10,611 ಪ್ರಾಥಮಿಕ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ

By Web DeskFirst Published Mar 7, 2019, 8:59 AM IST
Highlights

10,611 ಪ್ರಾಥಮಿಕ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ |  ಮಾ.11 ರಿಂದ ಏ.10 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ |  ಮೇ ತಿಂಗಳಲ್ಲಿ ಪರೀಕ್ಷೆ
 

 ಬೆಂಗಳೂರು (ಮಾ. 07):  ಹತ್ತು ಸಾವಿರ ಶಿಕ್ಷಕರನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಮಾ.11ರಿಂದ ಏ.10ರ ವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹೈದರಾಬಾದ್‌- ಕರ್ನಾಟಕ ಆರು ಜಿಲ್ಲೆಗಳು ಸೇರಿದಂತೆ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ ‘ಪದವೀಧರ ಪ್ರಾಥಮಿಕ ಶಿಕ್ಷಕ (6ರಿಂದ 8ನೇ ತರಗತಿ) ವೃಂದ’ದ 10,611 ಖಾಲಿ ಹುದ್ದೆಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ನೇರ ಮತ್ತು ವೃಂದ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಕೇಂದ್ರೀಕೃತ ಘಟಕದ ವೆಬ್‌ಸೈಟ್‌ನಲ್ಲಿ ಮಾ.11ರಿಂದ ಏ.10ರ ವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪರೀಕ್ಷಾ ದಿನಾಂಕ:

ಹೈ-ಕ ಪ್ರದೇಶದ ಜಿಲ್ಲೆಗಳ ಶೇ.80ರ ಸ್ಥಳೀಯ ವೃಂದ ಮತ್ತು ಬಿಬಿಎಂಪಿ ಪ್ರದೇಶದ ವ್ಯಾಪ್ತಿಯ ಶಾಲೆಗಳ ಶೇ.8ರ ರಾಜ್ಯ ಮಟ್ಟದ ಸ್ಥಳೀಯ ವೃಂದದ ಹುದ್ದೆಗಳಿಗೆ ಮೇ 18 ಮತ್ತು 19ರಂದು ಪರೀಕ್ಷೆ ನಡೆಯಲಿದೆ. ಹೈ-ಕ ಪ್ರದೇಶದ ಜಿಲ್ಲೆಗಳ ಶೇ.20 ಮತ್ತು ಬಿಬಿಎಂಪಿ ಪ್ರದೇಶದ ವ್ಯಾಪ್ತಿಯ ಶಾಲೆಗಳ ಶೇ.92 ವೃಂದ ಹಾಗೂ ಇತರೆ ಜಿಲ್ಲೆಗಳ ಶೇ.100 ಹುದ್ದೆಗಳಿಗೆ ಮೇ 25 ಮತ್ತು 26ರಂದು ಪರೀಕ್ಷೆ ನಡೆಯಲಿದೆ.

ನೇಮಕಾತಿ ನಿಯಮಗಳು, ಮೀಸಲಾತಿ ನಿಯಮಗಳು ಮತ್ತು ಕಾಲಕಾಲಕ್ಕೆ ಹೊರಡಿಸಿರುವ ಸರ್ಕಾರದ ಆದೇಶಗಳ ಪ್ರಕಾರ ನೇಮಕಾತಿ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್‌ಸೈಟ್‌  schooleducation.kar.nic.in ನಲ್ಲಿ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು ಎಂದು ಇಲಾಖೆ ಆಯುಕ್ತರಾದ ಪಿ.ಸಿ. ಜಾಫರ್‌ ತಿಳಿಸಿದ್ದಾರೆ.

click me!