ಸೋಮಶೇಖರ್‌ ಮತ್ತು ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.  
 

click me!