‘ಸಮಾಜ ಕಲ್ಯಾಣ’ದಲ್ಲಿ ಅಗ್ನಿವೀರರಿಗೆ ಮೀಸಲಾತಿ?: ಸಚಿವ ಕೋಟ ಹೇಳಿದ್ದಿಷ್ಟು

By Kannadaprabha NewsFirst Published Jun 23, 2022, 11:55 AM IST
Highlights

*  ದೈಹಿಕ ಶಿಕ್ಷಕ/ವಾರ್ಡನ್‌ ಹುದ್ದೆಗಳಲ್ಲಿ 75% ಮೀಸಲಿಗೆ ಚಿಂತನೆ
*  ಪೊಲೀಸ್‌ ಇಲಾಖೆ ತೀರ್ಮಾನ ಬೆನ್ನಲ್ಲೇ ಚಿಂತನೆ
*  ತರಬೇತಿ ಕೇಂದ್ರ ಸ್ಥಾಪನೆ
 

ಉಡುಪಿ(ಜೂ.23):  ಅಗ್ನಿಪಥ ಯೋಜನೆಯಡಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ರಾಜ್ಯದ ಪೊಲೀಸ್‌ ಇಲಾಖೆ ಬಳಿಕ ಇದೀಗ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇಮಕಾತಿ ವೇಳೆಯೂ ಮೀಸಲಾತಿ ನೀಡಲು ಚಿಂತನೆ ನಡೆದಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗ್ನಿಪಥಕ್ಕೆ ಅಗ್ನಿ ಕೊಡುವವರು ಗಲಾಟೆ ಆರಂಭಿಸಿದ್ದಾರೆ. ಅದರ ನಡುವೆಯೂ ಯುವಕರು ಅಗ್ನಿಪಥಕ್ಕೆ ಸೇರಲು ಮುಂದೆ ಬಂದಿದ್ದು, ಅಗ್ನಿವೀರರು ಸೃಷ್ಟಿಯಾಗುತ್ತಿದ್ದಾರೆ. ಈ ಯುವಕರಿಗೆ ಸೇನೆಯಲ್ಲಿ 4 ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದು ಬರುವ ಅಗ್ನಿವೀರರಿಗೆ ರಾಜ್ಯದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮೀಸಲಾತಿಯಡಿ ದೈಹಿಕ ಶಿಕ್ಷಕ ಅಥವಾ ವಾರ್ಡನ್‌ನಂತಹ ಶೇ.75ರಷ್ಟು ಹುದ್ದೆಗಳನ್ನು ನೀಡಲು ಚಿಂತನೆ ನಡೆಸುತ್ತಿದ್ದೇವೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ಕಡತ ಮಂಡಿಸಲಾಗಿದೆ ಎಂದವರು ಹೇಳಿದರು.

ಪಠ್ಯ ವಿಚಾರದಲ್ಲಿ ವಿಪಕ್ಷಗಳಿಂದ ಸುಳ್ಳಿನ ಸರಮಾಲೆ: ಸಚಿವ ಕೋಟ

ಇತ್ತೀಚೆಗಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಅಗ್ನಿಪಥ್‌ ಯೋಜನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಪೊಲೀಸ್‌, ಅಗ್ನಿಶಾಮಕ ದಳ, ಗೃಹ ರಕ್ಷಕ ದಳ ಇನ್ನಿತರೆ ಸೆಕ್ಯುರಿಟಿ ಏಜೆನ್ಸಿಯಲ್ಲಿ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದರು. ಅದರ ಬೆನ್ನಲ್ಲೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಇಲಾಖೆಯ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ತರಬೇತಿ ಕೇಂದ್ರ ಸ್ಥಾಪನೆ

ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಿಂದ ದೇಶದ ಸೇನೆಗೆ ಸೇರುವವರಿಗೆ ಸೂಕ್ತ ತರಬೇತಿ ನೀಡುವ ಕೇಂದ್ರಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಕರಾವಳಿಯ 3 ಜಿಲ್ಲೆಗಳಲ್ಲಿ ರಾಣಿ ಅಬ್ಬಕ್ಕ, ಕೋಟಿ - ಚೆನ್ನಯ್ಯ, ಹೆಂಜ ನಾಯ್ಕರ ಹೆಸರಲ್ಲಿ ಸೇನಾ ಸೇರ್ಪಡೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ತಿಂಗಳೊಳಗೆ ಈ ಕೇಂದ್ರಗಳ ಕಾರ್ಯ ಚಟುವಟಿಕೆ ಆರಂಭವಾಗಲಿದೆ. ಇದು ಕೇಂದ್ರ ಸರ್ಕಾರದ ಅಗ್ನಿಪಥ್‌ ಯೋಜನೆಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
 

click me!