* ಸರ್ಕಾರ ಪೌರ ಕಾರ್ಮಿಕರ ಪರ ಸಹಾನುಭೂತಿ ಹೊಂದಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲು ಬದ್ಧ
* ಪೌರ ಕಾರ್ಮಿಕ ಸಂಘಟನೆಗಳು ಜು.1ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಕೈ ಬಿಡಬೇಕು
* ಪೌರ ಕಾರ್ಮಿಕರ ಸೇವೆಯನ್ನು ಹಂತ ಹಂತವಾಗಿ ಕಾಯಂಗೊಳಿಸಲು ಕ್ರಮ
ಬೆಂಗಳೂರು(ಜೂ.29): ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 5300 ಪೌರ ಕಾರ್ಮಿಕರ ಹುದ್ದೆಗಳನ್ನು ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಹಾಗೂ ನೇರ ಪಾವತಿ ವೇತನ ಪಡೆಯುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಹಂತ ಹಂತವಾಗಿ ಕಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರ ಪೌರ ಕಾರ್ಮಿಕರ ಪರ ಸಹಾನುಭೂತಿ ಹೊಂದಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿದೆ. ಹೀಗಾಗಿ ಪೌರ ಕಾರ್ಮಿಕ ಸಂಘಟನೆಗಳು ಜು.1ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಕೈ ಬಿಡಬೇಕು. ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ನೌಕರರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ವಿಮೆ ಸೌಲಭ್ಯವನ್ನು ಎಲ್ಲಾ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ನೌಕರರಿಗೂ ಅನ್ವಯವಾಗುವಂತೆ ವಿಸ್ತರಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
undefined
‘ಸಮಾಜ ಕಲ್ಯಾಣ’ದಲ್ಲಿ ಅಗ್ನಿವೀರರಿಗೆ ಮೀಸಲಾತಿ?: ಸಚಿವ ಕೋಟ ಹೇಳಿದ್ದಿಷ್ಟು
2108ರಲ್ಲಿ ರಚಿಸಲಾಗಿರುವ ಪೌರ ಕಾರ್ಮಿಕರ ನೇಮಕಾತಿ ವಿಶೇಷ ನಿಯಮಾವಳಿಗಳನ್ನು ಪುನರ್ ಪರಿಶೀಲಿಸಲು ಅನುಕೂಲವಾಗುವಂತೆ ಈಗಾಗಲೇ ಕರ್ತವ್ಯದಲ್ಲಿರುವ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರ ಸೇವಾ ವಿವರವನ್ನು ಒಂದು ವಾರದೊಳಗಾಗಿ ಸಂಗ್ರಹಿಸಿ ಅಗತ್ಯ ಶಿಫಾರಸುಗಳೊಂದಿಗೆ ಕಡತ ಮಂಡಿಸಬೇಕು. ಅಲ್ಲದೇ, ಪೌರ ಕಾರ್ಮಿಕರ ಇನ್ನುಳಿದ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕಿ ಅರ್ಚನಾ, ಜಂಟಿ ನಿರ್ದೇಶಕ ಶಿವಸ್ವಾಮಿ ಇತರರು ಉಪಸ್ಥಿತರಿದ್ದರು.