
ಬೆಂಗಳೂರು (ಅ.28): ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆಯೇ ಎಂಬ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಎಸ್ಆರ್‌ಪಿ (KSRP) ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಸಾಧಾರಣ ಅಭ್ಯರ್ಥಿಯೊಬ್ಬ, ವಿಎಒ ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಈ ಅನುಮಾನಾಸ್ಪದ ಬೆಳವಣಿಗೆಯ ವಿರುದ್ಧ ಅಭ್ಯರ್ಥಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಮಗ್ರ ತನಿಖೆಗೆ ಆದೇಶಿಸಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಅಕ್ಟೋಬರ್ 4ರಂದು ನಡೆದ ವಿಎಒ ಪರೀಕ್ಷೆಯನ್ನು ಅದೇ ಜಿಲ್ಲೆಯ ಶಂಕರ ಬನ್ನೂರು ಎಂಬ ಅಭ್ಯರ್ಥಿ ಬರೆದಿದ್ದರು. ಈ ಅಭ್ಯರ್ಥಿಯ ಶೈಕ್ಷಣಿಕ ಹಿನ್ನೆಲೆ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ಅಲ್ಲದೆ, ಇತ್ತೀಚೆಗೆ ನಡೆದ ಕೆಎಸ್‌ಆರ್‌ಪಿ ಪರೀಕ್ಷೆಯಲ್ಲಿ ಕೇವಲ 25 ಅಂಕಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದರು. ಆದರೆ, ಕಠಿಣ ಸ್ಪರ್ಧೆ ಇರುವ ವಿಎಒ ಪರೀಕ್ಷೆಯಲ್ಲಿ ದಿಢೀರನೆ 151 ಅಂಕಗಳನ್ನು ಗಳಿಸಿದ್ದು ಹೇಗೆ? ಇಲ್ಲಿ ಪರೀಕ್ಷಾ ಅಕ್ರಮ ಅಥವಾ ಭ್ರಷ್ಟಾಚಾರ ನಡೆದಿದೆಯೇ? ಎಂಬ ಗಂಭೀರ ಅನುಮಾನಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಹಗಲಿರುಳು ಕಷ್ಟಪಟ್ಟು ಓದಿದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಈ ಎಲ್ಲಾ ಗೊಂದಲ ಮತ್ತು ಶಂಕೆಗಳಿಗೆ ತೆರೆ ಎಳೆಯಲು ಮುಂದಾಗಿರುವ ಕೆಇಎ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಪರೀಕ್ಷಾ ಮುಖ್ಯ ಅಧೀಕ್ಷಕರೂ ಆಗಿರುವ ಹಾವೇರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿರುವ ಕೆಇಎ, "ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ನಿಯಮಗಳ ಉಲ್ಲಂಘನೆ ಅಥವಾ ಲೋಪಗಳು ಆಗಿವೆಯೇ ಎಂಬುದನ್ನು ಸಿಸಿಟಿವಿ (CCTV) ವಿಡಿಯೋ ತುಣುಕುಗಳ ಮೂಲಕ ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಬೇಕು. ಒಂದು ವೇಳೆ ಯಾವುದೇ ಅಕ್ರಮ ಸಾಬೀತಾದರೆ ತಕ್ಷಣವೇ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಬೇಕು" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪ್ರಾಧಿಕಾರವು ಪ್ರಾಥಮಿಕವಾಗಿ ತನ್ನ ಸರ್ವರ್ ಹಾಗೂ ದಾಖಲೆಗಳನ್ನು ಪರಿಶೀಲಿಸಿದ್ದು, ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಿದೆ:
ಅಭ್ಯರ್ಥಿಯೇ ಪರೀಕ್ಷೆ ಬರೆದಿದ್ದಾನೆ: ಅರ್ಜಿ ಸಲ್ಲಿಸಿದ ಮೂಲ ಅಭ್ಯರ್ಥಿಯೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು, ಮುಖ ಚಹರೆ (Face Recognition) ತಂತ್ರಜ್ಞಾನದ ಮೂಲಕ ಇದು ದೃಢಪಟ್ಟಿದೆ.
ಒಎಂಆರ್ (OMR) ಶೀಟ್ ನೈಜತೆ: ಅಭ್ಯರ್ಥಿಗೆ ನೀಡಲಾದ ಒಎಂಆರ್ ಶೀಟ್ ಸರಿಯಾಗಿದ್ದು, ಅಕ್ಟೋಬರ್ 5ರಂದೇ ಅದನ್ನು ಸ್ಕ್ಯಾನ್ ಮಾಡಿ ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ದಾಖಲೆಗಳಲ್ಲಿ ವ್ಯತ್ಯಾಸ: ಅಭ್ಯರ್ಥಿಯು 2013ರಲ್ಲೇ ದ್ವಿತೀಯ ಪಿಯುಸಿ ಉತ್ತೀರ್ಣರಾಗಿದ್ದು, ಇದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಡೇಟಾದೊಂದಿಗೆ ಮ್ಯಾಚ್ ಆಗಿದೆ. ಆದರೆ, ಇದೇ ಅಭ್ಯರ್ಥಿ ಕೆಎಸ್‌ಆರ್‌ಪಿ ಅರ್ಜಿಯಲ್ಲಿ ತಾನು 2026ರಲ್ಲಿ ಪಾಸಾಗಿದ್ದೇನೆ ಎಂದು ತಿದ್ದುಪಡಿ ಮಾಡಿಕೊಂಡಿರುವುದು ಸರ್ವರ್‌ನಲ್ಲಿ ದಾಖಲಾಗಿದೆ.
#VaoRecruitmentExam:
#KSRP ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬ ಗ್ರಾಮ ಆಡಳಿತಾಧಿಕಾರಿ (#VAO) ನೇಮಕಾತಿ ಪರೀಕ್ಷೆಯಲ್ಲಿ 151 ಅಂಕಗಳನ್ನು ಹೇಗೆ ಪಡೆದ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಅನುಮಾನಗಳ ಬಗ್ಗೆ #KEA ತನಿಖೆಗೆ ಆದೇಶಿಸಿದೆ.
ಈ ಸಂಬಂಧ ಜಿಲ್ಲಾ ಪರೀಕ್ಷಾ ಮುಖ್ಯ ಅಧೀಕ್ಷಕರೂ ಆದ ಹಾವೇರಿ ಜಿಲ್ಲಾಧಿಕಾರಿಯವರಿಗೆ ಪತ್ರ ವರೆದು ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಏನಾದರು ಲೋಪಗಳು ಆಗಿವೆಯೇ ಎಂಬುದರ ಬಗ್ಗೆ ಸಿಸಿಟಿವಿ ವಿಡಿಯೊ ತುಣುಕುಗಳನ್ನು ನೋಡಿ, ಸಮಗ್ರವಾಗಿ ವಿಚಾರಣೆ ನಡೆಸಿ ವರದಿ ನೀಡಲು ಕೋರಲಾಗಿದೆ. ಅಗತ್ಯ ಬಿದ್ದರೆ ಪೊಲೀಸರಿಗೆ ದೂರು ಕೊಡುವುದಕ್ಕೂ ಸೂಚಿಸಲಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಅ.4ರಂದು ನಡೆದ VAO ಪರೀಕ್ಷೆಯನ್ನು ಅದೇ ಜಿಲ್ಲೆಯ ಶಂಕರ ಬನ್ನೂರು ಎಂಬುವರು ಬರೆದಿದ್ದಾರೆ. ಇವರ ಶೈಕ್ಷಣಿಕ ಹಿನ್ನೆಲೆ ಕೂಡ ಹೇಳಿಕೊಳ್ಳುವಂತಿಲ್ಲ. ಅಂತಹ ಮಾಮೂಲಿ ಅಭ್ಯರ್ಥಿ ಇಷ್ಟೊಂದು ಅಂಕ ಹೇಗೆ ಪಡೆದ? ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ, ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಸಿದ್ದಾರೆ. ಈ ಅನುಮಾನಗಳಿಗೆ ಇತಿಶ್ರೀ ಹಾಡಲು ತನಿಖೆಯ ತೀರ್ಮಾನ ಮಾಡಲಾಗಿದೆ.
ಪ್ರಾಧಿಕಾರದಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ಅರ್ಜಿ ಹಾಕಿದ್ದ ಅಭ್ಯರ್ಥಿಯೇ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆದಿದ್ದಾರೆ. ಇದು ಮುಖ ಚಹರೆ ತಂತ್ರಜ್ಞಾನದ ಮೂಲಕ ದೃಢೀಕರಣ ಕೂಡ ಆಗಿದೆ. ಅಭ್ಯರ್ಥಿಗೆ ಕೊಟ್ಟಿರುವ ಒಎಂಅರ್ ಕೂಡ ಸರಿ ಇದೆ. ಅಲ್ಲದೆ ಅದೇ ಒಎಂಆರ್ ಅನ್ನು ಅ.5ರಂದು ಸ್ಕ್ಯಾನ್ ಮಾಡಿ ಕೆಇಎ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಇದಾರಚೆಗೆ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಏನಾದರು ಲೋಪಗಳು ಆಗಿವೆಯೇ ಎಂಬುದನ್ನು ಅಲ್ಲಿನ ಜಿಲ್ಲಾಧಿಕಾರಿಯೇ ಪರಿಶೀಲಿಸಿ ವರದಿ ನೀಡಬೇಕಾಗಿದೆ.
ಸದರಿ ಅಭ್ಯರ್ಥಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವುದು 2013ರಲ್ಲಿ. ಇದು ವಿಎಒ ಹುದ್ದೆಗೆ ಅರ್ಜಿ ಹಾಕಿದ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ದತ್ತಾಂಶದ ಜತೆ ಆನ್ ಲೈನ್ ನಲ್ಲಿ ಹೊಂದಾಣಿಕೆ ಆಗಿದೆ. ಅದರೆ ಕೆಎಸ್ಆರ್ ಪಿ ಅರ್ಜಿಯಲ್ಲಿ ಇದೇ ಅಭ್ಯರ್ಥಿ ತಾನು ಉತ್ತೀರ್ಣನಾಗಿದ್ದು 2026ರಲ್ಲಿ ಎಂದು ತಿದ್ದುಪಡಿ ಮಾಡಿಕೊಂಡಿರುವುದೂ ಪ್ರಾಧಿಕಾರದ ಸರ್ವರ್ ನಲ್ಲಿ ದಾಖಲಾಗಿದೆ.
ಕಷ್ಟಪಟ್ಟು ಓದುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗಬಾರದೆಂದು ನೂರಕ್ಕೆ ನೂರು ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಪ್ರಾಧಿಕಾರವು ಕಳೆದೆರಡು ವರ್ಷಗಳಿಂದ ಒಎಂಆರ್ ಪ್ರತಿ ಸ್ಕ್ಯಾನ್ ಮಾಡಿ ವೆಬ್ ಸೈಟ್ ಗೆ ಹಾಕುವುದು ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆಯೂ ಏನಾದರು ಲೋಪಗಳಿದ್ದರೆ ಅವುಗಳನ್ನು ಬಯಲಿಗೆಳೆದು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಈ ತನಿಖೆ ಸಹಕಾರಿಯಾಗಲಿದೆ. ಈ ಕಾರಣಕ್ಕೇ ತನಿಖೆಗೆ ಆದೇಶ ನೀಡಲಾಗಿದೆ.
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಈ ಪ್ರಕರಣ ಕುರಿತು #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಅವರು KEA ವಿಕಸನ ಯೂಟ್ಯೂಬ್ ಚಾನೆಲ್ ಜತೆ ಮಾತನಾಡಿದ್ದಾರೆ. ಅದರ ಲಿಂಕ್ ಇಲ್ಲಿದೆ ನೋಡಿ.
https://t.co/OdVSW1YHqe
@CMofKarnataka
@brayareddi
@S_PrakashPatil
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) October 28, 2026
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್, 'ಕಷ್ಟಪಟ್ಟು ಓದುವ ಅರ್ಹ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಪರೀಕ್ಷೆಗಳನ್ನು ಶೇ. 100ರಷ್ಟು ಪಾರದರ್ಶಕವಾಗಿ ನಡೆಸಲು ಕಳೆದ 2 ವರ್ಷಗಳಿಂದ ಒಎಂಆರ್ ಪ್ರತಿಗಳನ್ನು ಸ್ಕ್ಯಾನ್ ಮಾಡಿ ವೆಬ್‌ಸೈಟ್‌ಗೆ ಹಾಕುವುದು ಸೇರಿದಂತೆ ಹತ್ತು ಹಲವು ಕ್ರಾಂತಿಕಾರಿ ಕ್ರಮಗಳನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯ ನಡುವೆಯೂ ಪರೀಕ್ಷಾ ಕೇಂದ್ರದಲ್ಲಿ ಏನಾದರೂ ಸ್ಥಳೀಯ ಲೋಪಗಳಾಗಿದ್ದರೆ, ಅದನ್ನು ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿಯೇ ಈ ತನಿಖೆಗೆ ಆದೇಶಿಸಲಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.