Hampi Kannada University| ನೇಮಕಾತಿ ಪ್ರಕ್ರಿಯೆಗೆ ಆಕ್ಷೇಪ..!

Kannadaprabha News   | Asianet News
Published : Nov 13, 2021, 12:34 PM ISTUpdated : Nov 13, 2021, 12:46 PM IST
Hampi Kannada University| ನೇಮಕಾತಿ ಪ್ರಕ್ರಿಯೆಗೆ ಆಕ್ಷೇಪ..!

ಸಾರಾಂಶ

*  ಕನ್ನಡ ವಿವಿ ಅಧ್ಯಾಪಕರ ಸಂಘದಿಂದಲೇ ಚಕಾರ *  ನೇಮಕಾತಿ ಪ್ರಕ್ರಿಯೆಗೂ ಆಕ್ಷೇಪ *  ವಿವಿಯಲ್ಲಿ ನ. 16ರಂದು ಅಧ್ಯಾಪಕರ ತುರ್ತು ಸಭೆ  

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ನ.13):  ಕನ್ನಡ(Kannada) ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಜನ್ಮ ತಳೆದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ(Hampi Kannada University) ತನ್ನ ಆಶಯದಿಂದ ವಿಮುಖವಾಗಿದೆಯೇ? ಎಂಬ ವಿಚಾರ ಈಗ ತಲೆ ಎತ್ತಿದೆ.

ಕನ್ನಡ ವಿವಿಯ ಈಗಿನ ಕಾರ್ಯವೈಖರಿ ಬಗ್ಗೆ ಹೊರಗಿನವರು ಹೇಳುವುದಕ್ಕಿಂತ ಸ್ವತಃ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘವೇ(Teachers' Association) ಈ ಕುರಿತು ಚಕಾರವೆತ್ತಿದೆ. ನ. 11ರಂದು ಸಂಘದ ಸರ್ವ ಸದಸ್ಯರಿಗೆ ಮೂರು ಪುಟದ ಪತ್ರವನ್ನು ಬರೆದಿರುವ ಸಂಘದ ಅಧ್ಯಕ್ಷ ಡಾ. ವಾಸುದೇವ ಬಡಿಗೇರ ಮತ್ತು ಕಾರ್ಯದರ್ಶಿ ಡಾ. ವಿಠಲರಾವ್‌ ಗಾಯಕ್ವಾಡ ಅವರು, ವಿವಿಯಲ್ಲಿನ ಬೆಳವಣಿಗೆ ಕುರಿತು ಪತ್ರದಲ್ಲಿ(Letter) ಉಲ್ಲೇಖಿಸಿದ್ದಾರೆ.
ಅಲ್ಲದೇ ನ. 16ರಂದು ಬೆಳಗ್ಗೆ 11 ಗಂಟೆಗೆ ವಿವಿಯ ಭುವನ ವಿಜಯ ಕಟ್ಟಡದಲ್ಲಿ ಸರ್ವ ಸದಸ್ಯರ ಸಭೆ(All Members Meeting) ಕರೆಯಲಾಗಿದೆ ಎಂದು ತಿಳಿಸಿದ್ದಾರೆ. ಈ ಪತ್ರದಲ್ಲಿ ಕೆಲ ಗಂಭೀರ ವಿಚಾರವನ್ನೂ ಎತ್ತಲಾಗಿದೆ. ಹಾಗಾಗಿ ಕನ್ನಡ ವಿವಿ ಸ್ಥಿತಿ ಸದ್ಯ ಸರಿಯಾಗಿಲ್ಲ ಎಂಬುದು ಈ ಪತ್ರದಿಂದಲೇ ತಿಳಿಯುತ್ತದೆ. ಈ ಪತ್ರ ‘ಕನ್ನಡಪ್ರಭ’ಕ್ಕೂ(Kannada Prabha) ಲಭ್ಯವಾಗಿದೆ.

ಹಂಪಿ ಕನ್ನಡ ವಿವಿ: ಯುಜಿಸಿ ಪರವಾನಗಿ ಇಲ್ಲದೇ ಕೋರ್ಸ್‌ ಆರಂಭ..?

ಪತ್ರದಲ್ಲಿ ಏನಿದೆ?:

ಅಖಂಡ ಕರ್ನಾಟಕದ(Undevided Karnataka) ಪರಿಕಲ್ಪನೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ವಿಶ್ವಕೋಶ, ದೇವಾಲಯ ಕೋಶ, ಮಹಾಕಾವ್ಯ, ಚರಿತ್ರೆ, ಶಾಸನ ಸಂಪುಟಗಳಂತಹ ಅನೇಕ ಯೋಜನೆಗಳನ್ನು ನಿರ್ವಹಿಸಿ ಪ್ರಕಟಿಸುತ್ತ ಬಂದಿದೆ. ಇದುವರೆಗೂ ಬೆಳಕು ಕಾಣದ ಅಂಶಗಳನ್ನು, ನಿರ್ಣಯಕ್ಕೆ ಬರಲು ಸಾಧ್ಯವಾಗದ ಅನೇಕ ಸಮಸ್ಯೆಗಳನ್ನು ಸಂಶೋಧನೆಯ(Research) ಮೂಲಕ ಪರಿಹರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಸಮಾಜಮುಖಿ ಅನೇಕ ಯೋಜನೆಗಳನ್ನು, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳ ಸಂಸ್ಕೃತಿ ಮತ್ತು ಪ್ರತಿಭಾವಂತ ವ್ಯಕ್ತಿಗಳನ್ನು ನಾಡಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತ ಬಂದಿದೆ. ಮೇಲಿನ ಅಂಶಗಳನ್ನು ಗಮನಿಸಿದಾಗ ಈಗ ಅವೆಲ್ಲವುಗಳು ಮರೆಯಾಗಿ ಸಾಧಾರಣ ಯೋಜನೆಯನ್ನೂ ನಿರ್ವಹಿಸುವಲ್ಲಿ ಪರದಾಡುವ ಪರಿಸ್ಥಿತಿಗೆ ತಲುಪಿದೆ.

ನಾಡಿನ ಓದುಗರು, ವಿದ್ಯಾರ್ಥಿ- ಸಂಶೋಧಕರ ಆಸಕ್ತಿಯನ್ನು ಹೆಚ್ಚಿಸಿದ್ದ ಪ್ರಕಟಣೆಗಳೂ ನಿಂತು ಹೋಗಿವೆ. ನ್ಯಾಕ್‌(NAAC) ಮಾನ್ಯತೆಯಲ್ಲಿ ಎ ಶ್ರೇಣಿಯಲ್ಲಿದ್ದ ವಿಶ್ವ ವಿದ್ಯಾಲಯ ಬಿ ಶ್ರೇಣಿಗೆ ತಲುಪಿದೆ. ಇದನ್ನು ಹೆಚ್ಚಿಸುವ ಭರವಸೆಯನ್ನೂ ಅಧ್ಯಾಪಕರು ಕಳೆದುಕೊಳ್ಳುವಂತಾಗಿದೆ. ಇದರಿಂದ ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಬಂದಿದ್ದ ದೂರಶಿಕ್ಷಣ ನಿರ್ದೇಶನಾಲಯವೂ(Directorate of Distance Education) ಮಾನ್ಯತೆ ಕಳೆದುಕೊಳ್ಳುವಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪತ್ರದಲ್ಲಿ ಕನ್ನಡ ವಿವಿ ನಿವೃತ್ತ ನೌಕರರ ಉಪಲಬ್ದಿಗಳ ಮೊತ್ತ ಪಾವತಿ, ಮರಣ ಹೊಂದಿದ ನೌಕರರ ಕುಟುಂಬಕ್ಕೆ ಅನುಕಂಪದ ನೌಕರಿ, ಸಹ ಪ್ರಾಧ್ಯಾಪಕರ ಮುಂಬಡ್ತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹೊಸಪೇಟೆ: ತಡರಾತ್ರಿ ಠಾಣೆಯಲ್ಲಿದ್ದ ಹಂಪಿ ವಿವಿ ವಿದ್ಯಾರ್ಥಿನಿಯರು?

ನೇಮಕಾತಿ ಪ್ರಕ್ರಿಯೆ ನಿಲ್ಲಿಸಲು ಆಗ್ರಹ:

ಏತನ್ಮಧ್ಯೆ ಅಧ್ಯಾಪಕರ ಸಂಘದಿಂದ ನ. 12ರಂದು ಕನ್ನಡ ವಿವಿ ಕುಲಸಚಿವ ಡಾ. ಸುಬ್ಬಣ್ಣ ರೈ ಅವರಿಗೆ ಮನವಿಪತ್ರ ಕೂಡ ಸಲ್ಲಿಸಲಾಗಿದೆ. ಕನ್ನಡ ವಿವಿ 2021ರ ಸೆಪ್ಟೆಂಬರ್‌ 3ರಂದು ಬೋಧಕ ಹುದ್ದೆಗಳ ನೇಮಕಾತಿಗೆ(Recruitment) ಅಧಿಸೂಚನೆ ಪ್ರಕಟಿಸಿದ್ದು, ಸರ್ಕಾರದ(Government) ನಿಯಮದನ್ವಯ ಶೇ. 50ರ ನೇರ ಮೀಸಲಾತಿ(Reservation) ಮತ್ತು ಸಮತಲ ಮೀಸಲಾತಿ ಹಾಗೂ ಶೇ. 33 ಮಹಿಳಾ ಮೀಸಲಾತಿ ರೋಸ್ಟರ್‌ ಪಾಲನೆಯಾಗಿರುವುದಿಲ್ಲ. ಜತೆಗೆ ಯುಜಿಸಿ 2018ರ ನಿಯಮದಂತೆ ನೇಮಕಾತಿ ಪರೀಕ್ಷೆ ನಡೆಸಲು ಅವಕಾಶ ಇರುವುದಿಲ್ಲ. ಅದಕ್ಕೆ ಸಂಬಂಧಿಸಿದ ಕನ್ನಡ ವಿಶ್ವವಿದ್ಯಾಲಯ ಅಧಿನಿಯಮ 1991ರ ಅಡಿ ನೇಮಕಾತಿ ಪರಿನಿಯಮವು ಪ್ರಕಟವಾಗಿರುವುದಿಲ್ಲ. ಇಷ್ಟೆಲ್ಲ ಕ್ರಮಲೋಪಗಳಿದ್ದರೂ ನ. 15ರಂದು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ. ಈಗ ಚುನಾವಣೆ(Election) ನೀತಿಸಂಹಿತೆ(Code of Conduct) ಜಾರಿಯಲ್ಲಿರುವುದರಿಂದ ತಕ್ಷಣ ಈ ಪ್ರಕ್ರಿಯೆ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಹಂಪಿ ಕನ್ನಡ ವಿವಿಯಲ್ಲಿ ಕೋವಿಡ್‌(Covid19) ಹಿನ್ನೆಲೆ ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೂ ಮಹನೀಯರ ಜಯಂತಿಗಳನ್ನೇ ವಿಚಾರ ಸಂಕಿರಣಗಳನ್ನಾಗಿಸಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ವಿವಿಯಲ್ಲಿ ಸದ್ಯ ವಿದ್ಯುತ್‌ ಬಿಲ್‌ ಪಾವತಿಗೂ ಹಣವಿಲ್ಲ. ಹಾಗಾಗಿ ಅಕಾಡೆಮಿಕ್‌ಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ನೇಮಕಾತಿಯನ್ನು ನಿಯಮಾನುಸಾರ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಲೋಪವಿಲ್ಲ. ನಿಯಮಗಳ ಪಾಲನೆ ಮಾಡಲಾಗುತ್ತಿದೆ ಎಂದು ಹಂಪಿ ಕನ್ನಡ ವಿವಿ ಕುಲಪತಿಡಾ. ಸ.ಚಿ. ರಮೇಶ ತಿಳಿಸಿದ್ದಾರೆ. 
 

PREV
Read more Articles on
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!