4 ವರ್ಷದಿಂದ ನಡೆಯದ ಎಫ್‌ಡಿಎ, ಎಸ್‌ಡಿಎ ನೇಮಕಾತಿ, 150 ಹುದ್ದೆಗಳ ನೇಮಕಕ್ಕೆ 5 ಲಕ್ಷಕ್ಕೂ ಹೆಚ್ಚು ಅರ್ಜಿ ನಿರೀಕ್ಷೆ!

By Kannadaprabha NewsFirst Published Nov 28, 2023, 8:59 AM IST
Highlights

 ಕೆಪಿಎಸ್‌ಸಿ ನೇಮಕಾತಿ ನಡೆಸುವ ಹುದ್ದೆಗಳ ಪೈಕಿ ಸರ್ಕಾರಿ ನೌಕರಿಯ ಆಕಾಂಕ್ಷಿಗಳನ್ನು ಹೆಚ್ಚು ಆಕರ್ಷಿಸುವ   ಎಸ್‌ಡಿಎ, ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನಾಲ್ಕೂವರೆ ವರ್ಷಗಳು ಕಳೆದಿದ್ದು, ಹೊಸ ಅಧಿಸೂಚನೆಗಾಗಿ ಅಭ್ಯರ್ಥಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಬೆಂಗಳೂರು (ನ.28): ಕೆಪಿಎಸ್‌ಸಿ ನೇಮಕಾತಿ ನಡೆಸುವ ಹುದ್ದೆಗಳ ಪೈಕಿ ಸರ್ಕಾರಿ ನೌಕರಿಯ ಆಕಾಂಕ್ಷಿಗಳನ್ನು ಹೆಚ್ಚು ಆಕರ್ಷಿಸುವ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ, ಎಫ್‌ಡಿಎ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನಾಲ್ಕೂವರೆ ವರ್ಷಗಳು ಕಳೆದಿದ್ದು, ಹೊಸ ಅಧಿಸೂಚನೆಗಾಗಿ ಅಭ್ಯರ್ಥಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

2019ರಲ್ಲಿ ಕೊನೆಯ ಬಾರಿ ಎಸ್‌ಡಿಎ, ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮೂರೂವರೆ ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಅದಾದ ನಂತರ ಎರಡು ಬಾರಿ ಸರ್ಕಾರ ಬದಲಾದರೂ ಒಮ್ಮೆಯೂ ಈ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡಲು ತ್ವರಿತಗತಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿತ್ತು. ತ್ವರಿತಗತಿಯಲ್ಲಿ ನೇಮಕಾತಿ ನಡೆಯುವ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಿದ್ದಾರೆ ಸರ್ಕಾರಿ ಉದ್ಯೋಗಾಕಾಂಕ್ಷಿಗಳು.

Latest Videos

2,000 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಸಜ್ಜು

ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಎಸ್‌ಡಿಎ, ಎಫ್‌ಡಿಎ ಹುದ್ದೆಗಳು ಹೆಚ್ಚು ಆಕರ್ಷಿಸುತ್ತವೆ. ಏಕೆಂದರೆ, ಎಸ್‌ಡಿಎಗೆ ಯಾವುದೇ ವಿಭಾಗದಲ್ಲಿ ಪಿಯು ವ್ಯಾಸಂಗ ಮತ್ತು ಎಫ್‌ಡಿಎಗೆ ಯಾವುದೇ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸಬಹುದು. ವಿಶೇಷವಾಗಿ ಇಂತಹುದೇ ವಿಷಯ, ಭಾಷೆಯನ್ನು ವ್ಯಾಸಂಗ ಮಾಡಿರಬೇಕು ಎಂಬ ಯಾವುದೇ ನಿಯಮ, ಷರತ್ತುಗಳು ಇರುವುದಿಲ್ಲ. ಹೀಗಾಗಿ, ಲಕ್ಷಾಂತರ ಜನ ಅರ್ಜಿ ಸಲ್ಲಿಸುತ್ತಾರೆ.

ವಿವಿಧ ಇಲಾಖೆಗಳಿಂದ ಈಗ ಸುಮಾರು 100ರಿಂದ 150 ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಬಂದಿವೆ. ಕನಿಷ್ಠ 500ರಿಂದ 1 ಸಾವಿರ ಹುದ್ದೆಗಳಾದರೆ ಅರ್ಜಿ ಆಹ್ವಾನಿಸಬಹುದು. ಎಷ್ಟೇ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸಿದರೂ ಸುಮಾರು 5 ಲಕ್ಷ ಅರ್ಜಿಗಳು ಬರುವ ನಿರೀಕ್ಷೆ ಇದೆ. ದೊಡ್ಡ ಮಟ್ಟದ ಪರೀಕ್ಷಾ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಹೀಗಾಗಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಸ್ತಾವನೆಗಳನ್ನು ಕಳುಹಿಸಬಹುದು ಎಂದು ವಿವಿಧ ಇಲಾಖೆಗಳಿಗೆ ಕೋರಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಲತಾ ಕುಮಾರಿ ತಿಳಿಸಿದರು.

ಎಐ ಎಂಜಿನಿಯರಿಂಗ್ ಸರ್ವಿಸಸ್ ನಿಂದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ತಾಂತ್ರಿಕ ಹುದ್ದೆಗಳಿಗೆ ಆದ್ಯತೆ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳನ್ನು ಮುಂದುವರೆಸುವ ಅಗತ್ಯವಿಲ್ಲ. ಹಾಲಿ ಇರುವ ಹುದ್ದೆಗಳನ್ನು ಪುನಾರಚನೆ ಮಾಡಬಹುದು ಅಥವಾ ತಾಂತ್ರಿಕ ಹುದ್ದೆಗಳಿಗೆ ಪರಿವರ್ತಿಸಬಹುದು ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ ತನ್ನ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

2019ರಲ್ಲಿ ಕೊನೆಯ ನೇಮಕಾತಿ; ಕೊನೆಯ ಬಾರಿ 2019ರಲ್ಲಿ 78ಕ್ಕೂ ಹೆಚ್ಚು ಇಲಾಖೆಗಳ 1,050 ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮೂರೂವರೆ ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು.

click me!