1194 ಉಪನ್ಯಾಸಕ ಹುದ್ದೆ ನೇಮಕ ವಿವಾದ ಹೈಕೋರ್ಟಲ್ಲಿ| ನೇಮಕದ ವಿರುದ್ಧ ಆದೇಶವಾದರೆ ನೇಮಕಾತಿ ರದ್ದು, ಹೀಗಾಗಿ ನೇಮಕಗೊಂಡರೂ ಉಪನ್ಯಾಸಕರು ಅತಂತ್ರ| ಪ್ರಕರಣದ ಅಂತಿಮ ಆದೇಶದವರೆಗೂ ಸೇವಾ ಅಭದ್ರತೆ|
ಎನ್.ಎಲ್. ಶಿವಮಾದು
ಬೆಂಗಳೂರು(ನ.23): ಪದವಿ ಪೂರ್ವ ಕಾಲೇಜುಗಳಲ್ಲಿನ 1194 ಉಪನ್ಯಾಸಕರ ಹುದ್ದೆ ನೇಮಕಾತಿ ಸಂಬಂಧ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೇಮಕಾತಿ ಆದೇಶ ಪಡೆದಿದ್ದರೂ ಹುದ್ದೆಯ ಭದ್ರತೆ ಹೈಕೋರ್ಟ್ ತೀರ್ಪಿನ ಮೇಲೆ ನಿಂತಿರುವುದು ಉಪನ್ಯಾಸಕರನ್ನು ಆತಂಕಗೊಳ್ಳುವಂತೆ ಮಾಡಿದೆ.
undefined
ತಕರಾರು ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿನ 1,203 ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಣೆಯು ತಾನು ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮಧ್ಯಂತರ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಅನುಗುಣವಾಗಿಯೇ ರಾಜ್ಯ ಸರ್ಕಾರ ಈಗ ಷರತ್ತು ವಿಧಿಸಿ ನೇಮಕಾತಿ ಪತ್ರಗಳನ್ನು ವಿತರಿಸಿದೆ. ಈಗ ಹೈಕೋರ್ಟ್‌ನಲ್ಲಿ, 1203 ನೇಮಕಗಳ ಪೈಕಿ 1194 ನೇಮಕಾತಿಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದ್ದು, ಅಂತಿಮ ಆದೇಶ ಹೊರಬಿದ್ದಿಲ್ಲ. ಒಂದು ವೇಳೆ ಅಂತಿಮ ಆದೇಶದಲ್ಲಿ ನೇಮಕಾತಿ ವಿರುದ್ಧವಾಗಿ ತೀರ್ಪು ಬಂದರೆ ಅನೇಕ ಅಭ್ಯರ್ಥಿಗಳ ನೇಮಕಾತಿ ರದ್ದಾಗಲಿದೆ.
‘ಅಂತಿಮ ಆಯ್ಕೆ ಪಟ್ಟಿಯಲ್ಲಿ ಕೆಇಎ ಅನುಸರಿಸುವ ಕ್ರಮ ಕಾನೂನು ಬಾಹಿರವಾಗಿದೆ. ಇದರಿಂದ ಹೈ-ಕ ಹೊರತುಪಡಿಸಿದ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳು ಉದ್ಯೋಗ ವಂಚಿತರಾಗಿದ್ದಾರೆ. ಅರ್ಹತೆ ಇಲ್ಲದ ಹೈ-ಕ ಭಾಗದ ಅಭ್ಯರ್ಥಿಗಳು ಕಾನೂನು ಬಾಹಿರವಾಗಿ ಉದ್ಯೋಗಾವಕಾಶ ಪಡೆದಿದ್ದಾರೆ. ಆದ್ದರಿಂದ ಅಂತಿಮ ಆಯ್ಕೆಯ ಪಟ್ಟಿಯನ್ನು ರದ್ದುಪಡಿಸಬೇಕು. 2019ರ ಜೂನ್ 1ರಂದು ಪ್ರಕಟಿಸಿದ ಸಂಭಾವ್ಯ ಪಟ್ಟಿಪ್ರಕಾರವೇ ನಡೆದುಕೊಳ್ಳುವಂತೆ ಸರ್ಕಾರ ಮತ್ತು ಕೆಇಎಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಸರ್ಕಾರಿ ನೇಮಕಾತಿ: ಹೆಚ್ಚು ಅಂಕ ಇದ್ದರೆ GMನಲ್ಲೇ ಹುದ್ದೆ
ಷರತ್ತು ಏನು?:
ನೇಮಕಾತಿ ನಂತರ ಅಭ್ಯರ್ಥಿ ಯಾವುದೇ ತಪ್ಪು ಮಾಹಿತಿ ನೀಡಿದ್ದು ಭವಿಷ್ಯದಲ್ಲಿ ಕಂಡು ಬಂದಲ್ಲಿ ಅಥವಾ ಮಾಹಿತಿಯನ್ನು ಮುಚ್ಚಿಟ್ಟು ಸೇವೆಗೆ ಸೇರಿರುವುದು ಕಂಡುಬಂದಲ್ಲಿ ನೇಮಕಾತಿಯನ್ನು ರದ್ದುಗೊಳಿಸಲಾಗುತ್ತದೆ. ಮೀಸಲಾತಿಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದಲ್ಲಿ ಸಂಬಂಧಪಟ್ಟಅಭ್ಯರ್ಥಿ ಆಯ್ಕೆಯನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂಬ ಷರತ್ತು ವಿಧಿಸಿ ನೇಮಕಾತಿ ಪತ್ರ ನೀಡಲಾಗಿದೆ. ಮೀಸಲಾತಿ ವರ್ಗದಲ್ಲಿ ನೇಮಕಗೊಂಡಿರುವ ಉಪನ್ಯಾಸಕರ ಸಿಂಧುತ್ವ ಪ್ರಮಾಣ ಪತ್ರಗಳನ್ನು ದೃಢೀಕರಿಸಿ ಸೇವೆಗೆ ಹಾಜರಾಗುವಂತೆ ಸೂಚಿಸಿದೆ. ಇದರಿಂದ ಸರ್ಕಾರದಿಂದ ನೇಮಕಾತಿ ಆದೇಶ ಪತ್ರ ಸಿಕ್ಕಿದೆಯೆಂದು ಬೀಗದೆ, ಪ್ರಕರಣದ ಅಂತಿಮ ಆದೇಶದವರೆಗೂ ಸೇವಾ ಅಭದ್ರತೆಯಲ್ಲಿಯೇ ಕಾರ್ಯ ನಿರ್ವಹಿಸುವಂತಾಗಿದೆ.
ಪ್ರಕರಣದ ಹಿನ್ನೆಲೆ:
2015ರ ಮೇ 8ರಂದು ರಾಜ್ಯ ಪಿಯು ಕಾಲೇಜುಗಳಲ್ಲಿ ಖಾಲಿಯಿದ್ದ ಒಟ್ಟು 1,203 ಉಪನ್ಯಾಸಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಕೆಇಎ ಅಧಿಸೂಚನೆ ಹೊರಡಿಸಿತ್ತು. 2018ರ ನವಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆ ನಡೆದು, 2019ರ ಆಗಸ್ಟ್ 26ರಂದು ಸಂಭ್ಯಾವ ಆಯ್ಕೆ ಪಟ್ಟಿಪ್ರಕಟಿಸಿತ್ತು. 2019ರ ಅ.15ರಂದು ಕನ್ನಡ ಮತ್ತು ಇತರ 18 ವಿಷಯಗಳ ಸಂಬಂಧ ಹಾಗೂ 2019ರ ಅ.25ರಂದು ರಾಜ್ಯಶಾಸ್ತ್ರ ಹಾಗೂ ಇತಿಹಾಸ ವಿಷಯಗಳ ಸಂಬಂಧ ಅಂತಿಮ ಆಯ್ಕೆ ಪಟ್ಟಿಪ್ರಕಟಿಸಿತ್ತು. 2020ರ ನ.20ರಂದು ಆದೇಶ ಪ್ರತಿ ನೀಡಿದೆ.