ಲಾಕ್‌ಡೌನ್‌ ಎಫೆಕ್ಟ್‌: ರಾಜ್ಯದ ಮಾಲ್‌ಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ನಷ್ಟ

By Kannadaprabha NewsFirst Published Jun 14, 2021, 7:26 AM IST
Highlights

* ಕೆಲಸ ಕಳೆದುಕೊಂಡ ಶೇ.30ಕ್ಕೂ ಹೆಚ್ಚು ಮಾಲ್‌ ಸಿಬ್ಬಂದಿ
* ತೆರಿಗೆ ವಿನಾಯ್ತಿ ನೀಡಲು ಸಿಎಂಗೆ ಮಾಲ್‌ ಮಾಲೀಕರ ಪತ್ರ
*  1 ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿ 
 

ಬೆಂಗಳೂರು(ಜೂ.14): ಕೊರೋನಾ ಹರಡುವಿಕೆ ನಿಯಂತ್ರಿಸಲು ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಲಾಕ್‌ಡೌನ್‌, ಜನತಾ ಲಾಕ್‌ಡೌನ್‌, ಸೆಮಿ ಲಾಕ್‌ಡೌನ್‌ ಜಾರಿಯ ಪರಿಣಾಮ ರಾಜ್ಯದಲ್ಲಿನ ಶಾಪಿಂಗ್‌ ಮಾಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ ಶೇ.30ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಇರುವ ಸಣ್ಣ ಮತ್ತು ಬೃಹತ್‌ ಮಾಲ್‌ಗಳಲ್ಲಿ ಸುಮಾರು 3.5 ಲಕ್ಷಕ್ಕೂ ಹೆಚ್ಚು ಮಂದಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಳೆದ ವರ್ಷ ಜಾರಿ ಮಾಡಿದ್ದ ಲಾಕ್‌ಡೌನ್‌ ಪರಿಣಾಮ ಸುಮಾರು 50 ಸಾವಿರ ಮತ್ತು ಪ್ರಸ್ತುತ ಸೆಮಿ ಲಾಕ್‌ಡೌನ್‌ ಜಾರಿ ಪರಿಣಾಮ 50 ಸಾವಿರ ಮಂದಿ ಸೇರಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗಿದ್ದಾರೆ.

ಸಂಕಷ್ಟದಲ್ಲಿ ಮಾಲ್‌ ಮಾಲೀಕರು:

ಬಹುತೇಕ ಮಾಲ್‌ಗಳಲ್ಲಿ ಇರುವ ವಿವಿಧ ಶಾಪ್‌ಗಳ ಮಾಲೀಕರು ಸಾಲ ಮಾಡಿ ನಿರ್ವಹಣೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಜಾರಿಯಿಂದ ವ್ಯಾಪಾರ ವಹಿವಾಟು ಇಲ್ಲದೇ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲ ಮರುಪಾವತಿ, ಸಿಬ್ಬಂದಿಗೆ ವೇತನ ಮತ್ತು ತೆರಿಗೆ ಪಾವತಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಪಿಂಗ್‌ ಸೆಂಟ​ರ್ಸ್‌ ಆಸೋಷಿಯೇಷನ್‌ ಆಫ್‌ ಇಂಡಿಯಾ(ಎಸ್‌ಸಿಎಐ) ತಿಳಿಸಿದೆ.

ಬಿಐಎಸ್‌ನಲ್ಲಿ 28 ಹುದ್ದೆಗಳಿಗೆ ನೇಮಕಾತಿ, ತಿಂಗಳಿಗೆ 87 ಸಾವಿರ ರೂ. ಸಂಬಳ!

ಸರ್ಕಾರಕ್ಕೆ ಪತ್ರ:

ಸಂಕಷ್ಟದಲ್ಲಿರುವ ಮಾಲ್‌ಗಳಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಎಸ್‌ಸಿಎಐ, ಸ್ಥಗಿತವಾಗಿರುವ ಮಾಲ್‌ಗಳ ಪುನರಾರಂಭಕ್ಕೆ ಅವಕಾಶ ಕಲ್ಪಿಸುವಂತೆ ಕೋರಿದೆ. ಕೊರೋನಾ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಿಬ್ಬಂದಿಗೆ ಕೊರೋನಾ ಸೋಂಕು ನಿವಾರಿಸಲು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಮಾಲ್‌ಗಳಲ್ಲಿ ವ್ಯಾಪಾರ ವಹಿವಾಟು ಮುಂದುವರೆಸಲು ಅನುಮತಿ ನೀಡುವಂತೆ ಕೋರಿದೆ.

ತೆರಿಗೆ ವಿನಾಯ್ತಿ ಆಗ್ರಹ:

ವಹಿವಾಟು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ತೆರಿಗೆ ಪಾವತಿಸಲು ಸಾಧ್ಯವಾಗದಂತಾಗಿದೆ. ಗುಜರಾತ್‌ ರಾಜ್ಯದಲ್ಲಿ ತೆರಿಗೆ ಪಾವತಿಗೆ ವಿನಾಯ್ತಿ ನೀಡಿದೆ. ರಾಜ್ಯದಲ್ಲಿಯೂ ಅದೇ ಪದ್ದತಿಯನ್ನು ಜಾರಿ ಮಾಡಬೇಕು. ಜೊತೆಗೆಹಂತ ಹಂತವಾಗಿ ಮಾಲ್‌ಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಡಬೇಕು. 2022ರ ಜನವರಿಯರವರೆಗೆ ಆಸ್ತಿ ತೆರಿಗೆ ಪಾವತಿಗೆ ವಿನಾಯ್ತಿ ನೀಡಬೇಕು. ವಿದ್ಯುತ್‌ ಶುಲ್ಕ ಮನ್ನಾ ಮಾಡಬೇಕು. ಅಸ್ತಿತ್ವದಲ್ಲಿರುವ ಪರವಾನಗಿಗಳು ಎನ್‌ಒಸಿ ನವೀಕರಣ ಶುಲ್ಕ ಮನ್ನಾ ಮಾಡಬೇಕು ಎಂದು ಎಸ್‌ಸಿಎಐ ಕೋರಿದೆ.

ಉದ್ಯಮದ ಬೇಡಿಕೆ

1.ಹಂತಹಂತವಾಗಿ ಮಾಲ್‌ ಪುನಾರಂಭಕ್ಕೆ ಅನುಮತಿ
2.ಆಸ್ತಿ ತೆರಿಗೆ ಪಾವತಿಗೆ ವಿನಾಯ್ತಿ
3.ವಿದ್ಯುತ್‌ ಶುಲ್ಕ ಮನ್ನಾ
 

click me!