ಪಿಎಸ್‌ಐ ಹಗರಣ ಎಫೆಕ್ಟ್, ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ಫುಲ್ ಸ್ಟ್ರಿಕ್ಟ್

By Suvarna NewsFirst Published May 21, 2022, 1:48 PM IST
Highlights

* ಪಿಎಸ್‌ಐ ನೇಮಕಾತಿ ಹಗರಣದ ಎಫೆಕ್ಟ್ 
* ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ಫುಲ್ ಸ್ಟ್ರಿಕ್ಟ್
* ಶಿಕ್ಷಕರ ಹುದ್ದೆಗೆ ನಡೆದ ನೇಮಕಾತಿ ಪರೀಕ್ಷೆ

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು, (ಮೇ.21)
: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಇಂದು ಮತ್ತು ನಾಳೆ(ಮೇ.21, 22) ಪರೀಕ್ಷೆ ನಡೆಯುತ್ತಿವೆ. 6ರಿಂದ 8 ನೇ ತರಗತಿಯ ಶಿಕ್ಷಕರಾಗಿ ಆಯ್ಕೆಯಾಗಲು 15 ಸಾವಿರ ಹುದ್ದೆಗಳಿಗೆ 1 ಲಕ್ಷ 50 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ‌ಮಾಡಿದ್ದಾರೆ. ರಾಜ್ಯದ 435 ಪರೀಕ್ಷಾ ಕೇಂದ್ರದಲ್ಲಿ ಇಂದು(ಶನಿವಾರ) ಅಭ್ಯರ್ಥಿಗಳ ಪರೀಕ್ಷೆಗೆ ಹಾಜರಾದ್ರು.

ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಹಗರಣ ಮತ್ತು ಉಪನ್ಯಾಸಕರ ಪರೀಕ್ಷೆಯಲ್ಲಿ ಅಕ್ರಮ ಭಾರೀ ಸದ್ದು ಮಾಡಿತ್ತು. ಹೀಗಾಗಿ ಶಿಕ್ಷಕರ ನೇಮಕಾತಿಯಲ್ಲಿ ಅಂತಹ ಅಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಶಿಕ್ಷಣ ಇಲಾಖೆ ಹತ್ತಾರು ಹೊಸ ಮಾದರಿಯ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಗುತ್ತಿದೆ.

ಇಂದು 15,000 ಶಿಕ್ಷಕರ ನೇಮಕ ಪರೀಕ್ಷೆ: ಎಕ್ಸಾಂ ಮೇಲೆ ಕಠಿಣ ಕಣ್ಗಾವಲು

ಶಿಕ್ಷಕರ ನೇಮಕಾತಿ ಪರೀಕ್ಷೆಗಾಗಿ ತ್ರಿಸದಸ್ಯ ಸಮಿತಿ ರಚನೆ: 
ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ರೀತಿಯಲ್ಲಿ ಅಕ್ರಮ ನಡೆಯಬಾರದು. ಅಭ್ಯರ್ಥಿಗಳಿಗೆ ನೌಕರಿ ಸಿಗಬೇಕು. ಪರೀಕ್ಷೆ ವೇಳೆಯಲ್ಲಿ ಅಕ್ರಮಕ್ಕೆ ಅವಕಾಶವಾಗದಂತೆ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ತ್ರಿಸದಸ್ಯ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಜಿ.ಪಂ. ಸಿಇಒಗಳಿಗೆ ಪರೀಕ್ಷೆಯ ಜವಾಬ್ದಾರಿ ನೀಡಲಾಗಿದೆ. 

ಅಭ್ಯರ್ಥಿಗಳಿಗೆ ಮೆಟಲ್ ‌ಡಿಟೆಕ್ಟರ್‌ನಿಂದ ತಪಾಸಣೆ
ಕೇಂದ್ರ ಸರ್ಕಾರದ ಪರೀಕ್ಷೆ ವೇಳೆಯಲ್ಲಿ ಮಾತ್ರ ಅಭ್ಯರ್ಥಿಗಳಿಗೆ ಮೆಟಲ್ ಡಿಟೆಕ್ಟರ್ ‌ನಿಂದ ತಪಾಸಣೆ ‌ಮಾಡಿ ಪರೀಕ್ಷೆ ಕೋಣೆ ಬಿಡಲಾಗುತ್ತಿತ್ತು. ಹೀಗಾಗಿ PSI ನೇಮಕಾತಿ ವೇಳೆಯಲ್ಲಿ ಅಕ್ರಮವಾಗಿ ‌ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆದಿರುವುದು ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ‌ ಶಿಕ್ಷಕರ ನೇಮಕಾತಿಯಲ್ಲಿ ಆ ತಪ್ಪು ನಡೆಯಬಾರದು ಎಂದು ಶಿಕ್ಷಣ ಇಲಾಖೆ ಪೊಲೀಸರ ‌ನೆರವಿನೊಂದಿಗೆ ಪರೀಕ್ಷೆ ಕೇಂದ್ರಕ್ಕೆ ಬರುವ  ಅಭ್ಯರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಮೆಟಲ್ ಡಿಟೆಕ್ಟರ್ ‌ನಿಂದ ಕಿವಿ, ತಲೆ ಮತ್ತು ದೇಹದ ವಿವಿಧ ಭಾಗಗಳನ್ನು ತಪಾಸಣೆ ‌ಮಾಡಲಾಯ್ತು.

ಪರೀಕ್ಷೆ ಕೋಣೆಯಲ್ಲಿ ವಾಚ್‌ಗೂ ನಿಷೇಧ
ಪಿಐಎಸ್ ನೇಮಕಾತಿ ವೇಳೆಯಲ್ಲಿ ‌ನಡೆದ ಅಕ್ರಮದಿಂದಾಗಿ ಶಿಕ್ಷಣ ಇಲಾಖೆ ಹತ್ತಾರು ಹೊಸ ರೂಲ್ಸ್ ಗಳು ಜಾರಿ ಮಾಡಿ ಶಿಕ್ಷಕರ ನೇಮಕಾತಿ ಪರೀಕ್ಷೆ ಮಾಡುತ್ತಿದೆ. ಹೀಗಾಗಿ ಪರೀಕ್ಷೆ ಕೇಂದ್ರದಲ್ಲಿ ಬ್ಯಾಗ್, ವಾಚ್ ಹಾಗೂ ಬ್ಲೂಟೂತ್, ಕ್ಯಾಲ್ಕುಲೇಟರ್ ಹಾಗೂ ಮೊಬೈಲ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. 

6 ದಿನದ ನವಜಾತ ಶಿಶು ಸಮೇತ ಪರೀಕ್ಷೆಗೆ ಬಂದ ತಾಯಿ  
ಕಳೆದ 3-4 ವರ್ಷಗಳ ಬಳಿಕ ಶಿಕ್ಷಕರ ನೇಮಕಾತಿಗಾಗಿ  ಇಂದು ಮತ್ತು ‌ನಾಳೆ ಸಿಇಟಿ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ 3 ವರ್ಷಗಳ ಹಿಂದೆ ಟಿಇಟಿ ಪಾಸಾಗಿದ್ದ ತಾಯಿಯೊಬ್ಬಳು 6 ದಿನಗಳ‌ ಹಿಂದೆ ಹುಟ್ಟಿದ  ನವಜಾತ ಶಿಶುವನ್ನು ತೆಗೆದುಕೊಂಡು ಬಂದು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.  ಕೊಪ್ಪಳ ಜಿಲ್ಲೆ ಕಾರಟಿಗಿ ತಾಲೂಕಿನ ‌ಗೂಡೂರುನಿಂದ ಪರೀಕ್ಷೆಗೆ ಬಂದ ಅಭ್ಯರ್ಥಿ ಜ್ಯೋತಿ ತನ್ನ ನವಜಾತ ಶಿಶುವನ್ನು ಪರೀಕ್ಷೆ ‌ಕೇಂದ್ರದ ಹೊರಗಡೆ ಗಂಡ ಮತ್ತು ಅತ್ತೆ ಕೈಯಲ್ಲಿ ಮಗುವನ್ನು ಬಿಟ್ಟು ಪರೀಕ್ಷೆ ಕೇಂದ್ರಕ್ಕೆ ತೆರಳಿದರು. ಇತ್ತ ತಾಯಿ ಪರೀಕ್ಷೆ ಕೇಂದ್ರಕ್ಕೆ ಹೋಗುತ್ತಿದ್ದಂತ ನವಜಾತ ಶಿಶು ಅಳಲು ಶುರು ಮಾಡಿತ್ತು. ನವಜಾತ ಶಿಶುವನ್ನ ‌ಸಮಾಧಾನ ಮಾಡಲು  ಕುಟುಂಬಸ್ಥರು ಹರಸಾಹಸ ಪಟ್ಟರು.

ಒಟ್ಟಾರೆ PSI ಅಕ್ರಮ ನೇಮಕಾತಿ ಬಳಿಕ ಮೊದಲ ಬಾರಿಗೆ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಸಿದ್ದು, ಶಿಕ್ಷಣ ಇಲಾಖೆ ಹತ್ತಾರು ಹೊಸ ಕ್ರಮಗಳನ್ನು ಕೈಗೊಂಡು ಪರೀಕ್ಷೆ ‌ನಡೆಸುತ್ತಿದೆ.

click me!