ಪದವಿ ಕಾಲೇಜಿಗೆ 1242 ಅಧ್ಯಾಪಕರ ನೇಮಕ

By Kannadaprabha NewsFirst Published Mar 5, 2023, 11:20 AM IST
Highlights

ಕೆಇಎ ಈ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ನೆಟ್‌, ಸ್ಲೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಪರಿಗಣಿಸಲಾಗಿದೆ. ಗರಿಷ್ಠ ಅಂಕ ಗಳಿಸಿದವರು ಸರ್ಕಾರದ ನಿಯಮಗಳನುಸಾರ ರೋಸ್ಟರ್‌ ಮಾನದಂಡದಂತೆ ಅವಕಾಶ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ ಸಂದರ್ಶನ ಪ್ರಕ್ರಿಯೆ ಇರುವುದಿಲ್ಲ. ಇಡೀ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. 

ಬೆಂಗಳೂರು(ಮಾ.05):  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 26 ಬೋಧನಾ ವಿಷಯಗಳ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆಸಲಾದ ಅಂತಿಮ ನೇಮಕಾತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮುಂದಿನ ಪ್ರಕ್ರಿಯೆಗಳಿಗೆ ಅನುಕೂಲವಾಗುವಂತೆ ಮಾ.6 ರಂದು ಸರ್ಕಾರಕ್ಕೆ ಪಟ್ಟಿಸಲ್ಲಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ತಿಳಿಸಿದ್ದಾರೆ.

ಅಂತಿಮ ಪಟ್ಟಿಯಲ್ಲಿ 1,209 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಉಳಿದ 33 ಹುದ್ದೆಗೆ ಸರ್ಕಾರಿ ಮಾನದಂಡಗಳು ಮತ್ತು ಮೀಸಲಾತಿ ನಿಯಮಗಳ ಪ್ರಕಾರ ಸೂಕ್ತ, ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲ. ಆದ್ದರಿಂದ ಈ ಹುದ್ದೆಗಳನ್ನು ಖಾಲಿ ಬಿಡಲಾಗಿದೆ. ಇವುಗಳನ್ನು ಬೇರೆ ವರ್ಗದ ಅಭ್ಯರ್ಥಿಗಳಿಗೆ ಕೊಡಲು ನಿಯಮಗಳ ಪ್ರಕಾರ ಅವಕಾಶವಿಲ್ಲ ಎಂದು ಅವರು ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

KSFC RECRUITMENT 2023: ರಾಜ್ಯ ಹಣಕಾಸು ನಿಗಮದಲ್ಲಿ ಖಾಲಿ ಇರುವ 41 ಹುದ್ದೆಗಳಿಗೆ ಅರ್ಜಿ ಆಹ್ವಾನ

ಖಾಲಿ ಇರುವ ಹುದ್ದೆಗಳಲ್ಲಿ ಜೀವ ರಸಾಯನಶಾಸ್ತ್ರ 1, ಸಸ್ಯಶಾಸ್ತ್ರ 1, ರಸಾಯನಶಾಸ್ತ್ರ 6, ಕಂಪ್ಯೂಟರ್‌ ಸೈನ್ಸ್‌ 3, ಅರ್ಥಶಾಸ್ತ್ರ 4, ಫ್ಯಾಷನ್‌ ತಂತ್ರಜ್ಞಾನ 1, ಹಿಂದಿ 1, ಇತಿಹಾಸ 2, ಗಣಿತ 4, ಮೈಕ್ರೋಬಯಾಲಜಿ 2, ಭೌತಶಾಸ್ತ್ರ 1, ರಾಜ್ಯಶಾಸ್ತ್ರ 2, ಸ್ಟ್ಯಾಟಿಟಿಕ್ಸ್‌ 1 ಮತ್ತು ಉರ್ದು ವಿಷಯದಲ್ಲಿ 4 ಹುದ್ದೆಗಳು (ಒಟ್ಟು 33) ಇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಂದರ್ಶನ ಇಲ್ಲ:

ಕೆಇಎ ಈ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ನೆಟ್‌, ಸ್ಲೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಪರಿಗಣಿಸಲಾಗಿದೆ. ಗರಿಷ್ಠ ಅಂಕ ಗಳಿಸಿದವರು ಸರ್ಕಾರದ ನಿಯಮಗಳನುಸಾರ ರೋಸ್ಟರ್‌ ಮಾನದಂಡದಂತೆ ಅವಕಾಶ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ ಸಂದರ್ಶನ ಪ್ರಕ್ರಿಯೆ ಇರುವುದಿಲ್ಲ. ಇಡೀ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ನೇಮಕವಾದವರಲ್ಲಿ 522 ಅಭ್ಯರ್ಥಿಗಳು ನೆಟ್‌(ಎನ್‌ಇಟಿ), 609 ಮಂದಿ ಸ್ಲೆಟ್‌ (ಎಸ್‌ಎಲ್‌ಇಟಿ), 78 ಮಂದಿ ಪಿಎಚ್‌ಡಿ ಮಾಡಿದವರು ಇದ್ದಾರೆ.

ಪ್ರಾಧಿಕಾರಕ್ಕೆ ಸಚಿವ ಡಾ.ಅಶ್ವತ್ಥ್‌ ಮೆಚ್ಚುಗೆ

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ನಡೆಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದಕ್ಷತೆಯು ಅಭಿನಂದನಾರ್ಹವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಎಷ್ಟೋ ವರ್ಷಗಳಿಂದ ನಡೆದೇ ಇಲ್ಲ. ಇದು ಬೋಧನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿತ್ತು. ಇದನ್ನು ಪರಿಗಣಿಸಿ, ಸರ್ಕಾರ ಈ ನೇಮಕಾತಿ ನಡೆಸುವ ನಿರ್ಧಾರ ತೆಗೆದುಕೊಂಡಿತು. ಈ ಪ್ರಕ್ರಿಯೆಯನ್ನು ಯಾವ ಅಕ್ರಮಕ್ಕೂ ಆಸ್ಪದ ಕೊಡದಂತೆ ನಡೆಸಲಾಗಿದೆ. ಇದರ ಲಾಭ ವಿದ್ಯಾರ್ಥಿ ಸಮುದಾಯಕ್ಕೆ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

click me!